More

    ಸರ್ಕಾರದ ಆದೇಶವಿದ್ದರೂ ನೀಡುತ್ತಿಲ್ಲ ಹಕ್ಕುಪತ್ರ; ಅರಣ್ಯ ಭೂಮಿ ಸಾಗುವಳಿದಾರರಿಗೆ ಅನ್ಯಾಯ: ತೀ.ನ.ಶ್ರೀನಿವಾಸ್ ಆಕ್ರೋಶ

    ಸಾಗರ: ಅರಣ್ಯಭೂಮಿ ಸಾಗುವಳಿ ಮಾಡಿಕೊಂಡು 1978ರ ಹಿಂದಿನಿಂದಲೂ ಬರುತ್ತಿರುವ ರೈತರ ಬಳಿ ಕೈ ಬರಹದ ಪಹಣಿ ಹಾಗೂ ಅಂದು ದಂಡ ಕಟ್ಟಿದ ರಸೀದಿ ಇದ್ದರೆ ಅಂತಹವರಿಗೆ ಹಕ್ಕುಪತ್ರ ನೀಡಬಹುದು ಎಂದು ಸರ್ಕಾರದ ಆದೇಶವೇ ಇದೆ. ಆದರೂ ಅರಣ್ಯ ಇಲಾಖೆ ಹಕ್ಕುಪತ್ರವನ್ನು ನೀಡದೆ ರೈತರಿಗೆ ವಂಚನೆ ಮಾಡುತ್ತಿದೆ ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನ.ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.
    ಸಮಿತಿಯ ಪದಾಧಿಕಾರಿಗಳೊಂದಿಗೆ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಹಕ್ಕುಪತ್ರ ನೀಡುವ ಬಗ್ಗೆ ಸರ್ಕಾರದ ಆದೇಶದ ಪ್ರತಿ ನಿಮ್ಮ ಬಳಿ ಇಲ್ಲದಿದ್ದರೆ ನಾನು ಕೂಡುತ್ತೇನೆ. ಇದರ ಆಧಾರದ ಮೇಲೆ ರೈತರಿಗೆ ಹಕ್ಕುಪತ್ರ ನೀಡಿ ಎಂದು ಆಗ್ರಹಿಸಿದರು.
    ಸರ್ಕಾರ ಈ ಹಿಂದೆ ಅನೇಕ ಆದೇಶಗಳನ್ನು ಮಾಡಿದೆ. ರೈತರು ಸಣ್ಣ ಹಿಡುವಳಿದಾರರಾಗಿದ್ದರೆ, ಭೂಹೀನರಾಗಿದ್ದರೆ, ಬಡವರಾಗಿದ್ದು ಪರಿಶಿಷ್ಟ ಪಂಗಡದವರಾಗಿದ್ದರೆ ಅಂತಹ ರೈತರಿಗೆ 3 ಎಕರೆಯವರೆಗೆ ಜಮೀನು ಮಂಜೂರು ಮಾಡಬಹುದು ಎಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಏಳು ಬಾರಿ ಸರ್ಕಾರಿ ಆದೇಶವನ್ನು ಮಾಡಿದೆ. ಆದರೆ ಈ ಆದೇಶಗಳಿಗೆ ಅಧಿಕಾರಿಗಳು ಯಾವ ಬೆಲೆಯನ್ನು ನೀಡುತ್ತಿಲ್ಲ. ರೈತರಿಗೆ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಇದು ಖಂಡನೀಯ ಎಂದರು.
    ಏಳು ಬಾರಿ ಸರ್ಕಾರದ ಆದೇಶದ ಬಗ್ಗೆ ಜನಪ್ರತಿನಿಧಿಗಳಿಗೂ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ. ಅಲ್ಲದೆ ಶಾಸಕರಾದವರು ಸರ್ಕಾರಿ ಆದೇಶವಾಗಿರುವ ಬಗ್ಗೆ ತಿಳಿವಳಿಕೆ ಹೊಂದಿಲ್ಲ. ಅಧಿಕಾರಿಗಳಿಗೆ ಸೂಚನೆಯನ್ನು ನೀಡಿಲ್ಲ. ಇದು ಮಲೆನಾಡಿನ ರ‌್ಯೆತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.
    4,300 ಅರ್ಜಿದಾರರು ಅರ್ಹ: ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿದ ಆದೇಶದ ಅಡಿಯಲ್ಲಿ ಸುಮಾರು 4300 ಅರ್ಜಿದಾರರು ಅರ್ಹರಾಗಿದ್ದಾರೆ. ಇಂತಹವರಿಗೆ ಭೂಮಿ ಹಕ್ಕು ನೀಡಲು ಅವಕಾಶವಿದ್ದರೂ ಈವರೆಗೆ ನೀಡಿಲ್ಲ. ಅಲ್ಲದೆ ಈ ಹಿಂದೆ ಅರಣ್ಯ ಹಕ್ಕುಪತ್ರದ ಅರ್ಜಿಗಳ ಪರಿಶೀಲನೆಯಲ್ಲಿ ಸಾವಿರಾರು ಅರ್ಜಿಗಳನ್ನು ವಜಾ ಮಾಡಲಾಗಿದೆ. ಇಂತಹ ಅರ್ಜಿಗಳನ್ನು ಮರುಪರಿಶೀಲನೆ ಮಾಡಿ ಸಣ್ಣ ಸಣ್ಣ ಕಾನೂನು ತಿದ್ದುಪಡಿಗಳು ಆಗಬೇಕಿದ್ದರೆ ಅದನ್ನು ಸರ್ಕಾರದ ಗಮನಕ್ಕೆ ತಂದು ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ತೀ.ನ.ಶ್ರೀನಿವಾಸ್ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts