More

    ಸಾಹಿತ್ಯ ಸಮ್ಮೇಳನ, ಲಕ್ಕುಂಡಿ ಉತ್ಸವ ಮುಂದಕ್ಕೆ

    ಗದಗ: ಕರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಒಂದು ವಾರ ಕಾಲ ಸರ್ಕಾರದ ವತಿಯಿಂದ ಯಾವುದೇ ಕಾರ್ಯಕ್ರಮ ಏರ್ಪಡಿಸಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದರಿಂದ ಜಿಲ್ಲೆಯಲ್ಲಿ ಆಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮಗಳು ರದ್ದಾಗಿವೆ.

    ಸಿಎಂ ಆದೇಶದ ಹಿನ್ನೆಲೆಯಲ್ಲಿ ಗದಗ ನಗರದ ಸಾಹಿತ್ಯ ಭವನದಲ್ಲಿ ಮಾ. 14 ಮತ್ತು ಮಾ. 15ರಂದು ಆಯೋಜಿಸಲಾಗಿದ್ದ 9ನೇ ಜಿಲ್ಲಾ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಮುಂಡರಗಿ ಪಟ್ಟಣದಲ್ಲಿ ಮಾ. 14ರಂದು ಹಮ್ಮಿಕೊಂಡಿದ್ದ ಕಾಂಗ್ರೆಸ್ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮವೂ ರದ್ದಾಗಿದೆ.

    ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮಾ. 21 ಮತ್ತು ಮಾ. 22ರಂದು ಏರ್ಪಡಿಸಿದ್ದ ಲಕ್ಕುಂಡಿ ಉತ್ಸವವನ್ನೂ ಮುಂದೂಡಲಾಗಿದೆ. ಉತ್ಸವಕ್ಕೆ ಸಂಬಂಧಿಸಿದಂತೆ ಶೇ. 90ರಷ್ಟು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಉತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಸ್ಥಳೀಯ ಕಲಾವಿದರು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲಾವಿದರ ಸಂರ್ಪಸಿ ಅವರ ದಿನಾಂಕವನ್ನು ಪಡೆದುಕೊಳ್ಳಲಾಗಿತ್ತು. ಶಾಮಿಯಾನ, ಊಟದ ಸಿದ್ಧತೆ, ಅತಿಥಿಗಳ ವಾಸ್ತವ್ಯ ಸೇರಿ ವಿವಿಧ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಕುರಿತು ಹಲವಾರು ಸಭೆಗಳನ್ನು ಆಯೋಜಿಸಿ ರ್ಚಚಿಸಿ ಅಂತಿಮಗೊಳಿಸಲಾಗಿತ್ತು. ಇದೀಗ ಕರೊನಾ ಹಾವಳಿಯಿಂದ ಉತ್ಸವವನ್ನು ಮುಂದೂಡಲಾಗಿದ್ದು, ಕಳೆದ 15 ದಿನಗಳಿಂದ ಉತ್ಸವಕ್ಕಾಗಿ ಕೈಗೊಳ್ಳಲಾಗಿದ್ದ ಶ್ರಮ ವ್ಯರ್ಥವಾಗಿದೆ.

    ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಮಾ.16 ರಂದು ಕಾಂಗ್ರೆಸ್ ಮುಖಂಡ ದಿ.ಕೆ.ಎಚ್. ಪಾಟೀಲ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಪಾಲ ವಜೂಭಾಯಿ ವಾಲಾ ಸೇರಿ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುವವರಿದ್ದರು. ಹುಲಕೋಟಿ ಕಾರ್ಯಕ್ರಮ ಮುಗಿಸಿದ ನಂತರ ಮುಖ್ಯಮಂತ್ರಿ ಅವರು ನರಗುಂದ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡುವವರಿದ್ದರು. ಬಜೆಟ್​ನಲ್ಲಿ ಮಹದಾಯಿ ಯೋಜನೆಗೆ 500 ಕೋಟಿ ರೂ. ಅನುದಾನ ನೀಡಿದ್ದರಿಂದ ಸಿಎಂ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಶಾಲಾ-ಕಾಲೇಜ್​ಗಳಲ್ಲಿ ಏರ್ಪಡಿಸಲಾಗುವ ಸಮ್ಮರ್ ಕ್ಯಾಂಪ್ ಸೇರಿ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

    ಕರೊನಾ ವೈರಸ್ ತಡೆಗೆ ಆರೋಗ್ಯ ಇಲಾಖೆ ನೀಡಿರುವ ಮಾರ್ಗದರ್ಶಿ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಲು ರಾಜ್ಯ ಸರ್ಕಾರ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮುಖ್ಯಮಂತ್ರಿ ಅವರ ಜಿಲ್ಲೆಯ ಪ್ರವಾಸ, ಮಾ. 14, ಮಾ.15ರಂದು ಆಯೋಜಿಸಿದ್ದ ಜಿಲ್ಲಾ ಸಾಹಿತ್ಯ ಸಮ್ಮೇಳನ, ಮಾ. 21, ಮಾ. 22ರಂದು ಲಕ್ಕುಂಡಿಯಲ್ಲಿ ಏರ್ಪಡಿಸಿದ್ದ ಲಕ್ಕುಂಡಿ ಉತ್ಸವವನ್ನು ಮುಂದೂಡಲಾಗಿದೆ.

    |ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts