More

    ಶ್ರೀಗಂಧದ ಮರದ ತುಂಡು ಕದಿಯುತ್ತಿದ್ದವನ ಬಂಧನ

    ಮುಂಡಗೋಡ: ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಶ್ರೀಗಂಧದ ಮರದ ತುಂಡುಗಳನ್ನು ಕದಿಯುತ್ತಿದ್ದ ಓರ್ವ ಆರೋಪಿಯನ್ನು ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಬಂಧಿಸಿದ್ದಾರೆ ಮತ್ತೊಬ್ಬ ಪರಾರಿಯಾಗಿದ್ದಾನೆ.

    ಶಿಗ್ಗಾಂವಿ ತಾಲೂಕಿನ ಹೊಸೂರ ಗ್ರಾಮದ ಅರುಣಕುಮಾರ ಸುಣಗಾರ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು ಇದೇ ಗ್ರಾಮದ ಭೀಮಣ್ಣ ಸುಣಗಾರ ಎಂಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಬಂಧಿತ ಆರೋಪಿಯಿಂದ ಒಟ್ಟು 2.50ಲಕ್ಷ ರೂ. ಮೌಲ್ಯದ 26ಕೆ.ಜಿ. ಶ್ರೀಗಂಧದ ಕಟ್ಟಿಗೆ ಮತ್ತು ಒಂದು ಬೈಕ್ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಡಿಎಫ್​ಒ ಗೋಪಾಲಕೃಷ್ಣ ಹೆಗಡೆ ಮತ್ತು ಎಸಿಎಫ್ ಎಸ್.ಎಂ.ವಾಲಿ ಮಾರ್ಗದರ್ಶನದಲ್ಲಿ ಆರ್​ಎಫ್​ಒ ಸುರೇಶ ಕುಳ್ಳೊಳ್ಳಿ, ಉಪವಲಯ ಅರಣ್ಯಾಧಿಕಾರಿ ಯಲ್ಲಾನಾಯಕ ಹಮಾನಿ, ಬಸವರಾಜ ಪೂಜಾರಿ, ಶಂಕರ ಬಾಗೇವಾಡಿ, ಗಿರೀಶ ಕೊಳೇಕರ, ಶಿವಾನಂದ ಕಡಹಟ್ಟಿ, ಅರಣ್ಯ ರಕ್ಷಕ ಮುತ್ತಣ್ಣ ಹಿರೇಕಣಗಿ ಮತ್ತು ದೇವರಾಜ ಆಡಿನ್ ಕಾರ್ಯಾಚರಣೆ ನಡೆಸಿದ್ದರು.

    ಶಿರಸಿಯಲ್ಲೂ ಮೂವರ ಸೆರೆ: ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಶಿರಸಿ ಅರಣ್ಯ ಇಲಾಖೆ ಸಿಬ್ಬಂದಿ ತಾಲೂಕಿನ ಬಾಳೆಗದ್ದೆ ಬಳಿ ಗುರುವಾರ ಬಂಧಿಸಿದ್ದಾರೆ. ನೀರ್ನಳ್ಳಿಯ ಶ್ರೀಕಾಂತ ಭೋವಿವಡ್ಡರ್, ಸತೀಶ ಭೋವಿವಡ್ಡರ್ ಹಾಗೂ ಬಾಳೆಗದ್ದೆಯ ಶಿವು ಭೋವಿವಡ್ಡರ್ ಬಂಧಿತ ಆರೋಪಿಗಳು. ಇವರಿಂದ ಒಟ್ಟು 68 ಕೆ.ಜಿ. ಶ್ರೀಗಂಧದ ಕಟ್ಟಿಗೆ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

    ಜಿಂಕೆ ಮಾಂಸ ಮಾರಾಟಕ್ಕೆ ಯತ್ನ, ಅರೆಸ್ಟ್

    ದಾಂಡೇಲಿ: ನಗರ ಸಮೀಪದ ಅರಣ್ಯದಲ್ಲಿ ಜಿಂಕೆ ಕೊಂದು ಅದರ ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಗುರುವಾರ ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಜನತಾ ಕಾಲನಿಯ ಸಂದೀಪ (36) ಪರುಶರಾಮ ಜಾದವ (27)ಮತ್ತು ಗೋಪಾಲ ಮೇದಾರ ಬಂಧಿತರು. ಆರೋಪಿಗಳ ಬಳಿ ದೊರೆತ 16 ಕೆ.ಜಿ. ಜಿಂಕೆ ಮಾಂಸ, ಪ್ರಾಣಿ ಕೊಲ್ಲಲು ಬಳಸಿದ ಕೊಡಲಿಯನ್ನು ವಶ ಪಡಿಸಿಕೊಳ್ಳಲಾಗಿದೆ. ಹಳಿಯಾಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ ಅಜ್ಜಯ್ಯ ಜಿ.ಆರ್., ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ನಿಂಗಾನಿ ಅವರ ಮಾರ್ಗದರ್ಶನದಲ್ಲಿ ವಿನೋಲಿ ವಿಭಾಗದ ವಲಯ ಅರಣ್ಯ ಅಧಿಕಾರಿ ಬಸವರಾಜ ಎಂ., ಉಪವಲಯ ಅರಣ್ಯ ಅಧಿಕಾರಿ ರಾಮನಗೌಡ, ಬಸವನಗೌಡ, ಎಸ್.ಎಸ್. ಬೈಲಾ, ಅರಣ್ಯ ರಕ್ಷಕ ಶ್ರೀಶೈಲ ಬರ್ಲಿ, ಪ್ರವೀಣ, ಮ್ಯಾಗೇರಿ, ಸಂದೀಪ ದಾಳಿಯಲ್ಲಿ ಭಾಗವಹಿಸಿದ್ದರು.

    ವಿದ್ಯುತ್ ತಂತಿ ಬಿದ್ದು ಕರು ಸಾವು

    ಮುಂಡಗೋಡ: ಮೇಯುತ್ತಿದ್ದ ಕರುವಿನ ಮೇಲೆ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಹರಿದು ಬಿದಿದ್ದರಿಮದ ಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಹುನಗುಂದ ಗ್ರಾಮದಲ್ಲಿ ಮಂಗಳ ವಾರ ನಡೆದಿದೆ. ಹುನ ಗುಂದದ ಕಲ್ಲಪ್ಪ ಬೆಲವಂತರ ಎಂಬುವರಿಗೆ ಸೇರಿದ ಕರು ಇದಾಗಿದ್ದು, ತಮ್ಮ ಗದ್ದೆಯಲ್ಲಿ ಅದನ್ನು ಮೇಯಿಸಲು ಬಿಟ್ಟಿದ್ದರು. ಮೇಯುತ್ತ ಪಕ್ಕದ ಫಕೀರಪ್ಪ ಬಿಸನಳ್ಳಿ ಎಂಬುವರ ಗದ್ದೆಗೆ ಹೋದಾಗ ಬೋರ್​ವೆಲ್​ಗೆ ಅಳವಡಿಸಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಕರುವಿನ ಮೇಲೆ ಬಿದ್ದು ಮೃತಪಟ್ಟಿದೆ ಎಂದು ಕಲ್ಲಪ್ಪ ಬುಧವಾರ ಸ್ಥಳೀಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts