More

    ಸುಖಕರ ಪ್ರಯಾಣ ಆರಂಭಿಸಿದ ವಂದೇ ಭಾರತ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ತಂತ್ರಜ್ಞಾನ, ವೇಗ ಸೇರಿ ಹಲವು ಕಾರಣಗಳಿಗೆ ಇಡೀ ದೇಶಾದ್ಯಂತ ಸದ್ದು ಮಾಡಿರುವ ವಂದೇ ಭಾರತ ರೈಲು ಮಂಗಳವಾರದಿಂದ ಧಾರವಾಡ ಹಾಗೂ ಬೆಂಗಳೂರು ಮಧ್ಯೆ ಸಂಚಾರ ಆರಂಭಿಸಿದೆ.
    ಪ್ರಧಾನಮಂತ್ರಿ ನರೇಂದ್ರ ಮೋದಿ ಭೋಪಾಲ್‌ನಿಂದ ವರ್ಚುವಲ್ ಆಗಿ ಚಾಲನೆ ನೀಡುತ್ತಿದ್ದಂತೆ ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಧಾರವಾಡ ರೈಲು ನಿಲ್ದಾಣದಿಂದ ಮೊದಲ ಪ್ರಯಾಣ ಆರಂಭಿಸಿದ ರೈಲು, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಯಶವಂತಪುರ ಮಾರ್ಗವಾಗಿ ಬೆಂಗಳೂರಿನತ್ತ ಹೊರಟಿತು. ರಾಜ್ಯದಲ್ಲಿ ಸಂಚಾರ ನಡೆಸಿದ 2ನೇ ರೈಲು ಎಂಬ ಹೆಗ್ಗಳಿಕೆ ಸಹ ಪಡೆಯಿತು.
    ಮೊದಲ ದಿನವಾದ ಕಾರಣ ಶಾಲಾ ವಿದ್ಯಾರ್ಥಿಗಳು, ಕೆಲ ಗಣ್ಯ ವ್ಯಕ್ತಿಗಳು ಸೇರಿ ಇತರ ಕ್ಷೇತ್ರದ ಜನರಿಗೆ ಉದ್ಘಾಟನಾ ಪ್ರಯುಕ್ತದ ಟಿಕೆಟ್‌ಗಳನ್ನು ವಿತರಿಸಲಾಗಿತ್ತು. ಈ ಟಿಕೆಟ್‌ಗಳನ್ನು ಪಡೆದ ಜನರು ಅತ್ಯಂತ ಸಂಭ್ರಮದಿಂದಲೇ ರೈಲು ಏರಿ ಪ್ರಯಾಣ ಬೆಳೆಸುವ ಮೂಲಕ ವಂದೇ ಭಾರತ ರೈಲಿನ ಮೊದಲ ಸಂಚಾರದ ಪ್ರಯಾಣಿಕ ಎಂದು ಖುಷಿಪಟ್ಟರು.
    ಉದ್ಘಾಟನೆಗೂ ಮುನ್ನಾ ದಿನವೇ ರೈಲು ಧಾರವಾಡ ನಿಲ್ದಾಣಕ್ಕೆ ಆಗಮಿಸಿತ್ತಲ್ಲದೆ, ಇಡೀ ನಿಲ್ದಾಣವನ್ನು ಶೃಂಗಾರ ಮಾಡಲಾಗಿತ್ತು. ನಿಲ್ದಾಣಕ್ಕೆ ತಂಡೋಪ ತಂಡವಾಗಿ ಆಗಮಿಸುತ್ತಿದ್ದ ಜನರು ರೈಲಿನೊಂದಿಗೆ ಸೆಲ್ಫೀ ತೆಗೆದುಕೊಂಡು ಖುಷಿಪಟ್ಟರು. ಮಂಗಳವಾರ ಸಹ ಜನರು ರೈಲಿನೊಳಗೆ ಸಂಚರಿಸಿ ಅದರಲ್ಲಿನ ವಿಶೇಷತೆಗಳನ್ನು ಕಣ್ತುಂಬಿಕೊಂಡರು.
    ರೈಲಿನ ವಿಶೇಷತೆ: ವಂದೇ ಭಾರತ ರೈಲು ಸ್ವಯಂ ಚಾಲಿತ ಸೆಮಿ ಹೈಸ್ಪೀಡ್ ರೈಲು. 8 ಬೋಗಿಗಳ ಸಂಯೋಜನೆ ಹೊಂದಿದ್ದು, 530 ಆಸನ ಸಾಮರ್ಥ್ಯ ಹೊಂದಿದೆ. ಧಾರವಾಡ-ಬೆಂಗಳೂರು ಮಧ್ಯ ಸಂಚರಿಸುವ ಈ ರೈಲು 6.5 ಗಂಟೆಗಳಲ್ಲಿ 489 ಕಿ.ಮೀ ಕ್ರಮಿಸುತ್ತದೆ. ಹವಾನಿಯಂತ್ರಿತ, ಎಕನಾಮಿ ಮತ್ತು ಪ್ರೀಮಿಯಂ ಕ್ಲಾಸ್‌ಗಳನ್ನು ಹೊಂದಿದ್ದು, ಐಷಾರಾಮಿ ವ್ಯವಸ್ಥೆ ಇದೆ. ಸ್ವಯಂ ಚಾಲಿತ ಬಾಗಿಲು, ವೈ-ಫೈ, ಚಾರ್ಚಿಂಗ್ ಪಾಯಿಂಟ್, ಸಿಸಿಟಿವಿ, ಬಯೋ ಶೌಚಗೃಹ ಸೇರಿ ಇನ್ನು ಹತ್ತು ಹಲವು ಸೌಲಭ್ಯಗಳನ್ನು ಹೊಂದಿದೆ.
    ಇನ್ನು ರೈಲು ನಿಲ್ದಾಣದಲ್ಲಿ ಏರ್ಪಡಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯಪಾಲ ಥಾವರಚಂದ್ ಗೆಹಲೋಥ್, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ರೈಲ್ವೆ ಇಲಾಖೆ ಜಿಎಂ ಸಂಜೀವ ಕಿಶೋರ ಸೇರಿ ಇತರ ಗಣ್ಯರು ಹುಬ್ಬಳ್ಳಿವರೆಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದು ವಿಶೇಷವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts