More

    ಶೇ.90ರಷ್ಟು ಕೆರೆಗಳು ಭರ್ತಿ

    ಚನ್ನರಾಯಪಟ್ಟಣ: ತಾಲೂಕಿನಲ್ಲಿ ಈ ಬಾರಿ ವರುಣನ ಕೃಪೆಯಿಂದ ಶೇ.90 ರಷ್ಟು ಕೆರೆಗಳು ತುಂಬಿ ಹರಿಯುತ್ತಿವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

    ತಾಲೂಕಿನ ಹೊಸಹಳ್ಳಿ ಪುರ ಗ್ರಾಮದಲ್ಲಿ ಶ್ರೀ ವಿನಾಯಕ ಹಾಗೂ ಶ್ರೀ ವೀರಭದ್ರೇಶ್ವರಸ್ವಾಮಿ ತೆಪ್ಪೋತ್ಸವಕ್ಕೆ ಭಾನುವಾರ ಚಾಲನೆ ನೀಡಿ ಮತ್ತು ಮೈದುಂಬಿ ಹರಿಯುತ್ತಿರುವ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು. ಕಳೆದ ಮೂರು ವರ್ಷಗಳಿಂದ ಹಿರೀಸಾವೆ-ಜುಟ್ಟನಹಳ್ಳಿ, ನುಗ್ಗೇಹಳ್ಳಿ, ಬಾಗೂರು, ಕಲ್ಲೇಸೋಮನಹಳ್ಳಿ ಹಾಗೂ ನವಿಲೆ ಏತನೀರಾವರಿ ಯೋಜನೆಯಡಿ ತಾಲೂಕಿನ ಸುಮಾರು 135ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗುತ್ತಿದೆ ಎಂದು ತಿಳಿಸಿದರು.

    ಮೈದುಂಬಿ ಹರಿಯುತ್ತಿರುವ ಕೆರೆಗಳ ಮುಂಭಾಗದ ಅಚ್ಚುಕಟ್ಟು ಪ್ರದೇಶವು ಶೀತಪೀಡಿತಗೊಂಡಿದ್ದು, ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರವು ಕೂಡಲೇ ಅಧಿಕಾರಿಗಳಿಂದ ಸ್ಥಳ ಪರಿಶೀಲಿಸಿ ಫಲಾನುಭವಿಗಳನ್ನು ಗುರುತಿಸಿ ಎಕರೆಗೆ ಇಂತಿಷ್ಟರಂತೆ ದರ ನಿಗದಿಪಡಿಸಿ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

    ಇನ್ನು ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಬಿತ್ತನೆಗೊಂಡಿರುವ ರಾಗಿ, ಮುಸುಕಿನ ಜೋಳ ಸೇರಿದಂತೆ ವಿವಿಧ ಬೆಳೆಗಳು ಬೆಳವಣಿಗೆಯಲ್ಲಿ ಕುಂಠಿತಗೊಂಡಿದ್ದು, ಹಳದಿ ವರ್ಣಕ್ಕೆ ತಿರುಗಿ ನೆಲ ಹಿಡಿದಿದೆ. ಸೂಕ್ತ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ಯೋಜನೆ ರೂಪಿಸಬೇಕು ಎಂದರು.

    ಬಾಗಿನ ಸಮರ್ಪಣೆ: ತುಂಬಿ ಹರಿಯುತ್ತಿರುವ ಕೆರೆಯಲ್ಲಿ ತೆಪ್ಪೋತ್ಸವ ಜರುಗಿದ್ದು ಶಾಸಕ ಸಿ.ಎನ್.ಬಾಲಕೃಷ್ಣ ವಿಶೇಷ ಗಂಗೆಪೂಜೆ ನೆರವೇರಿಸಿ ಬಾಗಿನ ಸಮರ್ಪಿಸಿದರು. ನಂತರ ಶ್ರೀ ಗೌರಿ ಹಾಗೂ ವಿನಾಯಕ ಮೂರ್ತಿಯನ್ನು ಗಂಗೆಯಲ್ಲಿ ವಿಸರ್ಜಿಸಲಾಯಿತು. ಅನ್ನಸಂತರ್ಪಣೆ ನಡೆಯಿತು.

    ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಆರ್.ವಾಸು, ಪುಟ್ಟರಾಜು, ಎಪಿಎಂಸಿ ಮಾಜಿ ಅಧ್ಯಕ್ಷರಾದ ರಘುರಾಂ, ಬಿ.ಸಿ.ದೊರೆಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಪಿ.ಕೆ.ಶಿವಶಂಕರ್, ಮಾಜಿ ಸದಸ್ಯ ಕೆ.ಚಂದ್ರು, ಕಬ್ಬಳಿ ಗ್ರಾಪಂ ಅಧ್ಯಕ್ಷ ಕೆ.ಪೃಥ್ವಿಕುಮಾರ್, ಜಿನ್ನೇನಹಳ್ಳಿ ಗ್ರಾಪಂ ಅಧ್ಯಕ್ಷ ಎಚ್.ಎಸ್.ನಾಗರಾಜ್, ಪ್ರಮುಖರಾದ ರತ್ನ ಕುಮಾರಸ್ವಾಮಿ, ಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ತೆಪ್ಪೋತ್ಸವದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts