More

    ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಆದ್ಯತೆ ನೀಡಿ

    ಧಾರವಾಡ: ಅನ್ಯ ಜಿಲ್ಲೆಗಳಿಗಿಂತ ಧಾರವಾಡ ಜಿಲ್ಲೆಯಲ್ಲಿ ಕರೊನಾ ನಿಯಂತ್ರಣದಲ್ಲಿದೆ. ಮಳೆಗಾಲ ಹಿನ್ನೆಲೆಯಲ್ಲಿ ಇತರ ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಳ್ಳ ಬೇಕು. ಇದರ ಜತೆಗೆ ಮುಂಗಾರು ಬಿತ್ತನೆ ಕಾರ್ಯಕ್ಕೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ಎಚ್ಚರ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರೊನಾ ನಿಯಂತ್ರಣ ಹಾಗೂ ಇತರೆ ಅಭಿವೃದ್ಧಿ ವಿಷಯಗಳ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಬೀಜ ಪೂರೈಕೆಯಲ್ಲಿ ಸಮಸ್ಯೆ ಎದುರಾಗುವುದಿಲ್ಲ. ಎಲ್ಲ ರೈತರಿಗೂ ದೊರೆಯುತ್ತವೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಕೃಷಿಕರಲ್ಲಿ ಭರವಸೆ ಮೂಡಿಸಬೇಕು. ಸಹಾಯಕ ಕೃಷಿ ನಿರ್ದೇಶಕರು ಕೇಂದ್ರ ಸ್ಥಾನದಲ್ಲಿದ್ದು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಅಣ್ಣಿಗೇರಿ ಬಳಿ ನಿರ್ವಿುಸುತ್ತಿರುವ ಬೈಪಾಸ್ ಕಾಮಗಾರಿಯಿಂದ ಜಮೀನುಗಳಿಗೆ ತೆರಳಲು ಅನುಕೂಲವಾಗುವಂತೆ ಕೆಳಸೇತುವೆ ಇಲ್ಲದ ಕಾರಣಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಇದಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

    ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿ, ಸೋಯಾಬೀನ್ ಬಿತ್ತನೆ ಬೀಜಗಳ ಗುಣಮಟ್ಟದ ಬಗ್ಗೆ ರೈತರಿಂದ ದೂರುಗಳು ಬರುತ್ತಿವೆ. ಕೂಡಲೆ ಪರ್ಯಾಯ ಬೆಳೆಗಳನ್ನು ಸೂಚಿಸಬೇಕು ಎಂದರು.

    ಜಂಟಿ ಕೃಷಿ ನಿರ್ದೇಶಕ ರಾಜಶೇಖರ್ ಬಿಜಾಪುರ ಮಾತನಾಡಿ, ಬೀಜ ಬಿತ್ತನೆ ಸಂದರ್ಭದಲ್ಲಿ ಎಂಐಎಸ್ ತಂತ್ರಾಂಶಕ್ಕೆ ವೈದ್ಯರ ದಾಖಲೆಗಳನ್ನು ಅಳವಡಿಸಬೇಕಿರುವುದರಿಂದ ಜನಸಂದಣಿಗೆ ಅವಕಾಶವಾಗಿತ್ತು. ಈಗ ಹೆಚ್ಚು ಸಂಖ್ಯೆಯಲ್ಲಿ ಡಾಟಾ ಎಂಟ್ರಿ ಆಪರೇಟರ್​ಗಳನ್ನು ಪೂರೈಸಲಾಗಿದೆ. ಸೋಯಾಬೀನ್ ಬೀಜ ಬಿತ್ತನೆ ಕುರಿತು ಸರ್ಕಾರದ ಮಟ್ಟದಲ್ಲಿ ನಿರ್ಣಯ ಕೈಗೊಳ್ಳುವುದಾಗಿ ಕೃಷಿ ಸಚಿವರು ತಿಳಿಸಿದ್ದಾರೆ. ಒಂದೆರಡು ದಿನಗಳಲ್ಲಿ ನಿರ್ದೇಶನ ಬರಬಹುದು ಎಂದರು.

    ಜಿಲ್ಲಾಧಿಕಾರಿ ದೀಪಾ ಚೋಳನ್, ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ, ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್ ಇತರರು ಇದ್ದರು.

    ಸಂಪುಟ ಸಭೆಯಲ್ಲಿ ಕಳಪೆ ಬಿತ್ತನೆ ಬೀಜದ ಚರ್ಚೆ

    ಧಾರವಾಡ: ಕಳಪೆ ಗುಣಮಟ್ಟದ ಬಿತ್ತನೆ ಬೀಜ ವಿತರಣೆ ಕುರಿತು ಈಗಾಗಲೇ ಕೃಷಿ ಸಚಿವರು ಸಭೆ ನಡೆಸಿದ್ದಾರೆ. ಧಾರವಾಡ ಮಾತ್ರವಲ್ಲದೆ ಇತರ ಜಿಲ್ಲೆಗಳಿಂದಲೂ ಆರೋಪ ಕೇಳಿಬಂದಿದೆ. ಇನ್ನೆರಡು ದಿನಗಳಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕಳಪೆ ಬಿತ್ತನೆ ಬೀಜ ಕುರಿತು ರ್ಚಚಿಸಿ, ರಾಜ್ಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕೈಗಾರಿಕೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳಪೆ ಬೀಜ ಬಿತ್ತಿ ಸಮಸ್ಯೆಗೆ ಸಿಲುಕಿದ ರೈತರಿಗೆ ಬೀಜ ಪೂರೈಸಿದ ಕಂಪನಿಯವರೇ ಪರಿಹಾರ ಕೊಡಬೇಕು. ಈ ಕುರಿತು ಕೃಷಿ ಸಚಿವರು ಹಾಗೂ ಅಧಿಕಾರಿಗಳ ಜೊತೆಗೆ ಮಾತನಾಡಿ ರೈತರಿಗೆ ಯಾವ ರೀತಿಯಲ್ಲಿ ಪರಿಹಾರ ಕೊಡಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts