More

    ಸರ್ಕಾರ-ವ್ಯಾಪಾರಿಗಳ ಹಗ್ಗಜಗ್ಗಾಟ?

    ಹುಬ್ಬಳ್ಳಿ: ನಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಜನತಾ ಬಜಾರ್ ಮಧ್ಯದಲ್ಲಿರುವ ಕಟ್ಟೆಗಳ ಜಾಗದಲ್ಲಿ ಸ್ಮಾರ್ಟ್​ಸಿಟಿ ಯೋಜನೆಯಡಿ ಒಂದು ವರ್ಷದಲ್ಲಿ ಜಿ ಪ್ಲಸ್ 3 ಮಾದರಿಯ ಕಟ್ಟಡ ನಿರ್ವಿುಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ವ್ಯಾಪಾರಿಗಳನ್ನು ಸ್ಥಳಾಂತರಗೊಳಿಸಬೇಕಿದೆ. ಆದರೆ, ವ್ಯಾಪಾರಿಗಳು ಇದಕ್ಕೆ ಸುಲಭದಲ್ಲಿ ಒಪ್ಪಿಗೆ ಸೂಚಿಸುತ್ತಿಲ್ಲ.

    ಜನತಾ ಬಜಾರ್​ನ ಅಂದಾಜು 170 ಕಟ್ಟೆಗಳಲ್ಲಿ ಹಣ್ಣು, ಹೂವು, ಪೂಜಾ ಸಾಮಗ್ರಿ ಸೇರಿ ಇತರ ವ್ಯಾಪಾರಸ್ಥರು ವಹಿವಾಟು ನಡೆಸಿದ್ದಾರೆ. ಈ ಕಟ್ಟೆಗಳನ್ನು ತೆರವುಗೊಳಿಸಿ, ಸುಸಜ್ಜಿತ ಕಟ್ಟಡ ನಿರ್ವಣಕ್ಕೆ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ಕಂಪನಿ ನಿರ್ಧರಿಸಿದೆ.

    ಅಂದಾಜು 8.35 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ವಣಗೊಳ್ಳಲಿದ್ದು, 9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಒಮ್ಮೆ ಪೂರ್ಣಗೊಳ್ಳುತ್ತಿದ್ದಂತೆ ಈಗಿನ ಜನತಾ ಬಜಾರ್ ಸ್ವರೂಪವೇ ಬದಲಾಗಲಿದೆ. ಸಹಜವಾಗಿ ಅಲ್ಲಿಗೆ ಹೆಚ್ಚು ಜನ ಬರಲಿದ್ದು, ವಹಿವಾಟು ಜಾಸ್ತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಅಧಿಕಾರಿಗಳು.

    ಕಟ್ಟಡ ಕಾಮಗಾರಿಗಾಗಿ ಜನತಾ ಬಜಾರ್ ಕಟ್ಟೆಯಲ್ಲಿನ ವ್ಯಾಪಾರಸ್ಥರಿಗೆ ಭಾರತ ಮಿಲ್ ಮೈದಾನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತಿದೆ. ಅಂದಾಜು 30 ಲಕ್ಷ ರೂ. ವೆಚ್ಚದಲ್ಲಿ ಶೆಡ್​ಗಳನ್ನು ನಿರ್ವಿುಸಿ ವಿದ್ಯುತ್ ದೀಪ, ಶೌಚಗೃಹ ಹಾಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುತ್ತದೆ.

    ತಾತ್ಕಾಲಿಕ ಶೆಡ್​ಗಳಲ್ಲಿ ವ್ಯಾಪಾರಸ್ಥರು ಬೆಳಗ್ಗೆಯಿಂದ ರಾತ್ರಿಯವರೆಗೆ ಹೂವು, ಹಣ್ಣು, ತರಕಾರಿ ಇತರ ವ್ಯಾಪಾರ ಮಾಡಿ, ಮನೆಗೆ ಹೋಗುವಾಗ ತಮ್ಮ ಸರಕುಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ.

    ವ್ಯಾಪಾರಸ್ಥರ ವಿರೋಧ:

    ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿನ ವ್ಯಾಪಾರವನ್ನು ಭಾರತ ಮಿಲ್ ಮೈದಾನಕ್ಕೆ ಸ್ಥಳಾಂತರಿಸುವ ನಿರ್ಧಾರಕ್ಕೆ ಜನತಾ ಬಜಾರ್​ನ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಲಾಕ್​ಡೌನ್​ನಿಂದಾಗಿ 2-3 ತಿಂಗಳು ವ್ಯಾಪಾರ ಇಲ್ಲದೆ ತೊಂದರೆಗೀಡಾಗಿದ್ದೇವೆ. ಈಗ ಸ್ಥಳಾಂತರಿಸಿದರೆ ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಅವರ ಅಳಲು.

    ಭಾರತ ಮಿಲ್ ಮೈದಾನ ದೂರ ಆಗುವ ಕಾರಣ ಅಲ್ಲಿಗೆ ತರಕಾರಿ, ಹೂವು, ಹಣ್ಣು ಖರೀದಿಸಲು ಹೆಚ್ಚು ಜನ ಬರುವುದಿಲ್ಲ. ಹೀಗಾಗಿ ವ್ಯಾಪಾರ ನಷ್ಟವಾಗುವ ಭೀತಿಯಿದೆ. ಹೀಗಾಗಿ 6 ತಿಂಗಳವರೆಗಾದರೂ ಜನತಾ ಬಜಾರ್​ನಲ್ಲಿಯೇ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸುತ್ತಾರೆ ಅವರು.

    ಈದ್ಗಾ ಮೈದಾನ ಅಥವಾ ನ್ಯೂ ಕಾಟನ್ ಮಾರ್ಕೆಟ್​ನಲ್ಲಿ ಜನತಾ ಬಜಾರ್​ನ ವ್ಯಾಪಾರಸ್ಥರಿಗೆ ತಾತ್ಕಾಲಿಕ ಶೆಡ್ ಹಾಕಿಕೊಡುವಂತೆ ಮನವಿ ಮಾಡಿದ್ದೆವು. ಆದರೆ, ಅಧಿಕಾರಿಗಳು ನಮ್ಮ ಮನವಿಗೆ ಕಿವಿಗೊಡಲಿಲ್ಲ. ಶೀಘ್ರ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸುತ್ತೇವೆ.

    – ಶ್ರೀಕಾಂತ ಹಿರೇಮಠ, ಕಾರ್ಯದರ್ಶಿ, ಜನತಾ ಬಜಾರ ಸೂಪರ್ ಮಾರ್ಕೆಟ್ ಶಾಪ್ ಲೀಜ್ ಹೋಲ್ಡರ್ ಅಸೋಸಿಯೇಷನ್, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts