More

    ಸಂಸ್ಕಾರದಿಂದ ಜೀವನ ಉಜ್ವಲ

    ತುಮಕೂರು: ಸಂಸ್ಕಾರದಿಂದ ಮಾನವ ಜೀವನ ಉಜ್ವಲಗೊಳ್ಳಲು ಸಾಧ್ಯ. ಸಂಸ್ಕೃತಿಗೆ ಬಹಳಷ್ಟು ಮಹತ್ವವನ್ನು ಈ ಧರ್ಮದ ನೆಲದಲ್ಲಿ ಕೊಡಲಾಗಿದ್ದು ನಮ್ಮ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಅಪಾರ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

    ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಗರ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ನಾಗರನವಿಲೆಯ ಶಿವಾನುಗ್ರಹ ಸೇವಾ ಸಂಘದ ಸಹಯೋಗದಲ್ಲಿ ಭಾನುವಾರ ಸಾಮೂಹಿಕ ಶ್ರೀ ಲಲಿತ ಸಹಸ್ರಾರ್ಚನೆ ಮತ್ತು ಶ್ರೀ ರಂಭಾಪುರಿ ಜಗದ್ಗುರುಗಳ ಗುರುವಂದನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಭೌತಿಕ ಬದುಕಿಗೆ ಭಗವಂತ ಕೊಟ್ಟ ಕೊಡುಗೆ ಅಪಾರವಾದದ್ದು. ಜೀವ ಜಗತ್ತಿಗೆ ಅನ್ನ, ಗಾಳಿ, ನೀರು, ಬೆಳಕು ಇವೆಲ್ಲವುಗಳನ್ನು ಕೊಟ್ಟಿದ್ದನ್ನು ಮರೆಯಲಾಗದು ಎಂದರು.

    ಗುರು ತತ್ವಕ್ಕೆ ಸಮಾನವಾದ ತತ್ವ ಇನ್ನೊಂದಿಲ್ಲ. ಎಲ್ಲ ಧರ್ಮಗಳಿಗೂ ಗುರು ಮಾರ್ಗದರ್ಶನ ಇದ್ದೇ ಇರುತ್ತದೆ. ಮಹಿಳೆಯರು ಧಾರ್ಮಿಕ ಸಂಸ್ಕೃತಿ ಆಚರಣೆಗಳನ್ನು ಪರಿಪಾಲಿಸಿಕೊಂಡು ಬರಲು ಈ ಕಾರ್ಯಕ್ರಮ ಸ್ಫೂರ್ತಿಯಾಗಿದೆ. ತುಮಕೂರಿಗೂ ಶ್ರೀರಂಭಾಪುರಿ ಪೀಠಕ್ಕೂ ಇರುವ ಸಂಬಂಧ ಅವಿನಾಭಾವವಾದುದು ಎಂದರು.

    ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ನುಗ್ಗೇಹಳ್ಳಿ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ, ಮಾಜಿ ಶಾಸಕ ಮಹಿಮಾ ಪಟೇಲ್, ಸಮಾಜದ ಹಿರಿಯ ಧುರೀಣ ಸಿ.ವಿ.ಮಹಾದೇವಯ್ಯ, ಬಾಳಯ್ಯ ಇಂಡಿಮಠ, ಎಚ್.ಎಸ್.ರವಿಶಂಕರ್, ಅತ್ತಿರೇಣುಕಾನಂದ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಪಟೇಲ್, ಟಿ.ಸಿ.ಓಹಿಲೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

    ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಚನ್ನಬಸವಾರಾಧ್ಯರು ಮತ್ತು ಸಿದ್ಧೇಶ್ವರ ಶಾಸ್ತ್ರಿಗಳು ಪೂಜಾ ಕಾರ್ಯ ನೆರವೇರಿಸಿದರು.

    ಸಾರೋಟು ಮೆರವಣಿಗೆ: ಸೋಮೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಶ್ರೀ ರಂಭಾಪುರಿ ಜಗದ್ಗುರುಗಳ ಸಾರೋಟು ಮೆರವಣಿಗೆಯು ಜೆ.ಸಿ.ರಸ್ತೆಯ ವೀರಶೈವ ಮಂಟಪದವರೆಗೆ ಪೂರ್ಣ ಕುಂಭ ವಾದ್ಯದೊಂದಿಗೆ ನಡೆಯಿತು. ಜಾನಪದ ಕಲಾಮೇಳಗಳು ಮೆರವಣಿಗೆಗೆ ಕಳೆಕಟ್ಟಿದವು.

    ಶಿವಶಕ್ತಿಯಿಂದ ನಿರ್ಮಾಣಗೊಂಡ ಈ ಜಾಗದಲ್ಲಿ ಎಲ್ಲರೂ ಶಿವನನ್ನು ಪೂಜಿಸಿ ಸತ್ಫಲಗಳನ್ನು ಪಡೆದಿದ್ದಾರೆ. ಶಿವಶಕ್ತಿಯಿಂದ ಒಳಗೊಂಡಿರುವುದೇ ವೀರಶೈವ ಧರ್ಮ ಬಾಂಧವರು ಪೂಜಿಸುವ ಇಷ್ಟಲಿಂಗ. ಅನಿಷ್ಠಗಳನ್ನು ಪರಿಹರಿಸಿ ಇಷ್ಟಾರ್ಥ ಕೊಡುವ ಶಕ್ತಿ ಇದಕ್ಕಿದೆ. ಅದೇ ದಾರಿಯಲ್ಲಿ ಶರಣರು ಮುನ್ನಡೆದು ಬಾಳಿಗೆ ಬೆಳಕು ಕಂಡರು. | ಬಾಳೆಹೊನ್ನೂರು ಶ್ರೀ ವೀರಸೋಮೇಶ್ವರ ಜಗದ್ಗುರುಗಳು, ರಂಭಾಪುರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts