More

    ಸೋಂಕಿತರ ಜತೆ ವೈದ್ಯರು, ನರ್ಸ್‌ಗಳ ಡಾನ್ಸ್

    ತುಮಕೂರು : ಕರೊನಾ ಸೋಂಕಿತರು ಆತಂಕದಲ್ಲಿಯೇ ಆಸ್ಪತ್ರೆಗೆ ಬರುತ್ತಿದ್ದು, ಪ್ರತಿನಿತ್ಯ ಸಾವುಗಳನ್ನು ನೋಡಿ ಆತಂಕಿತರಾಗುವುದು ಸಾವಿನ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸೋಂಕಿತರು ಗುಣವಾಗಲು ಆತ್ಮಸ್ಥೈರ್ಯವೇ ಉತ್ತಮ ಔಷಧವಾಗಿದ್ದು ಈ ನಿಟ್ಟಿನಲ್ಲಿ ತುಮಕೂರು ಜಿಲ್ಲಾಸ್ಪತ್ರೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

    ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ 45ಕ್ಕೂ ಹೆಚ್ಚು ಸಿಬ್ಬಂದಿಗೆ ಕರೊನಾ ಸೋಂಕು ದೃಢವಾಗಿದೆ, ಈಗಿರುವ ಕಡಿಮೆ ಸಿಬ್ಬಂದಿಯೇ ಜಿಲ್ಲೆಯ ಕರೊನಾ ಸೋಂಕಿತರ ಚಿಕಿತ್ಸೆಗೆ ಟೊಂಕಕಟ್ಟಿ ನಿಂತಿದ್ದು ಇತ್ತೀಚೆಗೆ ಸೋಂಕಿತರ ಜತೆ ಮಾಡಿರುವ ನೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
    ಜಿಲ್ಲಾಸ್ಪತ್ರೆ ಐಸಿಯು ವಾರ್ಡ್‌ನಲ್ಲಿ ಕರೊನಾ ಸೋಂಕಿತರ ಆತ್ಮಬಲ ವೃದ್ಧಿಗೆ ಮ್ಯೂಸಿಕ್ ಥೆರಪಿ ನಡೆಯುತ್ತಿದೆ, ಪ್ರತಿದಿನ ಹಾಡು ಹಾಕಿ, ಆ ಹಾಡಿಗೆ ತಾಳ ಹಾಕಿ, ಹೆಜ್ಜೆ ಹಾಕುತ್ತಾ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದು ರೋಗಿಗಳು ಉತ್ಸಾಹದಿಂದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

    ಐಸಿಯು ವಾರ್ಡ್ ಮೇಲ್ವಿಚಾರಕಿ ಯಶೋದಾ, ಡಾ.ಸುಷ್ಮಾ, ಸಿಬ್ಬಂದಿ ವಿಜಯ್, ವಿದ್ಯಾ ಸೇರಿ ಐಸಿಯು ವಾರ್ಡ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ನಾನಾ ಸಿಬ್ಬಂದಿ ಹಾಡಿಗೆ ಹೆಜ್ಜೆ ಹಾಕಿ ಸೋಂಕಿತರಿಗೆ ಉತ್ಸಾಹ ತುಂಬಿದ್ದಾರೆ.

    ಕರೊನಾ ಸೋಂಕಿತರಿಗೆ ಚಿಕಿತ್ಸೆ ಜತೆಗೆ ಧೈರ್ಯವೂ ಮುಖ್ಯವಾಗಿದೆ. ಸಿಬ್ಬಂದಿ ಸಂಗೀತ, ನೃತ್ಯದ ಮೂಲಕ ಸೋಂಕಿತರಲ್ಲಿ ಉತ್ಸಾಹ ತುಂಬಿರುವುದು ಒಳ್ಳೆಯ ಬೆಳವಣಿಗೆ, ಒಂಟಿತನ ಕಾಡದಂತೆ ಅವರಿಗೆ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯ.
    ಡಾ.ಸುರೇಶಬಾಬು, ಜಿಲ್ಲಾ ಶಸಚಿಕಿತ್ಸಕ

    ಕರೊನಾ ಸೋಂಕಿತರಲ್ಲಿ ಸಾವಿನ ಭಯ ದೂರಮಾಡಿ ಜೀವನೋತ್ಸಾಹ ತುಂಬಲು ಅವರ ಜತೆ ನಾವು ಮಾತನಾಡುತ್ತೇವೆ, ಸಿಬ್ಬಂದಿಗಳೆಲ್ಲ ಹಾಡಿನ ಜತೆಗೆ ನೃತ್ಯ ಮಾಡಿದ್ದು ಅವರಲ್ಲಿ ಭಯ ಹೋಗಲಾಡಿಸಲು ಸಹಾಯಕವಾಗಬಹುದು.
    ಯಶೋದಾ, ಐಸಿಯು ವಾರ್ಡ್ ಮೇಲ್ವಿಚಾರಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts