More

    ಸಂಕ್ರಾಂತಿ ಮುನ್ನಾ ದಿನ ಜವರಾಯನ ಅಟ್ಟಹಾಸ ಪ್ರತ್ಯೇಕ ಅಪಘಾತಗಳಲ್ಲಿ ಏಳು ಜನರ ದುರ್ಮರಣ

    ಧಾರವಾಡ/ ಅಣ್ಣಿಗೇರಿ: ಸಂಕ್ರಾಂತಿ ಮುನ್ನಾ ದಿನ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಮಂಗಳವಾರ ಧಾರವಾಡ ಜಿಲ್ಲೆಯ ವಿವಿಧೆಡೆ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ 2 ವರ್ಷದ ಮಗು ಸೇರಿ ಒಂದೇ ಕುಟುಂಬದ ನಾಲ್ವರು ಹಾಗೂ ಮೂರು ಜನರನ್ನು ಬಲಿ ಪಡೆದಿದ್ದಾನೆ.

    ರಾಷ್ಟ್ರೀಯ ಹೆದ್ದಾರಿ 4ರ ಯರಿಕೊಪ್ಪ ಬಳಿ ಟೆಂಪೋ ಹಾಗೂ ಕಾರು ಮುಖಾಮುಖಿ ಡಿಕ್ಕಿ ಸಂಭವಿಸಿ ಕೊಪ್ಪಳದ ಭಾಗ್ಯನಗರದ ನಿವಾಸಿಗಳಾದ ರುದ್ರಪ್ಪ ಮರಕುರಿ (66) ಈರಮ್ಮ ಮರಕುರಿ (55), ಮಂಜುನಾಥ ಮರಕುರಿ (40) ಹಾಗೂ ಶಿವರಾಜ (2) ಮೃತಪಟ್ಟಿದ್ದಾರೆ. ಮಮತಾ ಮರಕುರಿ (34) ಮತ್ತು ಸಾನ್ವಿ (3) ಎಂಬುವವರು ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈರಮ್ಮ ಅವರಿಗೆ ಅನಾರೋಗ್ಯವಿದ್ದ ಕಾರಣಕ್ಕೆ ಔಷಧೋಚಾರಕ್ಕಾಗಿ ಕೊಪ್ಪಳದಿಂದ ಬೆಳಗಾವಿಗೆ ತೆರಳುತ್ತಿದ್ದರು. ಹು-ಧಾ ಮಧ್ಯದ ಬೈಪಾಸ್ ರಸ್ತೆಯ ಯರಿಕೊಪ್ಪ ಬಳಿ ಎದುರಿಗೆ ಬಂದ ಟೆಂಪೊ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡು ಮೂವರು ಕಾರಿನಲ್ಲೇ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶಿವರಾಜ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಟೆಂಪೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಎಸ್ಪಿ ವರ್ತಿಕಾ ಕಟಿಯಾರ, ಡಿಎಸ್ಪಿ ಹಾಗೂ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮತ್ತೊಂದು ಸರಣಿ ಅಪಘಾತ ಮಂಗಳವಾರ ಬೆಳಗಿನ ಜಾವ ಬೆಳಗಾವಿ ರಸ್ತೆ ಪೆಪ್ಸಿ ಫ್ಯಾಕ್ಟರಿ ಬಳಿ ನಡೆದಿದ್ದು, ಓರ್ವ ಮೃತಟ್ಟಿದ್ದು, ಆರು ಜನ ಗಾಯಗೊಂಡಿದ್ದಾರೆ. ಬೆಳಗಾವಿ ಕಡೆಯಿಂದ ಧಾರವಾಡ ಕಡೆಗೆ ಆಗಮಿಸುತ್ತಿದ್ದ ಕಾರಿನ ಟೈರ್ ಸ್ಪೋಟಗೊಂಡ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಧಾರವಾಡದಿಂದ ನರೇಂದ್ರ ಕಡೆಗೆ ಹೊರಟಿದ್ದ ಟಾಟಾ ಏಸ್ ಮತ್ತು ಬೈಕ್​ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ತಾಲೂಕಿನ ನರೇಂದ್ರ ಗ್ರಾಮದ ಲಕ್ಷ್ಮಣಗೌಡ ಶಂಕರಗೌಡ ಪಾಟೀಲ (35) ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಉಳಿದ 6 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಬೈಕ್ ಹಾಗೂ ಬಸ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಶಿವಪ್ಪ ಕಾಳೆ (25) ಹಾಗೂ ದುರ್ಗಪ್ಪ (30) ಮೃತ ವ್ಯಕ್ತಿಗಳು. ಇನ್ನೊಬ್ಬನಿಗೆ ಗಂಭೀರ ಗಾಯವಾಗಿದ್ದು, ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆಗೆ ರವಾನಿಸಲಾಗಿದೆ.

    ಮಾನವೀಯತೆ ಮೆರೆದ ಸಿಬ್ಬಂದಿ: ಯರಿಕೊಪ್ಪ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಮೃತ ಪಟ್ಟವರ ಮೈಮೇಲಿನ ಆಭರಣಗಳನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಆಂಬುಲೆನ್ಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. 108 ಆಂಬುಲೆನ್ಸ್ ನಲ್ಲಿ ಗಾಯಾಳುಗಳನ್ನು ಹಾಗೂ ಮೃತಪಟ್ಟವರನ್ನು ಸಾಗಿಸುವ ಸಂದರ್ಭದಲ್ಲಿ ವಾಹನದ ಚಾಲಕ ಕುಮಾರಸ್ವಾಮಿ ಮತ್ತು ವೈದ್ಯಕೀಯ ಸಿಬ್ಬಂದಿ ಮಂಜುನಾಥ ಎಂಬುವವರು ಬಂಗಾರದ ಕಿವಿ ಓಲೆ, ಬಳೆ, ಉಂಗುರ ಸೇರಿ ಇತರ ಆಭರಣಗಳನ್ನು ಪೊಲೀಸರಿಗೆ ಒಪ್ಪಿಸಿ ಮಾನವೀಯತೆ ಮರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts