More

    ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸದ್ಗುರು ಸಂಸ್ಥೆ ಆಸರೆ

    ಹೊಸದುರ್ಗ: ಸೂರೊಂದು ನಿರ್ಮಿಸಿಕೊಂಡು ಸುಂದರ ಬದುಕು ನಡೆಸುವ ಕನಸು ಕಂಡಿದ್ದ ಕುಟುಂಬಕ್ಕೆ ಮನೆ ಯಜಮಾನನ ಅಕಾಲಿಕ ಮರಣ ದಿಕ್ಕುತೋಚದಂತೆ ಮಾಡಿತ್ತು.

    ಜೀವನ ನಿರ್ವಹಣೆಯೇ ಕಷ್ಟವಾಗಿದ್ದ ಸಂದರ್ಭದಲ್ಲಿ ಮನೆ ಕಾಮಗಾರಿ ಪೂರ್ಣ ಕನಸಿನ ಮಾತೇ ಆಗಿತ್ತು. ಇಂತಹ ಸಂದರ್ಭ ನೆರವಿಗೆ ಬಂದಿದ್ದು ಸದ್ಗುರು ಆಯುರ್ವೇದ ಸಂಸ್ಥೆ.

    ಪಟ್ಟಣದ ಎನ್‌ಇಎಸ್ ಬಡಾವಣೆಯ ನಿವಾಸಿ ಸಾಗರ್, ಕಾರು ಮೆಕಾನಿಕ್ ಗ್ಯಾರೇಜ್ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡಿದ್ದರು. ಜತೆಗೆ ಮನೆ ನಿರ್ಮಾಣ ಆರಂಭಿಸಿದ್ದರು. ಇಂತಹ ಸಂದರ್ಭದಲ್ಲಿ ಕಳೆದ ಆರು ತಿಂಗಳ ಹಿಂದೆ ಗ್ಯಾರೆಜ್‌ನಲ್ಲಿ ಕೆಲಸ ಮಾಡುವಾಗ ವಾಹನದ ಇಂಜಿನ್ ಮೇಲೆ ಬಿದ್ದು ಮೃತಪಟ್ಟಿದ್ದರು.

    ಪತ್ನಿ ಹಾಗೂ ಸಣ್ಣ ವಯಸ್ಸಿನ ಮಕ್ಕಳಿದ್ದು, ಯಾವುದೇ ಆಸರೆ ಇಲ್ಲದ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಮನೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತ್ತು.

    ಸ್ನೇಹಿತರು, ಹಿತೈಷಿಗಳು ಮನೆ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಿದ್ದರು. ಆದರೂ ಪೂರ್ಣಗೊಳಿಸುವ ಕಾರ್ಯಕ್ಕೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ವಿಷಯ ತಿಳಿದ ಸದ್ಗುರು ಆಯುರ್ವೇದ ಸಂಸ್ಥೆಯ ಮಾಲೀಕ ಡಿ.ಎಸ್.ಪ್ರದೀಪ್, ಸ್ಥಳಕ್ಕೆ ಭೇಟಿ ನೀಡಿ ಮನೆ ಪೂರ್ಣಗೊಳಿಸಲು ಸಂಪೂರ್ಣ ಆರ್ಥಿಕ ನೆರವು ನೀಡುವ ಭರವಸೆ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇವರ ಈ ಕಾರ್ಯ ಜನರ ಮೆಚ್ಚುಗೆಗೆ ಕಾರಣವಾಗಿದೆ.

    ಉತ್ತಮ ಸಂದೇಶ: ಮೆಕಾನಿಕ್ ವೃತ್ತಿ ನಡೆಸುತ್ತಿದ್ದ ಸಾಗರ್, ಸಾಮಾಜಿಕ ಸೇವೆಯಲ್ಲಿ ಒಳ್ಳೆಯ ಹೆಸರು ಮಾಡಿದ್ದ. ಮನೆ ನಿರ್ಮಾಣ ಆತನ ಕನಸು ಆಗಿತ್ತು. ನಮ್ಮ ಸಂಸ್ಥೆ ಮೂಲಕ ಮನೆ ಕಾಮಗಾರಿ ಪೂರ್ಣಗೊಳಿಸಲು ಆರ್ಥಿಕ ನೆರವು ನೀಡಲಿದ್ದೇವೆ. ನೋವಿನಲ್ಲಿರುವ ಜನರಿಗೆ ಸ್ಪಂದಿಸುವ ಗುಣ ಜನರಲ್ಲಿ ಹೆಚ್ಚಾಗಬೇಕು ಎಂಬ ಸಂದೇಶ ರವಾನಿಸುವುದು ನಮ್ಮ ಉದ್ದೇಶ.-ಡಿ.ಎಸ್.ಪ್ರದೀಪ್, ಅಧ್ಯಕ್ಷ, ಸದ್ಗುರು ಆಯುರ್ವೇದ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts