ಶಾಲೆ ಜಾಗ ಉಳಿಸುವಂತೆ ಆಗ್ರಹಿಸಿ ಧರಣಿ

2
ನಾಗಮಂಗಲ ತಾಲೂಕಿನ ಆರಣಿ ಗ್ರಾಮದ ಶಾಲೆ ಜಾಗ ಉಳಿವಿಗಾಗಿ ಆಗ್ರಹಿಸಿ ಗ್ರಾಮಸ್ಥರು ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.

ನಾಗಮಂಗಲ: ತಾಲೂಕಿನ ಆರಣಿ ಗ್ರಾಮದಲ್ಲಿ ಅಲೆಮಾರಿ ಜನಾಂಗದವರಿಗೆ ಆಶ್ರಯ ಯೋಜನೆಯಡಿ ನಿವೇಶನ ಮಂಜೂರು ಮಾಡಿರುವುದನ್ನು ರದ್ದುಪಡಿಸಿ ಬೇರೆಡೆ ನಿವೇಶನ ಮಂಜೂರು ಮಾಡುವ ಮೂಲಕ ಶ್ರೀಬಸವೇಶ್ವರ ಪ್ರೌಢಶಾಲೆ ಜಾಗವನ್ನು ಉಳಿಸಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಶ್ರೀಬಸವೇಶ್ವರ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ಸೋಮವಾರ ತಾಲೂಕು ಆಡಳಿತಸೌಧದ ಎದುರು ಪ್ರತಿಭಟನೆ ನಡೆಸಿದರು.


ಗ್ರಾಮದ ಸರ್ವೇ ನಂ.85ರಲ್ಲಿ ಶ್ರೀಬಸವೇಶ್ವರ ಪ್ರೌಢಶಾಲೆ ಹಾಗೂ ಆಟದ ಮೈದಾನವಿದ್ದು, 30 ವರ್ಷಗಳಿಂದ ಶಾಲೆ ನಡೆಯುತ್ತ ಬಂದಿದೆ. ಆದರೆ ಶಾಲಾ ಕಟ್ಟಡ ಶಿಥಿಲವಾಗಿದ್ದು ಹಾಗೂ ಇನ್ನಿತರ ಕಾರಣಗಳಿಂದ 3 ವರ್ಷಗಳಿಂದ ಶಾಲೆ ನಡೆಯುತ್ತಿಲ್ಲ. ಹಾಗಾಗಿ ಗ್ರಾಮಸ್ಥರು ಒಗ್ಗೂಡಿ ಶಾಲೆಯನ್ನು ಆದಿಚುಂಚನಗಿರಿ ಮಠ ವಹಿಸಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವಂತೆ ಮನವಿ ಸಲ್ಲಿಸಲಾಗಿದೆ. ಆದರೆ ಶಾಲೆಯ ಜಾಗವನ್ನೇ ಅಲೆಮಾರಿ ಜನಾಂಗಕ್ಕೆ ನಿವೇಶನಕ್ಕಾಗಿ ಮಂಜೂರು ಮಾಡಿರುವುದು ಸರಿಯಲ್ಲ. ಶಾಲೆಯ ಜಾಗವನ್ನು ಹೊರತುಪಡಿಸಿ ಗ್ರಾಮದಲ್ಲಿರುವ ಗೋಮಾಳ, ಗುಂಡುತೋಪು ಜಾಗಗಳಿದ್ದು ಆ ಸ್ಥಳದಲ್ಲಿ ನಿವೇಶನ ಹಂಚಿಕೆ ಮಾಡಿದರೆ ಗ್ರಾಮಸ್ಥರ ತಕರಾರಿಲ್ಲ. ಶಾಲೆಯ ಜಾಗದಲ್ಲಿ ನಿವೇಶನ ಪಡೆಯುತ್ತಿರುವವರ ಪೈಕಿ ಕೆಲವರು ಅಗಚಹಳ್ಳಿಯಲ್ಲಿಯೂ ಅಲೆಮಾರಿ ಜನಾಂಗವೆಂದು ನಿವೇಶನ ಪಡೆದು ಹಣಕ್ಕೆ ಮಾರಾಟ ಮಾಡಿರುವ ದಾಖಲೆಗಳಿವೆ ಎಂದು ತಹಸೀಲ್ದಾರ್ ಮುಂದೆ ಸಂಬಂಧಿಸಿದ ದಾಖಲೆಗಳನ್ನು ಪ್ರದರ್ಶಿಸಿ ಶಾಲೆಯ ಜಾಗವನ್ನು ಉಳಿಸಿಕೊಡಿ ಎಂದು ಗ್ರಾಮಸ್ಥರು ತಹಸೀಲ್ದಾರ್ ನಂದೀಶ್‌ಗೆ ಮನವಿ ಸಲ್ಲಿಸಿದರು.


ಮೋಹನ್‌ಕುಮಾರ್, ನಾಗೇಗೌಡ, ಯಲ್ಲೇಗೌಡ, ದ್ವಾವಮ್ಮ, ಲೀಲಾವತಿ, ಸತೀಶ, ಪ್ರಸನ್ನ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.