More

    ಸರ್ಕಾರಿ ಆದೇಶ ರೈತರಿಗೆ ಹೊರೆ- ಕೈಬಿಡಲು ಆಮ್ ಆದ್ಮಿ ಒತ್ತಾಯ

    ದಾವಣಗೆರೆ: ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕ ಸಹಿತ ಮೂಲ ಸೌಲಭ್ಯ ಒದಗಿಸುವ ಯೋಜನೆ ಮುಂದುವರಿಸಬೇಕು. ಅತಿ ಕಡಿಮೆ ದರದಲ್ಲಿ ಪರಿವರ್ತಕ ಹಾಗೂ ವಿದ್ಯುತ್ ಕಂಬಗಳನ್ನು ಒದಗಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಸರ್ಕಾರವನ್ನು ಆಗ್ರಹಿಸಿದರು.
    ಈ ಹಿಂದೆ ಅಕ್ರಮ-ಸಕ್ರಮ ಮತ್ತು ಶೀಘ್ರ ವಿದ್ಯುತ್ ಯೋಜನೆಯಡಿ ರೈತರಿಂದ ಆರಂಭಿಕ ಭದ್ರತಾ ಠೇವಣಿ ಹಾಗೂ ಮೂಲ ಸೌಕರ್ಯದ ವೆಚ್ಚಕ್ಕಾಗಿ ಪ್ರತಿ ಕೊಳವೆಬಾವಿಗೆ 24 ಸಾವಿರ ರೂ. ಕಟ್ಟಿಸಿಕೊಳ್ಳಲಾಗುತ್ತಿತ್ತು. ಇದು ರೈತರಿಗೆ ಆರ್ಥಿಕ ಹೊರ ಆಗಿರಲಿಲ್ಲ. ಇದರಡಿ ವಿದ್ಯುತ್ ಪರಿವರ್ತಕ ಹಾಗೂ 500 ಮೀ. ವರೆಗೆ ಉಚಿತ ಕಂಬಗಳನ್ನು ನೀಡಲಾಗುತ್ತಿತ್ತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಇತ್ತೀಚೆಗೆ ಸುತ್ತೋಲೆ ಹೊರಡಿಸಿದ ಸರ್ಕಾರ, ಸೆ. 22ರಿಂದ ಸ್ವಂತ ಹಣದಲ್ಲಿ ಪರಿವರ್ತಕ, ಕಂಬ ಹಾಕಿಕೊಳ್ಳಬೇಕೆಂದು ಆದೇಶಿಸಲಾಗಿದೆ. ಇದು ಅನ್ನದಾತರಿಗೆ ಹೊರೆಯಾಗಲಿದೆ. ಬರ ತಾಂಡವಾಡುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರ ಪರ ನಿಲ್ಲಬೇಕು ಎಂದು ಮನವಿ ಮಾಡಿದರು.
    ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದ ಗ್ರೀನ್ ಎನರ್ಜಿ ಯೋಜನೆಯಡಿ ಉಚಿತವಾಗಿ ಸೋಲಾರ್ ಪಂಪ್‌ಸೆಟ್‌ಗಳಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಕೇಂದ್ರದ ಪಾಲು ಶೇ.30, ರಾಜ್ಯವು ಶೇ. 50 ಎಂದು ಘೋಷಣೆಯಾಗಿತ್ತು. ರಾಜ್ಯ ಸರ್ಕಾರದಿಂದ ಜಿಎಸ್‌ಟಿಯಲ್ಲಿ ಸರಿಸಮಾನ ಪಾಲನ್ನು ಪಡೆಯುವ ಕೇಂದ್ರ ಸರ್ಕಾರ ಸೋಲಾರ್ ಪಂಪ್‌ಸೆಟ್‌ಗಳಿಗೂ ಶೇ.50ರಷ್ಟು ಪಾಲನ್ನು ಭರಿಸಬೇಕೆಂದು ಆಗ್ರಹಿಸಿದರು.
    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್. ಅರುಣಕುಮಾರ್, ಎಸ್.ಕೆ. ಆದಿಲ್‌ಖಾನ್, ಕೆ. ರವೀಂದ್ರ, ಸುರೇಶ್ ಸಿಡ್ಲಪ್ಪ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts