More

    ಸುಸಜ್ಜಿತ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ತೆರೆಯಲು ಉದ್ದೇಶ

    ತಿ.ನರಸೀಪುರ: ತಾಲೂಕಿನ ಮಾಡ್ರಹಳ್ಳಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ತೆರೆಯಲು ಉದ್ದೇಶಿಸಲಾಗಿದೆ ಎಂದು ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ ಹೇಳಿದರು.

    ಪಟ್ಟಣದ ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಗಳ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ದಿ.ಮಾಡ್ರಹಳ್ಳಿಯ ಎಂ.ಸಿ.ಶಿವಾನಂದ ಶರ್ಮ ಅವರ ನೆನಪಿನಾರ್ಥ ಅವರ ಹುಟ್ಟೂರಿನಲ್ಲಿ ಒಂದನೇ ತರಗತಿಯಿಂದ ಪಿಯುಸಿವರೆ ಆಂಗ್ಲ ಮಾಧ್ಯಮ ಶಾಲೆಯನ್ನು ತೆರೆಯುವುದಾಗಿ ತಿಳಿಸಿದರು.

    ಪ್ರತಿ ವರ್ಷ ಅವರ ಪುಣ್ಯ ಸ್ಮರಣೆ ಹಾಗೂ ಜನ್ಮದಿನದ ಅಂಗವಾಗಿ ಅನಾಥಾಶ್ರಮ, ವಿದ್ಯಾರ್ಥಿನಿಲಯ, ದೇವಸ್ಥಾನಗಳ ಜೀರ್ಣೋದ್ಧಾರ, ಮಠಗಳಿಗೆ ಬರುವ ಭಕ್ತರಿಗೆ ಹಾಗೂ ಶಕ್ತಿಧಾಮ, ಬಡ ಅನಾಥ ಹೆಣ್ಣುಮಕ್ಕಳ ಆಶ್ರಮ ಧಾಮಗಳಿಗೆ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

    ಗ್ರಾಮಾಂತರ ಪ್ರದೇಶದ ಮಕ್ಕಳ ಅಭಿವೃದ್ಧಿಗೆ, ಜ್ಞಾನಪ್ರಸಾರಕ್ಕೆ, ಸಾಧ್ಯವಾಗುವಂತೆ ಶಾಲಾ-ಕಾಲೇಜುಗಳನ್ನು 1946ರಲ್ಲಿ ಪ್ರಾರಂಭಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ತನ್ಮೂಲಕ ಮಕ್ಕಳನ್ನು ಭಾರತದ ಸತ್ ಪ್ರಜೆಗಳನ್ನಾಗಿ ರೂಪಿಸಲು ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆ ಶ್ರಮಿಸುತ್ತಾ ಬರುತ್ತಿದೆ ಎಂದು ಹೇಳಿದರು.

    ಮಾಡ್ರಹಳ್ಳಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹ ದೇವಸ್ವಾಮಿ ಅವರು ಶಿಕ್ಷಣ ಸಂಸ್ಥೆಗೆ ಅರ್ಥ ಬರುವಂತೆ ದಾಸೋಹಕ್ಕೆ, ಧಾರ್ಮಿಕ ಕ್ಷೇತ್ರಕ್ಕೆ, ಅನಾಥಾಶ್ರಮ ಹಾಗೂ ದೇವಾಲಯಗಳ ಜೀರ್ಣೋದ್ಧಾರಕ್ಕೆ ಹಣ ಹಾಗೂ ಅಕ್ಕಿ ನೀಡುವ ಮೂಲಕ ಸಹಾಯ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.

    ಇಂದಿನ ಸಮಾಜದಲ್ಲಿ ತ್ಯಾಗ ಹಾಗೂ ಸೇವಾ ಮನೋಭಾವನೆ ಮಾಡುವುದು ತುಂಬ ಕಷ್ಟ. ಇಂತಹ ಸಂದರ್ಭದಲ್ಲೂ ತಾಲೂಕಿಗೆ ಸೀಮಿತವಾಗದೆ ಜಿಲ್ಲೆಯ ಮಠಗಳಿಗೂ ತಮ್ಮದೆ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದರು.

    ಸಂಸ್ಥೆಯ ಉಪಾಧ್ಯಕ್ಷ ಸೋಸಲೆ ಎಸ್.ಎನ್.ಸಿದ್ಧಾರ್ಥ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ತಾಲೂಕಿನ ಜನತೆಯ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.

    ಆಡಳಿತ ಮಂಡಳಿ ಸದಸ್ಯರಾದ ಆರ್.ಶಂಕರೇಗೌಡ, ಸಾಂಬಮೂರ್ತಿ, ಬಿ.ಗೀತಾ, ಎ. ಜಿ.ಮಹದೇವ ಪ್ರಸಾದ್, ಎಸ್.ಮಹೇಶ್, ರಾಜಶೇಖರಮೂರ್ತಿ, ಎಸ್.ಬಸವರಾಜು, ಆಡಳಿತಾಧಿಕಾರಿ ಕೆ.ಪಿ.ಉದಯಕುಮಾರ್, ಸಹಾಯಕ ಆಡಳಿತಾಧಿಕಾರಿ ಶಿವನಂಜಪ್ಪ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಮೂರ್ತಿ, ಎಪಿಎಂಸಿ ಮಾಜಿ ನಿರ್ದೇಶಕ ಸಾಲೂಸ್ವಾಮಿ, ಮುಖಂಡರಾದ ಗುರುಮೂರ್ತಿ, ಶಿವಮಲ್ಲಪ್ಪ, ಬೆನಕನಹಳ್ಳಿ ಬಸಪ್ಪ, ವಕೀಲರ ಸಂಘದ ಅಧ್ಯಕ್ಷ ಪಾಲಾಕ್ಷಮೂರ್ತಿ, ಜಿ.ಮರಹಳ್ಳಿ ಶಿವಪ್ರಸಾದ್, ಸಂಸ್ಥೆಯ ಪ್ರಾಂಶುಪಾಲರಾದ ಟಿ.ಎಸ್.ಬಸವಣ್ಣ ಸ್ವಾಮಿ, ಎಂ.ಸುರೇಶ್, ಮಾನಸಾ, ಬಿ.ಎಸ್.ಸುನಿತಾ, ನಂದೀಶ್, ಸಿದ್ದರಾಜು, ಸೋಮಣ್ಣ, ಆರ್.ಎಸ್.ಮಹದೇಶ್ವರ ಸ್ವಾಮಿ, ಶಿವಶಂಕರ್, ಬಿ.ಎಸ್.ರವಿಕುಮಾರ್, ಮೂಗೂರು ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts