More

    ಶ್ರದ್ಧಾ, ಭಕ್ತಿಯಿಂದ ಮೊಹರಂ ಆಚರಣೆ

    ಧಾರವಾಡ: ತ್ಯಾಗ, ಬಲಿದಾನದ ಪ್ರತೀಕವಾದ ಮೊಹರಂ ಹಬ್ಬವನ್ನು ಭಾನುವಾರ ನಗರದಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

    ಪ್ರತಿ ವರ್ಷ ಮೊಹರಂ ದಿನದಂದು ಇರಾನಿ ಸಮುದಾಯದ ಜನರು ಹರಿತ ಆಯುಧಗಳಿಂದ ದೇಹಕ್ಕೆ ಘಾಸಿ ಮಾಡಿಕೊಂಡು ರಕ್ತ ಸಮರ್ಪಣೆ ಮಾಡುವ ಮೂಲಕ ಇಮಾಮ್ ಹುಸೇನರಿಗೆ ನಮನ ಸಲ್ಲಿಸುತ್ತಿದ್ದರು. ಆದರೆ, ಈ ಬಾರಿ ಈ ಪ್ರಕ್ರಿಯೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಕೈಗಳಿಂದ ತಮಗೆ ತಾವೇ ಹೊಡೆದುಕೊಂಡು ದೇಹ ದಂಡಿಸಿದರು.

    ಪ್ರತಿ ವರ್ಷ ಜನ್ನತ ನಗರದಿಂದ ಹೊಸಯಲ್ಲಾಪುರದ ನುಚ್ಚಂಬ್ಲಿ ಬಾವಿಯವರೆಗೂ ಮೆರವಣಿಗೆ ಮೂಲಕ ತೆರಳಿ, ಎದೆಗೆ ಹೊಡೆದುಕೊಂಡು ಬಾವಿಯಲ್ಲಿ ಸ್ನಾನ ಮಾಡಿ ಶೋಕಾಚರಣೆ ಮುಕ್ತಾಯಗೊಳಿಸುವುದು ಸಂಪ್ರದಾಯ. ಈ ಬಾರಿ ಮಸೀದಿಗಳ ಎದುರೇ ಶೋಕಾಚರಣೆ ಮಾಡಿದರು.

    ನಗರದ ವಿವಿಧ ದರ್ಗಾ, ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಪಂಜಾ ಮತ್ತು ಡೋಲಿಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಕರೊನಾ ಹಾವಳಿಯಿಂದ ಬೃಹತ್ ಮೆರವಣಿಗೆಗೆ ಅವಕಾಶ ನೀಡದ ಕಾರಣಕ್ಕೆ ಆಯಾ ಬಡಾವಣೆಗಳಲ್ಲಿ ಸ್ಥಾಪಿಸಿದ ಪಂಜಾಗಳನ್ನು ಅಲ್ಲೇ ಸರಳ ಮೆರವಣಿಗೆ ಮೂಲಕ ಹೊಳೆಗೆ ತೆಗೆದುಕೊಂಡು ಹೋಗುವ ಸಂಪ್ರದಾಯ ನಡೆಯಿತು.

    ಗ್ರಾಮೀಣ ಪ್ರದೇಶಗಳಾದ ದೇವರಹುಬ್ಬಳ್ಳಿ, ಉಪ್ಪಿನ ಬೆಟಗೇರಿ, ಕಲ್ಲೂರು, ತಡಕೋಡ, ಲೋಕೂರು, ಹೆಬ್ಬಳ್ಳಿ, ಯಾದವಾಡ, ಲಕಮಾಪುರ, ಕರಡಿಗುಡ್ಡ ಗ್ರಾಮಗಳಲ್ಲೂ ಹಬ್ಬವನ್ನು ಆಚರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts