More

    ಸೇನೆ ಸೇರುವವರ ಪಾಲಿಗಿದು ಗುರುಕುಲ!

    ತುಮಕೂರು: ಸೈನ್ಯಕ್ಕೆ ಸೇರುವ ಯುವಕರಲ್ಲಿ ದೈಹಿಕ ಸಾಮರ್ಥ್ಯ ಹೆಚ್ಚಿಸುವುದರ ಜತೆಗೆ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಮಾಜಿ ಸೈನಿಕರ ತಂಡವೊಂದು ಸದ್ದುಗದ್ದಲವಿಲ್ಲದೆ ಗುರುಕುಲ ಒಂದನ್ನು ಆರಂಭಿಸಿದೆ.

    ಸಿದ್ಧಗಂಗೆಯ ಬೆಟ್ಟದ ತಪ್ಪಲಿನ ಮಾರನಾಯಕನಪಾಳ್ಯದ ಬ್ರಹ್ಮಚೈತನ್ಯ ಆಶ್ರಮದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ವಿ.ಡಿ.ನಾಗರಾಜು ನೇತೃತ್ವದ ತಂಡವು ‘ತುಮಕೂರು ಸೈನಿಕರ ತರಬೇತಿ ಶಿಬಿರ’ವನ್ನು ಆಯೋಜಿಸಿದೆ. 17 ರಿಂದ 21 ವರ್ಷದೊಳಗಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಮುಗಿಸಿದ ಸೇನೆಗೆ ಸೇರ ಬಯಸುವ ಯುವಕರಿಗೆ ದೈಹಿಕ, ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಜತೆಗೆ ಅವರಲ್ಲಿ ಪ್ರೇರಣೆ ಮೂಡಿಸುವ ಮಾರ್ಗದರ್ಶನವನ್ನು ಮಾಜಿ ಸೈನಿಕರ ತಂಡ ಉಚಿತವಾಗಿ ನೀಡುತ್ತಿರುವುದು ವಿಶೇಷವೆನಿಸಿದೆ.

    ಭಾರತೀಯ ಸೇನೆ, ವಾಯುಸೇನೆ, ನೌಕಸೇನೆ, ಅರೆಸೇನಾ ಪಡೆ ಸೇರಲಿಚ್ಛಿಸುವರಿಗೆ ದೇಶಭಕ್ತಿ, ದೃಢತೆ ಮತ್ತು ವೀರತೆಯ ಗುಣಗಳನ್ನು ರೂಪಿಸುವುದರ ಜತೆಗೆ ಆರೋಗ್ಯ, ವ್ಯಕ್ತಿತ್ವ ವಿಕಸನ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ತರಬೇತಿ ವೇಳೆ ಮೂಡಿಸಲಾಗುವುದು. ಇದೇ ಜೂನ್ 1 ರಿಂದ ಆರಂಭವಾಗಿರುವ ಸೈನಿಕರ ತರಬೇತಿಯಲ್ಲಿ 34 ಯುವಕರಿಗೆ ಸೂಕ್ತ ತರಬೇತಿ ನೀಡುವ ಮೂಲಕ ಸೇನೆ ಸೇರಲು ಅಣಿಗೊಳಿಸಲಾಗುತ್ತಿದೆ. ಈ ಕಾಯಕವು ಯಾವುದೇ ಅಬ್ಬರದ ಪ್ರಚಾರವಿಲ್ಲದೆ ಸದ್ದುಗದ್ದಲವಿಲ್ಲದೆ ಸಾಗಿದೆ.

    ವಾಕಥಾನ್‌ಗೆ ಸಕಲ ಸಿದ್ಧತೆ: ಕಾರ್ಗಿಲ್ ಯುದ್ಧ ನಡೆದು ಇಪ್ಪತ್ತೈದು ವರುಷಗಳೇ ಕಳೆದಿವೆ. ಅಂದು ಭಾರತಾಂಬೆಯ ರಕ್ಷಣೆಗಾಗಿ ಸರಿಸುಮಾರು ಐದುನೂರ ಇಪ್ಪತ್ತೇಳು ಭಾರತೀಯ ಸೈನಿಕರು ವೀರ ಮರಣವನ್ನಪ್ಪಿದ್ದು ಅವರ ಸ್ಮರಣಾರ್ಥ, ಗೌರವಾರ್ಪಣೆಗೆ ನಾಡಿನೆಲ್ಲ್ಲೆಡೆ ಕಾರ್ಗಿಲ್ ವಿಜಯ್ ದಿವಸ್ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ತುಮಕೂರು ನಗರದಲ್ಲಿ ಕಾರ್ಗಿಲ್ ವಿಜಯ್ ದಿವಸ್ 25ನೇ ವರ್ಷಾಚರಣೆ ಅಂಗವಾಗಿ ವಿಜಯವಾಣಿ, ದಿಗ್ವಿಜಯ 24/7 ನ್ಯೂಸ್ ಹಮ್ಮಿಕೊಂಡಿರುವ ‘ನಮ್ಮ ನಡಿಗೆ ದೇಶದೆಡೆಗೆ’ ವಾಕಥಾನ್‌ಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

    ಲಿಖಿತ ಪರೀಕ್ಷೆಗೂ ತರಬೇತಿ !
    ಸೇನೆ ಸೇರ ಬಯಸುವ ಯುವಕರಿಗೆ ಲಿಖಿತ ಪರೀಕ್ಷೆ ಎದುರಿಸಲು ಅಗತ್ಯವಾದ ಗಣಿತ, ವಿಜ್ಞಾನ, ಸಾಮಾನ್ಯಜ್ಞಾನ, ಕಂಪ್ಯೂಟರ್, ಇಂಗ್ಲೀಷ್ ಭಾಷೆ ಸಾಮರ್ಥ್ಯ ವೃದ್ಧಿಸಲು ನುರಿತ ಶಿಕ್ಷಕರಿಂದ ಪಾಠದ ಜತೆಗೆ ದೈಹಿಕ ಸಾಮರ್ಥ್ಯ, ಮಾನಸಿಕ ಸ್ಥೈರ್ಯ ಹೆಚ್ಚಿಸಲು ಕಠಿಣ ತರಬೇತಿಯನ್ನು ಮಾಜಿ ಸೈನಿಕರ ತಂಡ ಬೆಳಗ್ಗೆ, ಸಂಜೆ ನೀಡುತ್ತಿದೆ. ಸದ್ಯ ತರಬೇತಿ ಶಿಬಿರದಲ್ಲಿ 34 ಯುವಕರಿದ್ದು ಊಟದ ಹೊರೆಯನ್ನು ಮಾತ್ರ ಯುವಕರಿಂದ ಭರಿಸಲಾಗುತ್ತಿದೆ. ತರಬೇತಿ ಬಯಸುವರು ಹೆಚ್ಚಿನ ಮಾಹಿತಿಗಾಗಿ ಮೊ: 8310258226, 6360467713, 9481522018 ಸಂಪರ್ಕಿಸಬಹುದಾಗಿದೆ.

    ನಾನು ಸೈನಿಕ. ಸೇನೆ ನನಗೆ ಬದುಕು ಕಟ್ಟಿಕೊಟ್ಟಿದೆ. ಭಾರತಾಂಬೆಯ ಋಣ ತೀರಿಸುವ ನಿಟ್ಟಿನಲ್ಲಿ ನನ್ನಂತಹ ಆರ್ಥಿಕವಾಗಿ ಸದೃಢರಲ್ಲದ, ವಿದ್ಯಾಭ್ಯಾಸದಲ್ಲೂ ಸರಾಸರಿ ಎನಿಸಿರುವ ಯುವಕರನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಸೇನೆ ಸೇರಲು ಅಣಿಗೊಳಿಸುವ ಕಾರ್ಯವನ್ನು ಆರಂಭಿಸಿದ್ದೇವೆ. ಜಿಲ್ಲೆಯಲ್ಲಿ ಪ್ರತೀ ವರ್ಷ ಕನಿಷ್ಠ 100 ಯುವಕರನ್ನು ಸೇನೆಗೆ ಕಳುಹಿಸುವ ಉದ್ದೇಶ ನಮ್ಮದಾಗಿದೆ. | ವಿ.ಡಿ.ನಾಗರಾಜು ಕಾರ್ಯಾಧ್ಯಕ್ಷ, ಅಖಿಲ ಕರ್ನಾಟಕ ಮಾಜಿ ಸೈನಿಕರು ಜಿಲ್ಲಾ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts