More

    ಸವಲತ್ತಿನ ನಡುವೆಯೂ ನಿಲ್ಲದ ವಲಸೆ ಕಾರ್ಮಿಕರ ಪಾದಯಾತ್ರೆ

    ಚಿಕ್ಕಬಳ್ಳಾಪುರ: ಸರ್ಕಾರದ ಸವಲತ್ತಿನ ನಡುವೆಯೂ ಜಿಲ್ಲೆಯಲ್ಲಿರುವ ವಿವಿಧ ಭಾಗಗಳ ವಲಸೆ ಕಾರ್ಮಿಕರು ನೂರಾರು ಕಿಲೋಮೀಟರ್ ದೂರದ ತಮ್ಮೂರುಗಳಿಗೆ ಕಾಲ್ನಡಿಗೆಯಲ್ಲಿ ಸಾಗುತ್ತಿರುವುದು ಹೆಚ್ಚಾಗುತ್ತಿದೆ.

    ಕೈಯಲ್ಲಿ ಕೆಲಸವಿಲ್ಲ, ಉಪವಾಸ ಸಾಯುವುದಕ್ಕಿಂತ ನಮ್ಮೂರಲ್ಲಿ ಗಂಜಿ ಕುಡಿದು ಜೀವ ಉಳಿಸಿಕೊಳ್ತೀವಿ ಎಂದು ಬಿಸಿಲನ್ನೂ ಲೆಕ್ಕಿಸದೆ ಮಕ್ಕಳು, ಮರಿ ಕಟ್ಟಿಕೊಂಡು, ಹೆದ್ದಾರಿಗಳಲ್ಲಿ, ರೈಲ್ವೆ ಹಳಿಗಳ ಮೇಲೆ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

    ಕಾಲ್ನಡಿಗೆಯಲ್ಲಿ ಹೋಗುತ್ತಿರುವ ಬಹುತೇಕರ ಕೈಯಲ್ಲಿ ಬಿಡಗಾಸಿಲ್ಲ, ಅನ್ನ, ನೀರು, ಆಶ್ರಯದ ಸಮಸ್ಯೆ, ಕುಟುಂಬದ ಸದಸ್ಯರ ಅಳಲು ಸೇರಿ ನಾನಾ ಸಮಸ್ಯೆಗಳಿಗೆ ಹೈರಾಣಾಗುತ್ತಿದ್ದು, ಜೀವನ ಅರಸಿ ಬಂದವರು ಈಗ ಜೀವ ಉಳಿಸಿಕೊಳ್ಳಲು ಪರದಾಡುವಂತಾಗಿದೆ.

    ತಮ್ಮ ಊರುಗಳಿಗೆ ಹೋಗಲು ವ್ಯವಸ್ಥೆ ಮತ್ತು ಅನುಮತಿಗಾಗಿ ಸೇವಾ ಸಿಂಧು ಆ್ಯಪ್ ಮೂಲಕ ವಲಸಿಗ ಕಾರ್ಮಿಕರು ಹೆಸರು ನೋಂದಾಯಿಸಿಕೊಳ್ಳಬಹುದು. ಆದರೆ, ಬಹುತೇಕರು ಅನಕ್ಷರಸ್ಥರು. ಮಾಹಿತಿ ಕೊರತೆಯಿಂದ ಗೊಂದಲಕ್ಕೀಡಾಗುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲಾಡಳಿತ ಭವನ, ಕಾರ್ಮಿಕ ಇಲಾಖೆ ಕಚೇರಿಗೆ ಹಲವು ಬಾರಿ ಅಲೆದಾಡಿದರೂ, ಗಂಟೆಗಟ್ಟಲೆ ಕಾಯ್ದರೂ ಕೆಲಸ ಆಗುವ ನಂಬಿಕೆಯಿಲ್ಲ, ಇದರಿಂದ ಬೇಸತ್ತು ಅನೇಕರು ಕಷ್ಟ ನೋವಿನ ಅರಿವಿದ್ದರೂ ಅನಿವಾರ್ಯವಾಗಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ.

    ಅಲ್ಲಲ್ಲಿ ದಾನಿಗಳು ನೆರವು : ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 7, ಚಿಂತಾಮಣಿ, ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 238, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ, ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಮಾರ್ಗದ ರೈಲ್ವೆ ಹಳಿ ಮೇಲೆ ಸಾಮಗ್ರಿಗಳನ್ನು ಹೊತ್ತುಕೊಂಡು ಕಾರ್ಮಿಕರು ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿದೆ. ಇದರ ನಡುವೆ ಸ್ವಯಂ ಸೇವಾ ಸಂಸ್ಥೆಗಳು, ಸಂಘಟನೆಗಳು ಮತ್ತು ಸಮಾಜ ಸೇವಕರು ಮಾನವೀಯತೆ ದೃಷ್ಟಿಯಿಂದ ಅಲ್ಲಲ್ಲಿ ಕಾರ್ಮಿಕರಿಗೆ ನೀರು, ಊಟ, ಬ್ರೆಡ್, ಹಣ್ಣು, ಬಿಸ್ಕೆಟ್ ನೀಡುತ್ತಿದ್ದಾರೆ.

    ಬಂದ ಸ್ಥಳಕ್ಕೆ ವಾಪಸ್: ಮೂರ್ನಾಲ್ಕು ದಿನ ಸುಮಾರು 60ಕ್ಕೂ ಹೆಚ್ಚು ಕಿ.ಮೀ ನಡೆದುಕೊಂಡು ಬಂದ ಕಾರ್ಮಿಕರನ್ನು ಪೊಲೀಸರು ಹಿಡಿದುಕೊಂಡು ಮತ್ತೆ ಅವರನ್ನು ವಾಪಸ್ ಕಳುಹಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇತ್ತೀಚೆಗೆ ಬೆಂಗಳೂರಿನ ಶಿವಾಜಿ ನಗರದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ 20ಕ್ಕೂ ಹೆಚ್ಚು ಕಾರ್ಮಿಕರನ್ನು ಚಿಕ್ಕಬಳ್ಳಾಪುರದಲ್ಲಿ ಪೊಲೀಸರು ತಡೆದಿದ್ದರು. ಇನ್ನು ಬಾಗೇಪಲ್ಲಿ ಆಂಧ್ರಗಡಿ ಭಾಗದಲ್ಲಿ ವಲಸಿಗರಿಗೆ ತೆರಳಲು ಅವಕಾಶ ಸಿಗದ ಹಿನ್ನೆಲೆಯಲ್ಲಿ 15 ಮಂದಿ ಕ್ವಾರಂಟೈನ್ ಕೇಂದ್ರಕ್ಕೆ ತೆರಳಬೇಕಾಯಿತು. ಹಲವೆಡೆ ಪೊಲೀಸರು ಮತ್ತು ಅಧಿಕಾರಿಗಳ ಕಣ್ಗಾವಲಿನಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಮಿಕರು ಅನ್ಯ ಮಾರ್ಗದಲ್ಲಿ ಹೋಗುತ್ತಿದ್ದಾರೆ.

    ವಲಸಿಗ ಕಾರ್ಮಿಕರ ಮೇಲೆ ನಿಗಾವಹಿಸಲು, ನಿಯಮಾನುಸಾರ ಊರುಗಳಿಗೆ ಕಳುಹಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
    ಆರ್.ಲತಾ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts