More

    ಸಮಾಜ ಒಡೆಯುವ ಸಂಚು ಅರಿಯಿರಿ

    ಬೀದರ್: ಜಾತಿ ವಿಷಯ ಮುಂದಿಟ್ಟುಕೊಂಡು ಕೆಲವರು ಸಣ್ಣ ಸಣ್ಣ ವಿಷಯಗಳನ್ನೇ ವೈಭವೀಕರಿಸುತ್ತ ಸಮಾಜ ಒಡೆಯುವ ವ್ಯವಸ್ಥಿತ ಸಂಚು ರೂಪಿಸುತ್ತಿದ್ದಾರೆ. ಜನರು ಇಂಥವರ ನಿಜ ಬಣ್ಣ ಅರಿತು ದೇಶ, ಸಮಾಜ ಕಟ್ಟಲು ಒಗ್ಗಟ್ಟಾಗುವುದು ಇಂದಿನ ಅಗತ್ಯವಾಗಿದೆ ಎಂದು ವಿಶ್ವ ಹಿಂದು ಪರಿಷತ್ ಕೇಂದ್ರೀಯ ಸಹ ಕಾರ್ಯದರ್ಶಿ, ಅಯೋಧ್ಯೆ ರಾಮಮಂದಿರ ನಿರ್ಮಾಣ ಉಸ್ತುವಾರಿಗಳಲ್ಲೊಬ್ಬರಾದ ಗೋಪಾಲ್ ಹೇಳಿದರು.

    ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್​ಎಸ್​) ಸಾಮಾಜಿಕ ಸಾಮರಸ್ಯ ವೇದಿಕೆಯಿಂದ ಭಾನುವಾರ ಸಂಜೆ ನಗರದ ಹೋಟೆಲ್ ಸುಪ್ರಿಯಾದಲ್ಲಿ ಹಮ್ಮಿಕೊಂಡಿದ್ದ ವಿವಿಧ ಸಮಾಜದ ಪ್ರಮುಖರೊಂದಿಗೆ ಸಂವಾದ ಗೋಷ್ಠಿಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಸದೃಢ ಭಾರತವನ್ನು ಕಟ್ಟಿ ಮತ್ತೆ ನಾವು ವಿಶ್ವ ಗುರುವಿನ ಸ್ಥಾನದಲ್ಲಿ ನಿಲ್ಲಬೇಕೆಂಬ ನಿಟ್ಟಿನಲ್ಲಿ ಭರದ ಪ್ರಯತ್ನ ಸಾಗಿವೆ. ಆದರೆ ನಮ್ಮಲ್ಲಿಯ ಕೆಲವರು ಜಾತಿ ವಿಷ ಬೀಜ ಬಿತ್ತ್ತಿ, ಹೊಸ ಹೆಜ್ಜೆಗೆ ಅಡ್ಡಗಾಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ದೇಶದ ನಾಗರಿಕರು ಇದಕ್ಕೆ ಯಾವತ್ತೂ ಅವಕಾಶ, ಆಸ್ಪದ ಕೊಡಬಾರದು. ಎಲ್ಲರೂ ಒಟ್ಟಾಗಿ, ಸಂಘಟಿತರಾಗಿ ನವ ಭಾರತ ನಿರ್ಮಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

    ಡಾ. ಅಂಬೇಡ್ಕರ್ ಸೇರಿ ಅನೇಕ ಮಹಾಪುರುಷರು ಜಾತಿ, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶತಪ್ರಯತ್ನ ಮಾಡಿದ್ದರು. ನಾವೆಲ್ಲ ಸೇರಿ ಅವರ ಆಶಯದಂತೆ ಸಮಾಜ ಕಟ್ಟಬೇಕಾಗಿದೆ. ಜಾತಿ, ಜಾತಿಗಳ ನಡುವಿನ ಅಂತರ, ವೈಮನಸ್ಸು ಹೋಗಬೇಕು. ಸಾಮರಸ್ಯ ಎಲ್ಲರ ತತ್ವವಾಗಬೇಕು. ಜಾತಿ ಅಭಿಮಾನ ಹೊಂದಿರಬೇಕೇ ವಿನಃ ಅನ್ಯ ಜಾತಿ ಬಗ್ಗೆ ದುರಾಭಿಮಾನ ಇರಬಾರದು. ಯಾವ ಸಮಾಜ, ವರ್ಗಕ್ಕೂ ಅನ್ಯಾಯವಾಗಬಾರದು. ಎಲ್ಲರನ್ನೂ ಸೇರಿಸಿಕೊಂಡು ಸುಂದರ ಸಮಾಜ ಕಟ್ಟುವುದೇ ಭಾರತದ ಸಂಸ್ಕೃತಿ ತಿರುಳಾಗಿದೆ ಎಂದರು.

    ಶರೀರಿದ ಎಲ್ಲ ಅಂಗಾಂಗಗಳು ಸರಿ ಇದ್ದರೆ ಶರೀರಕ್ಕೆ ಬೆಲೆ ಇದೆ. ಅದರಂತೆ ಹಿಂದುಗಳಿದ್ದಲ್ಲಿ ಮಾತ್ರ ಭಾರತಕ್ಕೆ ಬೆಲೆ, ಗೌರವ ಇದೆ. ಜನಗಣತಿ, ಏನಾದರೂ ಹೊಸ ಯೋಜನೆ ಅಥವಾ ಚುನಾವಣೆ ಬಂದಾಗ ಜಾತಿ ವಿಷ ವರ್ತುಲ ನಮಗೆ ಸುತ್ತಿಕೊಳ್ಳುತ್ತಿರುವುದು ಸಲ್ಲದು. ಇದು ದೇಶದ ಸಮಗ್ರ ಅಭಿವೃದ್ಧಿಗೆ ಪೆಟ್ಟು ನೀಡಬಲ್ಲದು. ಚುನಾವಣೆ ಹೊತ್ತಲ್ಲಿ ಜಾತಿ ಜಂಜಾಟ ಯಾಕೆ ಭುಗಿಲೇಳುತ್ತದೆ ಎಂಬ ಕುರಿತು ಎಲ್ಲರೂ ಗಂಭೀರ ಚಿಂತನೆ ನಡೆಸಬೇಕು. ಹಳ್ಳಿಯಿಂದ ಹಿಡಿದು ದಿಲ್ಲಿವರೆಗೆ ಎಲ್ಲರೂ ಒಂದಾಗಬೇಕು. ನಮ್ಮಲ್ಲಿನ ಆಚರಣೆಗಳು ಬೇರೆ ಇರಬಹುದು. ಆದರೆ ಎಲ್ಲರೂ ಒಂದೇ ಎಂದು ಬದುಕು ನಡೆಸಬೇಕು. ನಮ್ಮೆಲ್ಲರ ಅಂತಃಸತ್ವ ಒಂದೇ ಇದೆ. ಸ್ವಾಭಿಮಾನ, ಸಹಬಾಳ್ವೆ, ಸಾಮರಸ್ಯದಿಂದ ಬದುಕಿದರೆ ಆ ಬದುಕಿಗೆ ಬೆಲೆಯಿದೆ ಎಂದು ಹೇಳಿದರು.

    ಚಿದಂಬರಾಶ್ರಮ ಸಿದ್ಧಾರೂಢ ಮಠ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರ್​ಎಸ್​ಎಸ್ ಮುಖಂಡರಾದ ಶಿವಲಿಂಗ ಕುಂಬಾರ, ಶಿವರಾಜ ಹಲಶೆಟ್ಟಿ ಇದ್ದರು. ವೇದಿಕೆ ಜಿಲ್ಲಾ ಸಂಯೋಜಕ ಹಾವಶೆಟ್ಟಿ ಪಾಟೀಲ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿವಿಧ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts