More

    ಸರ್ಕಾರಿ ಯೋಜನೆ ಸದುಪಯೋಗ ಪಡಿಸಿಕೊಳ್ಳಿ

    ಮುಂಡರಗಿ: ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ಶ್ರಮಿಸಬೇಕು. ಸರ್ಕಾರದಿಂದ ದೊರೆಯುವ ಯೋಜನೆಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

    ಪಟ್ಟಣದ ಪುರಸಭೆ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಹಾಗೂ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಡುಗೆ, ಸ್ನಾನಕ್ಕೆ ಬಿಸಿ ನೀರು ಕಾಯಿಸಲು ಕಟ್ಟಿಗೆ ಬಳಸುವುದರಿಂದ ಪರಿಸರ ನಾಶವಾಗುತ್ತದೆ. ಹಾಗೇ ಆರೋಗ್ಯಕ್ಕೂ ಹಾನಿಯಾಗುತ್ತದೆ. ಗ್ಯಾಸ್ ಸಿಲಿಂಡರ್ ಬಳಸುವುದರಿಂದ ಪರಿಸರ ಉಳಿಸಬಹುದು ಎಂದರು.

    ಪುರಸಭೆ ಸದಸ್ಯ ನಾಗೇಶ ಹುಬ್ಬಳ್ಳಿ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದವರಿಗೆ ಇಂದಿರಾ ಕ್ಯಾಂಟೀನ್ ತುಂಬಾ ಅನುಕೂಲವಾಗಲಿದೆ. ಕಡಿಮೆ ದರದಲ್ಲಿ ದೊರೆಯುವಂತ, ಗುಣಮಟ್ಟದ ಆಹಾರ ಪೂರೈಸಬೇಕು. ಈ ಬಗ್ಗೆ ಎಲ್ಲ ಪುರಸಭೆ ಸದಸ್ಯರು ಗಮನ ಹರಿಸುತ್ತೇವೆ. ಎಲ್ಲೂ ಲೋಪದೋಷಗಳಾಗದಂತೆ ಉತ್ತಮವಾಗಿ ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

    ಪುರಸಭೆ ಸದಸ್ಯ ಟಿ.ಬಿ. ದಂಡಿನ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರಾಮಣ್ಣ ಲಮಾಣಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಪರಿಶೀಲನೆ ನಡೆಸಿದರು. ಪುರಸಭೆಯ 2019-20ನೇ ಸಾಲಿನ ಎಸ್​ಎಫ್​ಸಿ ಯೋಜನೆಯಡಿ ಒಟ್ಟು 42 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಲಾಯಿತು.

    ಈ ಸಂದರ್ಭದಲ್ಲಿ ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ರವೀಂದ್ರ ಉಪ್ಪಿನಬೆಟಗೇರಿ, ರಜನಿಕಾಂತ ದೇಸಾಯಿ, ಯಲ್ಲಪ್ಪ ಗಣಾಚಾರಿ, ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ನಾಯ್ಕರ ಹಾಗೂ ಪುರಸಭೆ ಸರ್ವ ಸದಸ್ಯರು ಹಾಜರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts