More

    ಶಿವನಾಮ ಸ್ಮರಣೆಯಿಂದ ಸುಜ್ಞಾನ ಪ್ರಾಪ್ತಿ

    ಲಕ್ಷ್ಮೇಶ್ವರ: ಮಹಾಶಿವರಾತ್ರಿಯಂದು ಕೈಗೊಳ್ಳುವ ಉಪವಾಸ ವೃತಾಚರಣೆ, ಶಿವ ನಾಮಸ್ಮರಣೆಯಿಂದ ಆತ್ಮಶುದ್ಧಿಯಾಗಿ ಸುಜ್ಞಾನ ಪ್ರಾಪ್ತಿಯಾಗುತ್ತದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ವಿಮಲರೇಣುಕ ವೀರಮುಕ್ತಿಮನಿ ಶಿವಾಚಾರ್ಯರು ಹೇಳಿದರು.

    ಶಿವರಾತ್ರಿ ಜಾತ್ರಾಮಹೋತ್ಸವ ಅಂಗವಾಗಿ ಮುಕ್ತಿಮಂದಿರ ಶ್ರೀಕ್ಷೇತ್ರದಲ್ಲಿ ಶುಕ್ರವಾರ ಶಿವಲಿಂಗ ಪೂಜೆ, ವಟುಗಳಿಗೆ ಅಯ್ಯಾಚಾರ-ಲಿಂಗದೀಕ್ಷೆ ಬಳಿಕ ಆಶೀರ್ವಚನ ನೀಡಿದರು. ಅಯ್ಯಾಚಾರದಿಂದ ಧರ್ಮಸಿಂಧು ಪ್ರಕಾರ ಪೂಜೆ, ಪುನಸ್ಕಾರ ಧಾರ್ವಿುಕ ಕಾರ್ಯ ಮಾಡುವ ಹಕ್ಕು ಪ್ರಾಪ್ತವಾಗುತ್ತದೆ. ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ವೃದ್ಧಿಯಾಗುತ್ತದೆ. ಪ್ರತಿಯೊಬ್ಬರೂ ನಿತ್ಯ ‘ಓಂ ನಮಃ ಶಿವಾಯ’ ಪಂಚಾಕ್ಷರಿ ಮಂತ್ರ ಪಠಿಸಬೇಕು ಎಂದರು. 25ಕ್ಕೂ ಹೆಚ್ಚು ಜಂಗಮ ವಟುಗಳಿಗೆ ಲಿಂಗದೀಕ್ಷೆ ನೀಡಲಾಯಿತು.

    ಶಿವರಾತ್ರಿ ಅಂಗವಾಗಿ ಅಪಾರ ಸಂಖ್ಯೆ ಭಕ್ತಾದಿಗಳು ಶ್ರೀ ಮಠಕ್ಕೆ ಆಗಮಿಸಿ ಕರ್ತೃ ಗದ್ದುಗೆ ಮತ್ತು ಪೀಠಾಧ್ಯಕ್ಷರ ದರ್ಶನಾಶೀರ್ವಾದ ಪಡೆದರು.

    ವಿವಿಧ ದೇವಾಲಯಗಳಲ್ಲಿ ಪೂಜೆ

    ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಪಟ್ಟಣದ ಶಿವಾಲಯಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ,ರುದ್ರಪಠಣ ಜರುಗಿ ಭಕ್ತರು ಬೆಳಗಿನಿಂದಲೇ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಪುಲಿಗೆರೆ ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷವಾಗಿ ಇದೇ ಮೊದಲ ಬಾರಿ ಮಜ್ಜೂರಿನ ಶ್ರೀಸತ್ಯಸಾಯಿ ವಾಣಿ ನಿಕೇತನಂನ ವಿದ್ಯಾರ್ಥಿನಿಯರಿಂದ ರುದ್ರಪಠಣ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಅರ್ಚಕ ಸಮೀರ್ ಪೂಜಾರ ಅವರು, ಶಿವರಾತ್ರಿ ಅಂಗವಾಗಿ ಶಿವನಿಗೆ ಅತ್ಯಂತ ಪ್ರೀಯವಾದ ರುದ್ರಪಠಣ ಜಪದ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಭಕ್ತರ ಇಷ್ಟಾರ್ಥಗಳ ಈಡೇರಿಕೆ, ವಿದ್ಯೆ, ಬುದ್ಧಿ, ಆತ್ಮಶುದ್ಧಿ, ತೇಜಸ್ಸು, ಸಂಕಲ್ಪಗಳ ಸಿದ್ಧಿಯಾಗುತ್ತದೆ ಎಂದರು. ಪಟ್ಟಣದ ಗೊಲ್ಲಾಳೇಶ್ವರ, ಸಹಸ್ರಲಿಂಗ, ಲಕ್ಷ್ಮೀಲಿಂಗೇಶ್ವರ ದೇವಸ್ಥಾನ ಸೇರಿ ವಿವಿಧ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು.

    4200 ಶಿವಲಿಂಗಕ್ಕೆ ಜಲ ಸಂಪ್ರೋಕ್ಷಣೆ

    ಲಕ್ಷ್ಮೇಶ್ವರ: ಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಗಾಗಿ ನೆಲೆಯೂರಿರುವ 4200 ಶಿವಲಿಂಗಳಿಗೆ ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜಲಪ್ರೋಕ್ಷಣೆಗೈದು ವಿಭೂತಿ ಧಾರಣೆ, ಪುಷ್ಪ, ಬಿಲ್ವ ಪತ್ರೆ ಸಮರ್ಪಿಸಿದರು. ಉಪನ್ಯಾಸಕರಾದ ಸೋಮಶೇಖರ ಕೆರಿಮನಿ, ಸಿ.ಎಂ. ಕಗ್ಗಲಗೌಡರ, ವಿದ್ಯಾರ್ಥಿನಿಯರಾದ ವಿಶಾಲಾ ಹಾರೋಗೇರಿ, ಅಜಯ ದ್ರೋಣಗೇರಿ, ಸತೀಶ ದೊಡ್ಡಗೌಡರ, ಪ್ರಮೋದ ಅರಿಶಿಣಗೋಡಿ, ಚೈತ್ರಾ ಪಾಟೀಲ, ರಾಧಿಕಾ ಕುಲಕರ್ಣಿ, ಕೃತಿಕಾ ಬಿರಾದಾರ, ಉಮಾ ಓಲೇಕಾರ, ಇತರರಿದ್ದರು.

    ಅಧ್ಯಾತ್ಮದಿಂದ ಮನಸ್ಸು, ಆತ್ಮ ಪರಿಶುದ್ಧ

    ರೋಣ: ಅಧ್ಯಾತ್ಮದಿಂದ ಮಾತ್ರ ಮನಸ್ಸು ಹಾಗೂ ಆತ್ಮ ಪರಿಶುದ್ಧವಾಗಲು ಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕ ಬಿ.ಎಸ್. ಬಳಗಾನೂರ ಹೇಳಿದರು. ಪಟ್ಟಣದ ಹೊಸ ಸಂತೆ ಮಾರುಕಟ್ಟೆ ಆವರಣದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಒತ್ತಡದ ಬದುಕಿನಲ್ಲಿ ಮಾನಸಿಕ ಒತ್ತಡದ ನಿವಾರಣೆಗೆ ಅಧ್ಯಾತ್ಮ ನೆರವಾಗುತ್ತದೆ. ಮನಸ್ಸಿನ ಚಂಚಲತೆಯಿಂದ ಹೊರ ಬರಲು ಪ್ರತಿಯೊಬ್ಬರೂ ಅಧ್ಯಾತ್ಮದ ಮೊರೆ ಹೋಗಬೇಕು ಎಂದರು.

    ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಶ್ರೀದೇವಿ ಮಾತನಾಡಿ, ಪ್ರತಿಯೊಬ್ಬರೂ ಕಾಮ, ಕ್ರೋಧ, ಮದ ಹಾಗೂ ಮತ್ಸರಗಳಿಂದ ದೂರವಿರಬೇಕು, ಪ್ರೀತಿ, ವಿಶ್ವಾಸದಿಂದ ಇನ್ನೊಬ್ಬರ ಮನಸ್ಸು ಗೆಲ್ಲಬೇಕು ಎಂದರು.

    ಸರದಿ ಸಾಲಿನಲ್ಲಿ ನಿಂತು ಪೂಜೆ

    ಮುಂಡರಗಿ: ಪಟ್ಟಣ ಸೇರಿ ತಾಲೂಕಿನ ಶಿವ ದೇವಾಲಯಗಳಲ್ಲಿ ಶುಕ್ರವಾರ ವಿಶೇಷ ಪೂಜೆ ನಡೆಯಿತು. ಶಿವರಾತ್ರಿ ಆಚರಣೆ ನಿಮಿತ್ತ ಬೆಳಗ್ಗೆಯಿಂದ ಭಕ್ತರು ಶಿವನ ದೇವಾಲಯಗಳಿಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದ ಶಿವನ ದೇವಸ್ಥಾನ, ಜಗದ್ಗುರು ತೋಂಟದಾರ್ಯ ಮಠ ಈಶ್ವರ ಮಂದಿರ, ಶ್ರೀಮಂಜುನಾಥ ದೇವಸ್ಥಾನ, ಶಿಂಗಟಾಲೂರ ಕಲ್ಲಿನಾಥೇಶ್ವರ, ವಿಠಲಾಪುರ ಮಹಾರಸಲಿಂಗೇಶ್ವರ, ಬಿದರಳ್ಳಿ ಸೋಮೇಶ್ವರ, ಡಂಬಳದ ದೊಡ್ಡಬಸವೇಶ್ವರ, ಸೋಮನಾಥೇಶ್ವರ ಮತ್ತಿತರ ದೇವಾಲಯಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ರಾತ್ರಿ ಪೂರ್ಣ ಜಾಗರಣೆ ಮಾಡಿದರು. ವಿವಿಧೆಡೆ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

    ಭಕ್ತಿಭಾವದಿಂದ ಶಿವನ ಪೂಜೆ

    ನರೇಗಲ್ಲ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಜರುಗಿದವು. ಸ್ಥಳೀಯ ಚಂದ್ರಮೌಳೇಶ್ವರ, ಕೊಂತಿ ಮಲ್ಲೇಶ್ವರ, ತ್ರೀಪುಕಾಂತೇಶ್ವರ, ಸೋಮೇಶ್ವರ, ವೀರನಾರಾಯಣ, ಕಲ್ಮೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ಶಿವಲಿಂಗಕ್ಕೆ ನಾನಾ ರೀತಿಯ ಹೂ, ಹಣ್ಣುಗಳಿಂದ ಅಲಂಕರಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts