More

    ಸಮಗ್ರ ಕೃಷಿ ಪದ್ಧತಿಯಿಂದ ಪ್ರಗತಿ ಸಾಧಿಸಿ- ಸಚಿವ ಬಿ.ಸಿ.ಪಾಟೀಲ್

    ದಾವಣಗೆರೆ: ರೈತರು ಕೆಲವೇ ಬೆಳೆಗಳಿಗೆ ಸೀಮಿತವಾಗದೆ ಸಮಗ್ರ ಕೃಷಿ ಮಾಡುವ ಮೂಲಕ ಪ್ರಗತಿ ಸಾಧಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಲಹೆ ನೀಡಿದರು.
    ಮೈಕ್ರೋಬಿ ಫೌಂಡೇಶನ್ ಹಾಗೂ ಯು.ಎಸ್.ಕಮ್ಯುನಿಕೇಷನ್ ಸಹಯೋಗದಲ್ಲಿ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
    ರೈತರು ಬೆಳೆ ಬೆಳೆದರೆ ಸಾಲದು. ಅವುಗಳನ್ನು ಸಂಸ್ಕರಿಸಿ ಮಾರಾಟ ಮಾಡುವಂಥ ಉದ್ಯಮಿಗಳಾಗಿ ಬೆಳೆಯಬೇಕು. ಅನೇಕ ಅನ್ನದಾತರು ಸ್ವಂತ ಬಲದ ಮೇಲೆ ಉದ್ಯಮಿಗಳಾಗಿದ್ದಾರೆ. 2023ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳಬೇಕೆಂಬುದು ಕೇಂದ್ರ ಸರ್ಕಾರದ ಆಶಯ. ಕೃಷಿಯನ್ನು ಉದ್ಯಮವಾಗಿಸಿಕೊಂಡಲ್ಲಿ ಭೂಮಿತಾಯಿ ಕೈಬಿಡುವುದಿಲ್ಲ ಎಂದು ಹೇಳಿದರು.
    ಇತ್ತೀಚೆಗೆ ರೈತರು ಹೆಚ್ಚು ಬೆಳೆದರೂ ಅವರ ಜೇಬು ತುಂಬುತ್ತಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಮಳೆ ಕಾರಣವಲ್ಲ. ಕಡಿಮೆ ನೀರಿರುವ ಕೋಲಾರ ಜಿಲ್ಲೆಗಿಂತಲೂ ನೀರಾವರಿ ಪ್ರದೇಶವಾದ ಮಂಡ್ಯ ಜಿಲ್ಲೆಯಲ್ಲಿಯೇ ಆತ್ಮಹತ್ಯೆ ಹೆಚ್ಚಿದೆ. ಅಲ್ಲಿನವರು ಭತ್ತ-ಕಬ್ಬನ್ನಷ್ಟೇ ಬೆಳೆಯುತ್ತಾರೆ. ಇವುಗಳ ನಷ್ಟದಿಂದಾಗಿ ಆತ್ಮಹತ್ಯೆ ಹಾದಿ ಹಿಡಿಯುತ್ತಾರೆ.
    ಕೋಲಾರ ಭಾಗದ ರೈತರು ಲಭ್ಯವಿರುವ ನೀರನ್ನೇ ಬಳಸಿಕೊಂಡು ಸಮಗ್ರ ಕೃಷಿ ಮಾಡುತ್ತಿರುವುದರಿಂದ ಒಂದು ಬೆಳೆಯಲ್ಲಿ ನಷ್ಟ ಹೊಂದಿದರೂ ಮತ್ತೊಂದು ಬೆಳೆ ಅವರ ಕೈಹಿಡಿಯುತ್ತದೆ. ಅಂತರ ಬೆಳೆಯಾಗಿ ತೊಗರಿ ಬೆಳೆದು ಯಶಸ್ಸು ಕಂಡಿದ್ದಾರೆ ಎಂದು ಹೇಳಿದರು.
    ಸಾವಯವ ಕೃಷಿ, ಸಿರಿಧಾನ್ಯಗಳನ್ನು ಬೆಳೆದು ಸ್ವಾವಲಂಬನೆ ಸಾಧಿಸಬೇಕು. ಫೆ.22ರಿಂದ ಬೆಂಗಳೂರಿನಲ್ಲಿ ಸಿರಿಧಾನ್ಯಗಳ ಮೇಳ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ನಿರೀಕ್ಷೆ ಇದೆ ಎಂದರು.
    ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಆರ್. ಹುಲ್ಲುನಾಚೇಗೌಡ ಮಾತನಾಡಿ ಪರಿಸರ ಪೂರಕವಾಗಿ ಬೇಸಾಯ ಮಾಡುವುದೇ ವಿಜ್ಞಾನ ಕೃಷಿ. ನಿಸರ್ಗಕ್ಕೆ ಮಾರಕವಾದುದೇ ಅಜ್ಞಾನದ ಕೃಷಿ. ಊಟ, ಬಟ್ಟೆ, ಮನೆ ಮೊದಲಾದ ಸಕಲ ಸಂಪತ್ತು ದೊರಕುವುದು ಮಣ್ಣಿನಿಂದಲೇ. ಆದರೆ ಅದೇ ಮಣ್ಣನ್ನು ರಾಸಾಯನಿಕ ಬಳಸಿ ಮಣ್ಣಿನ ಜತೆಗೆ ಆಹಾರವನ್ನೂ ವಿಷಯುಕ್ತ ಮಾಡುತ್ತಿದ್ದೇವೆ. ರಾಸಾಯನಿಕ ಬಳಕೆಯನ್ನು ಇಂದಿನಿಂದಲೇ ತಡೆದರೆ ಎಲ್ಲರ ಭವಿಷ್ಯ ಉತ್ತಮವಾಗಿರಲಿದೆ ಎಂದರು.
    ಬಸವನಬಾಗೇವಾಡಿಯ ಪ್ರಗತಿಪರ ರೈತ ಶಿವಾನಂದ ಮಂಗಾನೂರ ಹಾಗೂ ಇತರರನ್ನು ಸನ್ಮಾನಿಸಲಾಯಿತು. ರೈತ ಮುಖಂಡರಾದ ಬಲ್ಲೂರು ರವಿಕುಮಾರ್, ಹೊನ್ನೂರು ಮುನಿಯಪ್ಪ, ಹೆದ್ನೆ ಮುರುಗೇಶಪ್ಪ, ಸ್ವಸಹಾಯ ಸಂಘದ ರತ್ನಮ್ಮ, ನಿಟ್ಟೂರು ಸರೋಜಮ್ಮ, ದಿದ್ದಿಗೆ ಜಯಶ್ರೀ ಮಾತನಾಡಿದರು.
    ಧಾರವಾಡ ಕೃಷಿ ವಿವಿ ಕೃಷಿ ವಿಸ್ತರಣಾ ನಿರ್ದೇಶಕ ಪೊ. ಆರ್.ಬಿ.ಬೆಳ್ಳಿ, ಬಾಗಲಕೋಟೆಯ ಸಂವಹನ ಕೇಂದ್ರ ಹಾಗೂ ತೋಟಗಾರಿಕೆ ವಿವಿ ಪ್ರಾಧ್ಯಾಪಕ ಡಾ.ಎಸ್. ಶಶಿಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಉಪ ನಿರ್ದೇಶಕ ಡಾ. ತಿಪ್ಪೇಸ್ವಾಮಿ, ರೈತ ಮುಖಂಡ ಬಲ್ಲೂರು ರವಿಕುಮಾರ್, ಸಾವಯವ ಕೃಷಿ ಸಲಹೆಗಾರ ಮಹಾದೇವಪ್ಪ ದಿದ್ದಿಗೆ, ಯು. ಎಸ್. ಕಮ್ಯುನಿಕೇಷನ್ಸ್‌ನ ಸಿಇಒ ಜೆ.ಎಂ. ಕಾರ್ತಿಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts