More

    ಸಿಗಂದೂರು ಬಳಿ ಶಾಲಾ ಶೈಕ್ಷಣಿಕ ಪ್ರವಾಸದ ಬಸ್ ಪಲ್ಟಿ; ಹುಣಸೂರು ತಾಲೂಕು ಧರ್ಮಾಪುರದ 16 ಮಕ್ಕಳಿಗೆ ಗಾಯ

    ಬ್ಯಾಕೋಡು: ಸಾಗರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 369ಇ ವಕ್ಕೋಡಿಯಲ್ಲಿ ಗುರುವಾರ ಬೆಳಗ್ಗೆ ಶಾಲಾ ಶೈಕ್ಷಣಿಕ ಪ್ರವಾಸದ ಬಸ್ ಪಲ್ಟಿಯಾಗಿ, ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಧರ್ಮಾಪುರ ಸರ್ಕಾರಿ ಪ್ರೌಢಶಾಲೆಯ 16 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
    ಧರ್ಮಾಪುರ ಪ್ರೌಢಶಾಲೆ ವಿದ್ಯಾರ್ಥಿಗಳು ಸಿಗಂದೂರು ಶ್ರೀಕ್ಷೇತ್ರದ ದರ್ಶನಕ್ಕೆ ಆಗಮಿಸುತ್ತಿರುವಾಗ ದೇವಾಲಯದಿಂದ 12 ಕಿ.ಮೀ. ದೂರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. 16 ವಿದ್ಯಾರ್ಥಿಗಳು ಗಾಯಗೊಂಡಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಎಲ್ಲರನ್ನೂ ಸಾಗರ ಉಪವಿಭಾಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಒಬ್ಬ ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳಿಸಲಾಗಿದೆ.
    31 ಬಾಲಕಿಯರು, 33 ಬಾಲಕರು, ಐವರು ಶಿಕ್ಷಕರು, ಚಾಲಕ, ನಿರ್ವಾಹಕ ಬಸ್ಸಿನಲ್ಲಿದ್ದರು. ಬಸ್ಸು ವಕ್ಕೋಡಿ ತಿರುವಿನ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ್ದರಿಂದ ಅವಘಡ ಸಂಭವಿಸಿದೆ. ವಿದ್ಯಾರ್ಥಿಗಳು ನಾಲ್ಕು ದಿನದ ಪ್ರವಾಸದ ಭಾಗವಾಗಿ ಹೊರನಾಡು, ಶೃಂಗೇರಿ, ಕೊಲ್ಲೂರು ಭೇಟಿ ಮುಗಿಸಿ ಸಿಗಂದೂರಿಗೆ ಆಗಮಿಸುತ್ತಿದ್ದರು.
    ಗಾಯಗೊಂಡವರ ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳಿಗೆ ಬ್ಯಾಕೋಡಿನ ಬಾಲಕರ ಹಾಸ್ಟೆಲ್‌ನಲ್ಲಿ ತಾತ್ಕಾಲಿಕವಾಗಿ ವಾಸ್ತವ್ಯ ಕಲ್ಪಿಸಿ ಬೆಳಗ್ಗೆ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಯಿತು. ಬ್ಯಾಕೋಡು ಆಸ್ಪತ್ರೆ ವೈದ್ಯೆ ಡಾ. ಅನನ್ಯಾ ನೇತೃತ್ವದಲ್ಲಿ ಆರೋಗ್ಯ ಇಲಾಖೆ ತಂಡ ಹಾಸ್ಟೆಲ್ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿತು.
    ಅಪಘಾತ ಸುದ್ದಿ ತಿಳಿಯುತ್ತಿದ್ದಂತೆಯೇ ಸಿಗಂದೂರು ದೇವಾಲಯ ಕಾರ್ಯದರ್ಶಿ ರವಿಕುಮಾರ್, ಬ್ಯಾಕೋಡು ಸೊಸೈಟಿ ಅಧ್ಯಕ್ಷ ವಿಜಯಕುಮಾರ್, ದೇವರಾಜ್ ಕಬ್ಬದೂರು, ಜಿ.ಟಿ.ಸತ್ಯನಾರಾಯಣ, ಬಾಬು, ವಿಜಯ್ ಆಡಗಳಲೆ, ಲೋಕಪಾಲ್ ಜೈನ್, ಸಂಧ್ಯಾ ಸಿಗಂದೂರು ಮತ್ತಿತರರು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
    ವಿದ್ಯಾರ್ಥಿಗಳ ಪಾಲಕರು ಆತಂಕಗೊಂಡಿರುವ ಕಾರಣ ಸ್ವಗ್ರಾಮಕ್ಕೆ ತೆರಳಲು ಅಗತ್ಯ ಬಸ್ ಸೇವೆ ಒದಗಿಸಲು ಸಿಗಂದೂರು ದೇವಾಲಯ ಸಿದ್ಧವಿದೆ. ಮಧ್ಯಾಹ್ನ, ಸಂಜೆ ಊಟವನ್ನು ದೇವಾಲಯದಿಂದ ನೀಡಲಾಗುವುದು ಎಂದು ಸಿಗಂದೂರು ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.
    ವಿಶೇಷ ಲಾಂಚ್, ನಾಲ್ಕು ಆಂಬುಲೆನ್ಸ್: ಇದೇ ಮೊದಲ ಬಾರಿಗೆ ದ್ವೀಪದ ನಾಲ್ಕು ಆಂಬುಲೆನ್ಸ್ ಬಳಸಿ ವಿದ್ಯಾರ್ಥಿಗಳನ್ನು ಸಾಗರಕ್ಕೆ ಏಕಕಾಲಕ್ಕೆ ಕರೆದೊಯ್ಯಲಾಯಿತು. ಜಿ. ಶಂಕರ ಟ್ರಸ್ಟ್, ಸಿಗಂದೂರು ಟ್ರಸ್ಟ್ ಹಾಗೂ ಸರ್ಕಾರದ ಎರಡು ಆಂಬುಲೆನ್ಸ್ ಬಳಕೆ ಮಾಡಿ ವಿಶೇಷ ಲಾಂಚ್ ಸೇವೆ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts