More

    ಸಾರಿಗೆ ಸಂಸ್ಥೆಗೆ 4000 ಕೋಟಿ ರೂ. ಹಾನಿ

    ವಿಜಯವಾಣಿ ಸುದ್ದಿಜಾಲ ಯಲ್ಲಾಪುರ: ಕರೊನಾದಿಂದ ಹೆಚ್ಚು ನಷ್ಟಕ್ಕೊಳಗಾಗಿದ್ದು ಸಾರಿಗೆ ಸಂಸ್ಥೆ. ಆದಾಯದ ಕೊರತೆ, ಇಂಧನದ ದರ ಹೆಚ್ಚಳ ಸೇರಿ ಇಲಾಖೆ 4000 ಕೋಟಿ ರೂ. ಹಾನಿ ಅನುಭವಿಸುತ್ತಿದೆ. ಆದರೂ ಸೇವೆಯ ನೆಲೆಯಲ್ಲಿ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

    ತಾಲೂಕಿನ ಶಿರಸಿ ರಸ್ತೆಯಲ್ಲಿ ಬೇಡ್ತಿ ನದಿಗೆ ಅಡ್ಡಲಾಗಿ ನಿರ್ವಿುಸಿದ ನೂತನ ಸೇತುವೆ ಹಾಗೂ ಪಟ್ಟಣದಲ್ಲಿ ನೂತನವಾಗಿ ನಿರ್ವಿುಸಿದ ಹೈಟೆಕ್ ಬಸ್ ನಿಲ್ದಾಣ ಉದ್ಘಾಟಿಸಿ ಅವರು ಮಾತನಾಡಿದರು.

    ಸಂಸ್ಥೆಯು ನೌಕರರ ಮುಷ್ಕರದ ವೇಳೆ ನೀಡಿದ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಲಾಗಿತ್ತು. ಅದರಲ್ಲಿ ಐದು ಬೇಡಿಕೆಗಳನ್ನು ಈಡೇರಿಸಲಾಗಿದ್ದು, ಇನ್ನುಳಿದ 4 ಬೇಡಿಕೆಗಳನ್ನು 15-20 ದಿನಗಳಲ್ಲಿ ಈಡೇರಿಸಲಾಗುವುದು. ಸಂಸ್ಥೆಯ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಸಿದ್ಧವಾಗಿದ್ದರೂ ಮಾತನಾಡಿ ಪರಿಹರಿಸಿಕೊಳ್ಳದೇ, ಯಾರದೋ ಮಾತು ಕೇಳಿ ಮುಷ್ಕರ ಮಾಡಿದ್ದು, ಅನ್ನ ಕೊಡುವ ಬಸ್ಸಿಗೆ ನೌಕರರೇ ಕಲ್ಲು ಹೊಡೆದು, ಹಾನಿ ಮಾಡಿರುವುದು ಬೇಸರ ತಂದಿತ್ತು. ನೌಕರರು ವಿವೇಚನೆಯಿಂದ ವ್ಯವಹರಿಸುವ ಅಗತ್ಯವಿದೆ ಎಂದರು.

    ಜಿಲ್ಲೆಯ ದಾಂಡೇಲಿಯಲ್ಲಿ ಟ್ರಕ್ ಗ್ಯಾಲರಿ ನಿರ್ವಿುಸಲಾಗುವುದು ಎಂದು ಈ ವೇಳೆ ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಯಲ್ಲಾಪುರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ, ಬೇಡ್ತಿ ನದಿಗೆ ನೂತನ ಸೇತುವೆ ನಿರ್ವಿುಸುವ ಕನಸು ನನಸಾಗಿದೆ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ವಾಕರಸಾ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ, ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ವಾಕರಸಾ ನಿಗಮದ ಎಂಡಿ ಕೃಷ್ಣ ವಾಜಪೇಯಿ, ಜಿಪಂ ಸದಸ್ಯೆ ರೂಪಾ ಬೂರ್ಮನೆ, ತಾಪಂ ಅಧ್ಯಕ್ಷೆ ಚಂದ್ರಕಲಾ ಭಟ್ಟ, ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಪಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್ ಇತರರಿದ್ದರು. ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ, ಲೋಕೋಪಯೋಗಿ ಇಲಾಖೆಯ ಎಇಇ ವಿ.ಎಂ.ಭಟ್ಟ ನಿರ್ವಹಿಸಿದರು.

    ರೈಟ್ ಪರ್ಸನ್ ಇನ್ ರೈಟ್ ಪಾರ್ಟಿ : ಹೆಬ್ಬಾರ ಅವರು ಕಾಂಗ್ರೆಸ್​ನಲ್ಲಿದ್ದಾಗ ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ ಎನ್ನುವಂತಾಗಿತ್ತು. ಅವರು ಬಿಜೆಪಿಗೆ ನಮ್ಮ ಸರ್ಕಾರ ಬರಲು ಕಾರಣವಾಗಿ, ನಾನು ಉಪಮುಖ್ಯಮಂತ್ರಿಯಾಗಲೂ ಕಾರಣರಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಯನ್ನು ಸಮರ್ಥವಾಗಿ ಮಾಡುತ್ತಿದ್ದಾರೆ. ಈಗ ರೈಟ್ ಪರ್ಸಸ್ ಇನ್ ರೈಟ್ ಪಾರ್ಟಿ ಎನ್ನುವಂತೆ ಮಾಡಿದ್ದಾರೆ ಎಂದು ಲಕ್ಷ್ಮಣ ಸವದಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts