More

    ಶೇಂಗಾ ಖರೀದಿ ಮಾಡದ್ದಕ್ಕೆ ಕರೊನಾ ನಂಟಿಲ್ಲ

    ಗಜೇಂದ್ರಗಡ: ಕರೊನಾ ಸೋಂಕಿತರು ರೋಣ ತಾಲೂಕಿನ ಮಾಡಲಗೇರಿ ಗ್ರಾಮಕ್ಕೆ ಬಂದು ಹೋಗಿದ್ದಾರೆ ಎಂಬ ಕಾರಣಕ್ಕಾಗಿ ಆ ಗ್ರಾಮದ ರೈತರಿಂದ ಗಜೇಂದ್ರಗಡದ ಎಪಿಎಂಸಿಯಲ್ಲಿ ಶೇಂಗಾವನ್ನು ಖರೀದಿಸಲು ನಿರಾಕರಿಸಲಾಗಿದೆ ಎಂಬ ಆರೋಪ ಶುದ್ಧ ಸುಳ್ಳು. ವ್ಯವಹಾರದಲ್ಲಿ ಏರುಪೇರಾಗಿದ್ದರಿಂದ ಖರೀದಿ ಪ್ರಕ್ರಿಯೆ ನಡೆದಿಲ್ಲ ಎಂದು ವರ್ತಕ ಸುನೀಲ ನಂದಿಹಾಳ ಸ್ಪಷ್ಟಪಡಿಸಿದ್ದಾರೆ.

    ಶೇಂಗಾ ಖರೀದಿ ನಿರಾಕರಣೆ ಆರೋಪದ ಹಿನ್ನೆಲೆಯಲ್ಲಿ ‘ವಿಜಯವಾಣಿ’ ಸೋಮವಾರ ಸಂರ್ಪಸಿದಾಗ ಅವರು ಹೀಗೆ ಪ್ರತಿಕ್ರಿಯಿಸಿದರು.

    ರೋಣ ತಾಲೂಕಿನ ಮಾಡಲಗೇರಿ ಗ್ರಾಮದಿಂದ ಶಂಕರಗೌಡ ಶಾಂತಗೇರಿ, ಭೀಮಪ್ಪ ಹಡಪದ, ತಿಪ್ಪನಗೌಡ ತಿಪ್ಪನಗೌಡ್ರ ಸೇರಿ ಆರು ರೈತರು ಟ್ರ್ಯಾಕ್ಟರ್ ಮೂಲಕ 55ಕ್ಕೂ ಹೆಚ್ಚು ಶೇಂಗಾ ಚೀಲಗಳನ್ನು ತೆಗೆದುಕೊಂಡು ಗಜೇಂದ್ರಗಡ ಎಪಿಎಂಸಿಗೆ ಶನಿವಾರ ಬಂದಿದ್ದರು. ಕಪ್ಪು ಮಣ್ಣಿನಲ್ಲಿ ಬೆಳೆದ ಶೇಂಗಾಕ್ಕೆ ಮಣ್ಣು ಮೆತ್ತಿತ್ತು. ಅಲ್ಲದೆ, ಹಸಿಯಾಗಿತ್ತು. ಈ ಹಿನ್ನೆಲೆಯಲ್ಲಿ ಟೆಂಡರ್ ಮೂಲಕ ಒಂದು ಕ್ವಿಂಟಾಲ್​ಗೆ 4200 ರೂ. ಬೆಲೆ ನಿಗದಿಪಡಿಸಲಾಗಿತ್ತು. ಆದರೆ, ಆ ರೈತರು 5800 ರೂ. ನೀಡುವಂತೆ ಪಟ್ಟು ಹಿಡಿದಿದ್ದರು. ಹಾಗಾಗಿ ‘ಶೇಂಗಾವನ್ನು ಸಂಪೂರ್ಣ ಒಣಗಿಸಿ, ಸ್ವಚ್ಛ ಮಾಡಿಕೊಂಡು ಬನ್ನಿ. ಉತ್ತಮ ಬೆಲೆ ಬರುತ್ತದೆ’ ಎಂದಿದ್ದೆ. ಅದರಂತೆ ರೈತರು ಆಯಿತು, ಸ್ವಚ್ಛ ಮಾಡಿಕೊಂಡು ಮತ್ತೆ ಬರುತ್ತೇವೆ ಎಂದು ತಿಳಿಸಿದ್ದರು. ಆದರೆ, ಏಕಾಏಕಿ ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯ ತಂದಿದೆ. ವ್ಯವಹಾರದಲ್ಲಿ ವ್ಯತ್ಯಾಸವಾಗಿದ್ದರಿಂದ ಖರೀದಿಸಿಲ್ಲ. ಕರೋನಾ ನಂಟಿದೆ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ನಿರಾಕರಿಸಿಲ್ಲ. ಬಾದಾಮಿ ತಾಲೂಕಿನ ರೈತರ ಹಾಗೂ ಕರೊನಾ ಸೋಂಕಿತರು ಬಂದು ಹೋಗಿರುವ ತಾಲೂಕಿನ ಮುಶಿಗೇರಿ, ನೆಲ್ಲೂರ, ಸರ್ಜಾಪುರ ಗ್ರಾಮಗಳ ರೈತರ ಧಾನ್ಯಗಳನ್ನು ನಾವು ಖರೀದಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಈ ಕುರಿತು ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಎಸ್.ಎಚ್. ತಿಪ್ಪನಗೌಡರ ಅವರನ್ನು ಸಂರ್ಪಸಿದಾಗ, ‘ಕರೊನಾ ಹಿನ್ನೆಲೆಯಲ್ಲಿ ಶೇಂಗಾ ಖರೀದಿಸಿಲ್ಲ ಎಂದು ನಮ್ಮ ಸಹೋದರ ಹೇಳಿದ್ದಾನೆ. ನಮ್ಮೂರಿಗೆ ಕರೊನಾ ಸೋಂಕಿತರು ಯಾರೂ ಬಂದಿಲ್ಲ. ಶಂಕಿತರ ಆರೋಗ್ಯ ತಪಾಸಣೆ ಮಾಡಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ’ ಎಂದು ಪ್ರತಿಕ್ರಿಯಿಸಿದರು.

    ಜಿಲ್ಲಾಧಿಕಾರಿ ಆದೇಶದಂತೆ ವಾರದಲ್ಲಿ ಮೂರು ದಿನ (ಸೋಮವಾರ, ಬುಧವಾರ, ಶುಕ್ರವಾರ) ಎಪಿಎಂಸಿಯಲ್ಲಿ ವಹಿವಾಟು ನಡೆಯುತ್ತಿದೆ. ರೈತರು ಮಾರುಕಟ್ಟೆಗೆ ಶನಿವಾರ ಬಂದಿದ್ದಾರೆ. ವಹಿವಾಟು ಇಲ್ಲ. ವರ್ತಕರು-ರೈತರ ನಡುವೆ ವ್ಯವಹಾರದ ವ್ಯತ್ಯಾಸವಾಗಿದ್ದರಿಂದ ಖರೀದಿ ಪ್ರಕ್ರಿಯೆ ನಡೆದಿಲ್ಲ. ಕರೊನಾ ಭಯದಿಂದ ಅವರ ದಾಸ್ತಾನು ಖರೀದಿಸಿಲ್ಲ ಎನ್ನುವ ಆರೋಪ ಸತ್ಯಕ್ಕೆ ದೂರವಾದದ್ದು.

    | ಪರಶುರಾಮ ಅಳಗವಾಡಿ, ಅಧ್ಯಕ್ಷ, ಎಪಿಎಂಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts