More

    ಸೆಸ್ಕ್ ಕಚೇರಿಗೆ ಬೀಗ ಜಡಿದು ರೈತರ ಪ್ರತಿಭಟನೆ

    ಕೊಳ್ಳೇಗಾಲ: ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡದಿರುವುದನ್ನು ವಿರೋಧಿಸಿ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿರುವ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಬುಧವಾರ ರೈತರು ಬೀಗ ಜಡಿದಿದ್ದಲ್ಲದೆ, ಒಣಗಿದ ಜೋಳದ ಬೆಳೆ ಪ್ರದರ್ಶಿಸಿ ಪ್ರತಿಭಟಿಸಿದರು.


    ದೊಡ್ಡಿಂದುವಾಡಿ ಗ್ರಾಮದ ರೈತರನ್ನು ವಿದ್ಯುತ್ ಸಮಸ್ಯೆ ಬಾಧಿಸುತ್ತಿದೆ. ಗ್ರಾಮಾಂತರ ಪ್ರದೇಶದ ಪಂಪ್‌ಸೆಟ್‌ಗಳಿಗೆ ಕೇವಲ 7 ಗಂಟೆಗಳ ಮಾತ್ರ ಕರೆಂಟ್ ನೀಡಲಾಗುತ್ತಿದೆ. ವಿದ್ಯುತ್ ಕೊಟ್ಟಿರುವ ಸಮಯವೇ ಕಡಿಮೆಯಾಗಿದೆ. ಆದರೆ, ಅದನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲ. ಇದ್ದರಿಂದ ನಾವು ಬೆಳೆದಿರುವ ಜೋಳ, ಕಬ್ಬು ಇನ್ನಿತರ ಬೆಳೆಗಳು ಒಣಗುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.


    ಇರುವ 7 ಗಂಟೆ ಕರೆಂಟ್ ಅನ್ನು ಎರಡು ಸಮಯದಲ್ಲಿ ನೀಡಲಾಗುತ್ತಿದೆ. ರಾತ್ರಿ 3ರಿಂದ 6 ಗಂಟೆ ಹಾಗೂ ಮಧ್ಯಾಹ್ನ 2ಗಂಟೆಯ ನಂತರ ಬಾಕಿ ಉಳಿದ ಮೂರು ತಾಸು ವಿದ್ಯುತ್ ನೀಡಲಾಗುತ್ತಿದೆ. ಇದ್ದರಿಂದ ರೈತರು ರಾತ್ರಿಯಿಡಿ ನಿದ್ರಿಸದೆ ವ್ಯವಸಾಯ ಮಾಡಬೇಕಿದೆ. ಇನ್ನು ಬೇಸಿಗೆಯಾದ್ದರಿಂದ ರಾತ್ರಿ ಕೊಟ್ಟ ವಿದ್ಯುತ್‌ನಿಂದ ಹಾಯಿಸಿದ ನೀರು ಮಧ್ಯಾಹ್ನ ಒಣಗಿ ಹೋಗಿರುತ್ತದೆ. ಇದ್ದರಿಂದ ಫಸಲು ನಾಶವಾಗುತ್ತಿದೆ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳಿಗೆ ಎಷ್ಟು ಬಾರಿ ದೂರಿದರೂ ಪ್ರಯೋಜನವಾಗಿಲ್ಲ. ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಂಬಲ ಬೆಲೆ ಸಿಗದೆ ರೈತರು ಹೈರಾಣಾಗಿದ್ದಾರೆ.


    ಈ ಮಧ್ಯೆದಲ್ಲಿ ಹಗಲಿರುಳು ಶ್ರಮಿಸಿ ಸಾಲ-ಸೋಲ ಮಾಡಿ ವ್ಯವಸಾಯ ಮಾಡಿದರೂ ಆರೋಗ್ಯಕರ ಫಸಲು ಸಿಗದಿದ್ದಾಗ ನಷ್ಟವಾಗುತ್ತದೆ. ಆದ್ದರಿಂದ 7 ತಾಸುಗಳ ವಿದ್ಯುತ್ ಅನ್ನು ಬೆಳಗಿನ ಸಮಯದಲ್ಲೇ ನಿರಂತರವಾಗಿ 7 ಗಂಟೆಯೂ ನೀಡಬೇಕೆಂದು ಆಗ್ರಹಿಸಿದರು.


    ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಎಇಇ ಲಿಂಗರಾಜು ವಿರುದ್ಧ ಅಸಮಾಧಾನ ಹೊರ ಹಾಕಿದ ರೈತರು, ನಿರಂತರವಾಗಿ ವಿದ್ಯುತ್ ಪೂರೈಸುವ ಬೇಡಿಕೆ ಈಡೇರುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ. ಬಾಗಿಲು ತೆಗೆಯಲು ಅವಕಾಶ ನೀಡುವುದಿಲ್ಲ. ನಿಮ್ಮ ಮೇಲಧಿಕಾರಿಗಳು ಸ್ಥಳಕ್ಕೆ ಆಗಮಿಸಿದ ರೈತರ ಸಮಸ್ಯೆ ತಿಳಿಯಬೇಕು ಎಂದು ಪಟ್ಟು ಹಿಡಿದರು.


    ನಂತರ ಮೂರು ತಾಸುಗಳ ಸಮಯ ಎಇಇ ಲಿಂಗರಾಜು ರೈತರನ್ನು ಮನವೊಲಿಸಿ ನಾಡಿದ್ದು ಸೆಸ್ಕ್ ಸೂಪರಿಡೆಂಡೆಂಟ್ ಇಂಜಿನಿಯರ್ ಅವರನ್ನು ಕರೆಯಿಸಿ ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ. ಅಲ್ಲಿಯವರೆಗೆ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಬಳಿಕ ಪ್ರತಿಭಟನಾಕಾರರು ವಿದ್ಯುತ್ ಸರಬರಾಜು ಕೆಂದ್ರಕ್ಕೆ ಜಡಿದಿದ್ದ ಬೀಗವನ್ನು ತೆರೆದು ಪ್ರತಿಭಟನೆ ಕೈಬಿಟ್ಟರು.


    ಸೆಸ್ಕ್ ಜೆಇ ರವಿಕುಮಾರ್, ಗ್ರಾಮಾಂತರ ಠಾಣೆಯ ಪಿಎಸ್‌ಐ ಗಣೇಶ್, ದೊಡ್ಡಿಂದುವಾಡಿ ಗ್ರಾಮದ ಮಾದೇಶ್, ಮನು, ಪ್ರಕಾಶ್, ಸುರೇಶ್, ಸಿಂಗಾಲ್ಲನೂರು ಗ್ರಾಮದ ಹೇಮಂತ್, ಬೆಟ್ಟೇಗೌಡ, ಶಂಕರೇಗೌಡ, ಕಾಮಗೆರೆ ಪರಶಿವಪ್ಪ, ರಾಜೇಶ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts