More

    ಶವ ಸಂಸ್ಕಾರ ಮಾಡಲು ಜಾಗ ನೀಡಲು ಆಗ್ರಹ; ತಹಸೀಲ್ದಾರ್ ಕಚೇರಿಗೆ ಶವ ತರಲು ಯತ್ನ

    ಸೊರಬ: ಶವ ಸಂಸ್ಕಾರ ಮಾಡಲು ಜಾಗ ನೀಡುವಂತೆ ತಹಸೀಲ್ದಾರ್ ಕಚೇರಿಗೆ ಶವವನ್ನು ಕೊಂಡೊಯ್ಯುತ್ತಿದ್ದ ಮುಕ್ತಿವಾಹಿನಿ ವಾಹನವನ್ನು ಪೊಲೀಸರು ಪಟ್ಟಣದ ಮುಖ್ಯರಸ್ತೆಯಲ್ಲಿ ತಡೆದಾಗ ಗ್ರಾಮಸ್ಥರು ರಸ್ತೆಯಲ್ಲಿ ಶವವಿಟ್ಟು ಪ್ರತಿಭಟಿಸಿದರು.
    ತಾಲೂಕಿನ ಚಂದ್ರಗುತ್ತಿ ಹೋಬಳಿಯ ಹೆಚ್ಚೆ ಗ್ರಾಮದಲ್ಲಿ ಶುಕ್ರವಾರ ಭದ್ರಮ್ಮ(60) ಎಂಬುವರು ಮೃತ ಪಟ್ಟಿದ್ದರು. ಆ ಗ್ರಾಮದ ಸ್ಮಶಾನ ಜಾಗವನ್ನು ಪಕ್ಕದ ಗ್ರಾಮದ ವ್ಯಕ್ತಿ ಒತ್ತುವರಿ ಮಾಡಿ ಆ ಜಾಗದಲ್ಲಿ ಬಾಳೆ, ಅಡಕೆ, ಜೋಳವನ್ನು ಹಾಕಿದ್ದಲ್ಲದೆ ಆ ಜಾಗದಲ್ಲಿ ಹೆಚ್ಚೆ ಗ್ರಾಮಸ್ಥರು ಈ ಹಿಂದೆ ಮಾಡಿದ್ದ ಶವ ಸಂಸ್ಕಾರದ ಅಸ್ಥಿಗಳನ್ನು ಎಲ್ಲೆಂದರಲ್ಲಿ ಕಿತ್ತು ಬಿಸಾಡುತ್ತಿದ್ದುದರಿಂದ ಮನನೊಂದ ಗ್ರಾಮಸ್ಥರು ಭದ್ರಮ್ಮ ಅವರ ಶವ ಸಂಸ್ಕಾರ ಮಾಡಿದರೆ ಈ ವ್ಯಕ್ತಿ ಇದೇ ರೀತಿ ತೊಂದರೆ ಕೊಡುತ್ತಾನೆ. ಆದ್ದರಿಂದ ಜಾಗದ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಮುಕ್ತಿವಾಹಿನಿ ವಾಹನದಲ್ಲಿ ಶವವನ್ನು ಸೊರಬ ತಾಲೂಕು ಕಚೇರಿಗೆ ತೆಗೆದುಕೊಂಡು ಬರುತ್ತಿರುವಾಗ ಪಟ್ಟಣದ ಮಧ್ಯಭಾಗದಲ್ಲಿ ಪೊಲೀಸರು ಮುಕ್ತಿವಾಹಿನಿ ವಾಹನವನ್ನು ತಡೆದರು. ಇದರಿಂದ ಮನನೊಂದ ಗ್ರಾಮಸ್ಥರು ಹಾಗೂ ಪೊಲೀಸರೊಂದಿಗೆ ಕೆಲಕಾಲ ಮಾತಿಕ ಚಕಮಕಿ ನಡೆದು. ಸುಮಾರು ಒಂದೂವರೆ ಗಂಟೆಗಳಿಗೂ ಹೆಚ್ಚು ಕಾಲ ಮುಕ್ತಿವಾಹಿನಿ ವಾಹನವನ್ನು ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಿ ಪ್ರತಿಭಟಿಸಿದರು.
    ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಶಿವಾನಂದ ಮದರಖಂಡಿ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರು. ಬಳಿಕ ತಹಸೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಹೆಚ್ಚೆ ಗ್ರಾಮಕ್ಕೆ ಧಾವಿಸಿ ತೆರಳಿ ಸ್ಥಳ ಪರಿಶೀಲನೆ ನಡೆಸಿ ಬೇರೊಂದು ಜಾಗವನ್ನು ಗುರುತು ಮಾಡಿಕೊಡಲು ಮುಂದಾದಾಗ ಅದಕ್ಕೊಪ್ಪದ ಗ್ರಾಮಸ್ಥರು ಪ್ರತಿಭಟನೆಯನ್ನು ಮುಂದುವರಿಸಿ ಶವ ಸಂಸ್ಕಾರಕ್ಕೆ ಮೀಸಲಿಟ್ಟ ಜಾಗದಲ್ಲಿಯೇ 4 ಎಕರೆ ಗಡಿ ಗುರುತು ಮಾಡುವಂತೆ ಪಟ್ಟು ಹಿಡಿದಾಗ ತಹಸೀಲ್ದಾರರು ಸ್ಥಳದಲ್ಲೇ ಸರ್ವೇ ನಡೆಸಿ ಆ ಜಾಗವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದರು. ವಿಷಯ ತಿಳಿದ ಗ್ರಾಮಸ್ಥರು ಮುಕ್ತಿವಾಹಿನಿ ವಾಹನವನ್ನು ಗ್ರಾಮಕ್ಕೆ ವಾಪಸ್ ಕೊಂಡೊಯ್ದು ಶವ ಸಂಸ್ಕಾರ ನೆರವೇರಿಸಿದರು.
    ಸ್ಮಶಾನ ಜಾಗ ಅತಿಕ್ರಮಣ: ಹೆಚ್ಚೆ ಗ್ರಾಮದ ಸರ್ವೇ ನಂ.100ರಲ್ಲಿ ಸ್ಮಶಾನಕ್ಕಾಗಿ ಕಳೆದ 20 ವರ್ಷಗಳ ಹಿಂದೆ 4 ಎಕರೆ ಜಾಗವನ್ನು ಕಾಯ್ದಿರಿಸಲಾಗಿದ್ದು ಕಂದಾಯ ಇಲಾಖೆ ಗುರುತುಪಡಿಸಿದ್ದರೂ ಪಕ್ಕದ ಗ್ರಾಮಸ್ಥರೊಬ್ಬರು ಸುಟ್ಟು ಹಾಕಿದ್ದ ಹಾಗೂ ಹುಗಿದ ಶವಗಳನ್ನು ತೆಗೆದು ಆ ಜಾದಲ್ಲಿ ಯಾವುದೇ ಕುರುಹು ಇಲ್ಲದಂತೆ ಮಾಡುತ್ತಿದ್ದರು. ಇದನ್ನು ಕಂಡ ಗ್ರಾಮಸ್ಥರು ಕಳೆದ 5 ವರ್ಷಗಳಿಂದ ಜಾಗ ಮಂಜೂರಾತಿ ಮಾಡಿಕೊಡಬೇಕು ಎಂದು ದಾಖಲೆಗಳನ್ನು ನೀಡಿದ್ದದರೂ ಕಂದಾಯ ಅಧಿಕಾರಿಗಳು ಇತ್ತ ಗಮನಹರಿಸಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಹಿಂದೆ 2021ರ ಜನವರಿಯಲ್ಲಿ ಇದೇ ಜಾಗಕ್ಕೆ ಸಂಬಂಧಪಟ್ಟಂತೆ ಶವವಿಟ್ಟು ಪ್ರತಿಭಟನೆ ಮಾಡಲು ಮುಂದಾದಾಗ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರರು ಜಾಗದ ಗಡಿ ಗುರುತು ಮಾಡಿಕೊಡುವುದಾಗಿ ಭರವಸೆ ನೀಡಿ ಹೋಗಿದ್ದರು. ಆದರೆ ಇನ್ನೂ ಗಡಿ ಗುರುತಿಸಿರಲಿಲ್ಲ. ಇನ್ನು ಹೀಗೆ ಬಿಟ್ಟರೆ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಗ್ರಾಮಸ್ಥರು ಭದ್ರಮ್ಮ ಅವರ ಶವವಿಟ್ಟು ಪ್ರತಿಭಟನೆ ಮಾಡಲು ಮುಂದಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts