More

    ಸರಿಯಾದ ಸಂಚಾರ ಮಾರ್ಗವನ್ನು ಸೂಚಿಸಿ

    ಶಿರಸಿ: ಮಾರಿಕಾಂಬಾ ಜಾತ್ರೆ ವೇಳೆ ನಗರದಲ್ಲಿ ಪೊಲೀಸ್ ಇಲಾಖೆ ಸೂಚಿಸಿದ ಮಾರ್ಗಗಳು ಸಂಚಾರಕ್ಕೆ ಅಯೋಗ್ಯವಾಗಿದ್ದು, ಅದನ್ನು ಬದಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಸಾರ್ವಜನಿಕರು ಒತ್ತಾಯಿಸಿದರು.

    ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಜಿ.ಜಿ.ಹೆಗಡೆ ಕಡೆಕೋಡಿ ಮಾತನಾಡಿ, ಸುಮಾರು 25 ಲಕ್ಷ ಜನರು ಭಾಗವಹಿಸುವ ಜಾತ್ರೆಗೆ ಪ್ರಮುಖ ಸಂಚಾರಕ್ಕೆ ಚಿಕ್ಕ ಮಾರ್ಗಗಳನ್ನು ಬಳಸಲಾಗುತ್ತಿದೆ. ಚಿಕ್ಕ ವಾಹನಗಳು ಸಂಚರಿಸಲು ಕಷ್ಟವಾಗುವ ಜಾಗದಲ್ಲಿ ದೊಡ್ಡ ವಾಹನಗಳು ಸಂಚರಿಸುವುದಾದರೂ ಹೇಗೆ? ಪೊಲೀಸ್ ಇಲಾಖೆ ಸಿದ್ಧಪಡಿಸಿದ ನೂತನ ಮಾರ್ಗಗಳು ಅವೈಜ್ಞಾನಿಕವಾಗಿವೆ. ಜಾತ್ರೆಯ ವೇಳೆಯೇ ಪಿಯುಸಿ ಪರೀಕ್ಷೆ ಆರಂಭವಾಗಲಿದೆ. ಆದರೆ, ನಗರದ ಮಾರಿಕಾಂಬಾ ಕಾಲೇಜಿನಲ್ಲಿ ಅದೇ ಸಂದರ್ಭದಲ್ಲಿ ರ್ಪಾಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಹೇಳಿದರು.

    ಬಾಬುದಾರ ಜಗದೀಶ ಗೌಡ ಮಾತನಾಡಿ, ಜಾತ್ರೆ ವೇಳೆ ಟ್ರಾಫಿಕ್ ಸಮಸ್ಯೆ ಹೆಚ್ಚುವುದರಿಂದ ಬೈಪಾಸದದ ರಸ್ತೆ ಬಳಸಿಕೊಂಡು ಶೇ.40ರಷ್ಟು ಸಮಸ್ಯೆ ತಪ್ಪಿಸಬಹುದು. ಈ ಬಗ್ಗೆ ಗಮನ ನೀಡಬೇಕು ಎಂದರು.

    ನಗರಸಭೆ ಸದಸ್ಯ ಗಣಪತಿ ನಾಯ್ಕ ಮಾತನಾಡಿ, ಮಕ್ಕಳಿಗೆ ಪರೀಕ್ಷೆಗೆ ಸಮಸ್ಯೆಯಾಗದಂತೆ ಕ್ರಮವಹಿಸಬೇಕು. ಅಮ್ಯೂಸ್ಮೆಂಟ್ ಜಾಗಕ್ಕೆ ವಿಪರೀತ ಬಾಡಿಗೆ ಹೆಚ್ಚಿಸಲಾಗಿದ್ದು, ಅದನ್ನು ಇಳಿಸಬೇಕು ಎಂದು ಹೇಳಿದರು.

    ಕಾನಗೋಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಜಲಜಾಕ್ಷಿ ಹೆಗಡೆ, ಕುಡಿಯುವ ನೀರು ಶುದ್ಧವಾಗಿರುವಂತೆ ನೋಡಬೇಕು. ಆರೋಗ್ಯ ಸಂಬಂಧಿ ವ್ಯವಸ್ಥೆ ಸಮರ್ಪಕವಾಗುವಂತೆ ನೋಡಬೇಕು ಎಂದರು.

    ಆಟೋ ಚಾಲಕ-ಮಾಲೀಕ ಸಂಘದ ಸದಸ್ಯ ಈಶ್ವರ ಮಾತನಾಡಿ, ಬಸ್ ನಿಲ್ದಾಣ ವೃತ್ತ, ಬನವಾಸಿ ರಸ್ತೆ ಸೇರಿ ಹಲವೆಡೆ ಬೀದಿ ದೀಪಗಳಿಲ್ಲ. ನಗರಸಭೆ ತಕ್ಷಣ ಕ್ರಮವಹಿಸಬೇಕು. ರಿಕ್ಷಾದವರಿಗೆ ದರದ ವಿಚಾರವಾಗಿ ಪೊಲೀಸ್ ಇಲಾಖೆ ಸೂಚಿಸಿದ ನಿಯಮ ಸಡಿಲಿಸಬೇಕು ಎಂದರು.

    ಜನತೆಯ ಸಲಹೆ ಆಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ, ಪೊಲೀಸ್ ಇಲಾಖೆ ಸೂಚಿಸಿದ ಹೊಸ ಮಾರ್ಗಗಳಲ್ಲಿ ಪ್ರಾಯೋಗಿಕ ಪರೀಕ್ಷೆ ಕೈಗೊಂಡು ಯಶಸ್ವಿಯಾದರೆ ಮಾತ್ರ ಸಂಚಾರ ಆರಂಭಿಸಲಾಗುವುದು ಎಂದರು. ಜಾತ್ರೆ ಸುಸೂತ್ರವಾಗಿ ನಡೆಸಲು ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗುವುದು. ಸಾಕಷ್ಟು ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಇಲಾಖೆ ಕೈಗೊಂಡ ಕ್ರಮಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

    ಈ ವೇಳೆ ಡಿವೈಎಸ್ಪಿ ಜಿ.ಟಿ. ನಾಯಕ, ಶಿರಸಿ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ ನಾಯ್ಕ, ನಗರಸಭೆ ಅಧಿಕಾರಿ ಎಸ್.ಉಮೇಶ ಇದ್ದರು. ಮಾರುಕಟ್ಟೆ ಠಾಣೆ ಪಿಎಸ್​ಐ ನಾಗಪ್ಪ ನಿರೂಪಿಸಿದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts