More

    ಸಾರ್ವಜನಿಕರಿಗೆ ಸಮಸ್ಯೆ ಆಗದಿರಲಿ

    ಗದಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಒಕ್ಕೂಟವು ಏ.7 ರಿಂದ ಅನಿರ್ದಿಷ್ಟ ಅವಧಿ ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುವುದನ್ನು ತಪ್ಪಿಸಲು ಖಾಸಗಿ ಸಾರಿಗೆ ವಾಹನಗಳನ್ನು ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಾರಿಗೆ ಸಂಸ್ಥೆ ಅಧಿಕಾರಿಗಳು ಹಾಗೂ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಮ್ಯಾಕ್ಸಿಕ್ಯಾಬ್, ಖಾಸಗಿ ಪ್ರಯಾಣಿಕ ವಾಹನಗಳು, ಶಾಲಾ ವಾಹನಗಳು, ಒಪ್ಪಂದದ ವಾಹನಗಳು, ಅಖಿಲ ಭಾರತ ಪ್ರವಾಸಿ ವಾಹನಗಳು ಮತ್ತು ಖಾಸಗಿ ಮಜಲು ವಾಹನಗಳು ಜಿಲ್ಲೆಯಲ್ಲಿ ಲಭ್ಯವಿದ್ದು, ನಿಯಮಾನುಸಾರ ವಾಹನಗಳಿಗೆ ತಾತ್ಕಾಲಿಕ ಪರವಾನಗಿ ನೀಡಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

    ಖಾಸಗಿ ಪ್ರಯಾಣಿಕ ವಾಹನಗಳು ಬಸ್ ನಿಲ್ದಾಣದಿಂದ ಬುಧವಾರ ಬೆಳಗ್ಗೆಯಿಂದ ಕಾರ್ಯಾಚರಣೆ ಮಾಡಲಿದ್ದು, ಸಾರ್ವಜನಿಕರು ಸಾರಿಗೆ ಸೌಲಭ್ಯ ಪಡೆಯಬಹುದು ಎಂದರು.

    ಏ.7 ರಿಂದ ಸಾರಿಗೆ ಸಂಸ್ಥೆ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳ ಪ್ರಯಾಣಕ್ಕೆ ತೊಂದರೆಯಾಗಲಿದೆ. ಮುಷ್ಕರವನ್ನು ಕೈಬಿಟ್ಟು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಲಾಗಿದೆ. ಮುಷ್ಕರದಲ್ಲಿ ಭಾಗವಹಿಸದೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

    ಖಾಸಗಿ ಪ್ರಯಾಣಿಕ ವಾಹನಗಳು ಬುಧವಾರದಿಂದ ಕಾರ್ಯಾಚರಣೆ ನಡೆಸಬಹುದು. ವಾಹನ ಮಾಲೀಕರು ಪ್ರಯಾಣಿಕರಿಂದ ಹೆಚ್ಚಿನ ಪ್ರಯಾಣ ದರ ವಸೂಲು ಮಾಡಬಾರದು. ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕೆಂದು ಹೇಳಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಮಾತನಾಡಿ, ಪ್ರಯಾಣಿಕರಿಗೆ ತೊಂದರೆ ಆಗದಂತೆ ಪೊಲೀಸ್ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.

    ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ., ಕೆಎಸ್​ಆರ್​ಟಿಸಿ ಗದಗ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್ .ಸಿ. ಹಿರೇಮಠ, ಆರ್​ಟಿಒ ಅಧಿಕಾರಿಗಳು ಇದ್ದರು.

    ಮುಷ್ಕರಕ್ಕೂ ಮುನ್ನವೇ ತಟ್ಟಿದ ಬಿಸಿ

    ಗದಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಏ.7ರಂದು ಹಮ್ಮಿಕೊಂಡಿರುವ ಮುಷ್ಕರದ ಬಿಸಿ ಮಂಗಳವಾರವೇ ಪ್ರಯಾಣಿಕರಿಗೆ ತಟ್ಟಿತು. ಎರಡನೇ ಪಾಳಿಯಲ್ಲಿ ಕೆಲಸ ಮಾಡಬೇಕಾಗಿದ್ದ ಸಿಬ್ಬಂದಿ ಗೈರಾಗಿದ್ದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ನಗರದ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೆ ಪ್ರಯಾಣಿಕರು ಫಜೀತಿಗೆ ಒಳಗಾದರು. ಬಸ್ ಬಿಡುವಂತೆ ಆಗ್ರಹಿಸಿ ಸಾರಿಗೆ ಇಲಾಖೆ ಕಂಟ್ರೋಲರ್ ಅವರನ್ನು ಒತ್ತಾಯಿಸುತ್ತಿರುವುದು ಕಂಡುಬಂದಿತು. ಕೆಲವು ಚಾಲಕ, ನಿರ್ವಾಹಕರು ಕೆಲಸಕ್ಕೆ ಗೈರಾಗಿದ್ದರಿಂದ ಬಸ್ ಓಡಿಸಲು ತೊಂದರೆಯಾಗುತ್ತಿದೆ. ಬುಧವಾರ ಸಾರಿಗೆ ನೌಕರರ ಮುಷ್ಕರ ಇರುವುದರಿಂದ ಸಮಸ್ಯೆ ತಲೆದೋರಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು. ವಿವಿಧ ಕೆಲಸ ಕಾರ್ಯಗಳ ಸಲುವಾಗಿ ನಗರಕ್ಕೆ ಆಗಮಿಸಿದ್ದ ಜನರು ಬಸ್ ಸಂಚಾರ ಖಚಿತ ಇಲ್ಲದ್ದರಿಂದ ಖಾಸಗಿ ವಾಹನಗಳ ಮೂಲಕ ತೆರಳಿದರು.

    ಸಾರ್ವಜನಿಕರಿಗೆ ಸಮಸ್ಯೆ ಬೇಡ: ಸಾರಿಗೆ ನೌಕರರು ಬೇಡಿಕೆ ಈಡೇರಿಕೆಗೆ ಬುಧವಾರ ಮುಷ್ಕರ ಹಮ್ಮಿಕೊಂಡಿದ್ದಾರೆ. ಆದರೆ, ಇದರಿಂದ ಸಾರ್ವಜನಿಕರಿಗೆ ಎಷ್ಟು ತೊಂದರೆ ಆಗಲಿದೆ ಎಂಬುದನ್ನು ಗಮನಿಸಬೇಕು. ಈಗಾಗಲೇ ಈ ಹಿಂದೆ ಮೂರ್ನಾಲ್ಕು ದಿನಗಳ ಕಾಲ ಕೆಲಸಕ್ಕೆ ಗೈರಾಗಿ ಮುಷ್ಕರ ನಡೆಸಿದ್ದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಜತೆಗೆ ಸಾರಿಗೆ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಹಾನಿ ಆಗಿದೆ. ಸರ್ಕಾರ ಮತ್ತು ನೌಕರರು ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು ಎಂದು ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಯೊಬ್ಬರು ಹೇಳಿದರು.

    ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರ ಕುರಿತು ಜಿಲ್ಲಾಧಿಕಾರಿ ಅವರೊಂದಿಗೆ ಸಭೆ ನಡೆಸಲಾಗುತ್ತಿದೆ. ಕೆಲವು ನೌಕರರು ಮಂಗಳವಾರವೇ ಗೈರಾಗಿದ್ದಾರೆ. ಹೀಗಾಗಿ ಬುಧವಾರ ಬಸ್ ಸಂಚಾರದಲ್ಲಿ ಅಡಚಣೆ ಉಂಟಾಗಬಹುದು.
    |ಎಫ್.ಸಿ. ಹಿರೇಮಠ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್​ಆರ್​ಟಿಸಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts