More

    ಶರಾವತಿ ಮುಳುಗಡೆ ಸಂತ್ರಸ್ತರ ಭೂಹಕ್ಕು ರದ್ದು ಪಡಿಸಿದ ಆದೇಶ ಪುನರ್ ಪರಿಶೀಲಿಸಲಿ: ತೀ.ನ.ಶ್ರೀನಿವಾಸ್

    ಸಾಗರ: ಜಿಲ್ಲೆಯ 6 ಸಾವಿರಕ್ಕೂ ಹೆಚ್ಚು ಶರಾವತಿ ಮುಳುಗಡೆ ಸಂತ್ರಸ್ತರ ಭೂಹಕ್ಕನ್ನು ರದ್ದು ಮಾಡಿ ಹೊರಡಿಸಿರುವ ಆದೇಶವನ್ನು ಸರ್ಕಾರ ಪುನರ್‌ಪರಿಶೀಲಿಸಬೇಕು ಎಂದು ಮಲೆನಾಡು ಭೂರಹಿತ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ರಾಜ್ಯ ಸರ್ಕಾರವನ್ನು ಆಗ್ರಹಪಡಿಸಿದ್ದಾರೆ.
    ಶಾಸಕ ಹರತಾಳು ಹಾಲಪ್ಪ ಮತ್ತು ರಾಜ್ಯ ಸರ್ಕಾರದ ವಬೇಜವಾಬ್ದಾರಿಯಿಂದ ಮುಳುಗಡೆ ಸಂತ್ರಸ್ತರು ಸಂಕಷ್ಟ ಎದುರಿಸುವಂತಾಗಿದೆ. ಹರತಾಳು ಹಾಲಪ್ಪ ಪದೇಪದೆ ಮುಳುಗಡೆ ಸಂತ್ರಸ್ತ ಎಂದು ಹೇಳಿಕೊಳ್ಳುತ್ತಾ, ಯಾವುದೇ ಕಾರಣಕ್ಕೂ ಆದೇಶ ರದ್ದು ಮಾಡಲು ಬಿಡುವುದಿಲ್ಲ ಎನ್ನುತ್ತಿದ್ದರು. ಇದೀಗ ಸರ್ಕಾರ ಆದೇಶ ರದ್ದು ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ಮಾಡಿದರು.
    ಶಾಸಕರು ಕೊಟ್ಟ ಮಾತು ತಪ್ಪಿದ್ದಾರೆ. ಜನರು ಪ್ರತಿಭಟನೆ ನಡೆಸುತ್ತಿದ್ದಂತೆ, ಬೆಂಗಳೂರಿಗೆ ತೆರಳಿ ಶಾಸಕರು ಸಂಬಂಧಪಟ್ಟ ಅಧಿಕಾರಿಗೆ ಮನವಿ ನೀಡಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಜನರ ಕಣ್ಣೋರೆಸುವ ತಂತ್ರ ಮಾಡುತ್ತಿದ್ದಾರೆ. ಸಾಗರದ ಜನತೆಗೆ ಎಲ್ಲವೂ ಅರ್ಥವಾಗುತ್ತದೆ. ಹಾಲಪ್ಪ ಸಂತ್ರಸ್ತರ ಭೂಮಿ ಸಂಕಷ್ಟವನ್ನು ಪರಿಹರಿಸುವಲ್ಲಿ ಅಗತ್ಯ ಕ್ರಮಕೈಗೊಳ್ಳಲಿಲ್ಲ. ತಾಲೂಕಿನಲ್ಲಿ ಅಭಿವೃದ್ಧಿಯ ಕೆಲಸ ಮಾಡಿದ್ದೇವೆ ಎಂದು ಘೋಷಣೆ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು ಕಾಮಗಾರಿಗಳೆಲ್ಲವೂ ಅರ್ಧಕ್ಕೆ ನಿಂತಿವೆ. ಎಂಎಸ್‌ಐಎಲ್ ಮದ್ಯದಂಗಡಿ ತೆರೆಯಲು ತೋರಿಸಿದಷ್ಟು ಆಸಕ್ತಿಯನ್ನು ಜನರಿಗೆ ಹಕ್ಕುಪತ್ರ ನೀಡಲು ತೋರುತ್ತಿಲ್ಲ ಎಂದರು.
    1959ರಿಂದ 1964ರ ವರೆಗೆ 13,800 ಎಕರೆ ಅರಣ್ಯಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಲಾಗಿತ್ತು. ಕಾಗೋಡು ತಿಮ್ಮಪ್ಪ ಅವರು ಈ ಭೂಮಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ರೈತರಿಗೆ ಹಕ್ಕುಪತ್ರ ನೀಡಿದ್ದರು. ನಂತರದ ದಿನಗಳಲ್ಲಿ ಯಾರಿಗೂ ಹಕ್ಕುಪತ್ರ ಕೊಟ್ಟಿಲ್ಲ. ಸರ್ಕಾರಗಳು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಹೇಳುತ್ತಿವೆಯೇ ವಿನಃ ರೈತರ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡುತ್ತಿಲ್ಲ. ಸಂಸದರು ಇಂತಹ ಗಂಭೀರ ಸಮಸ್ಯೆಯ ಬಗ್ಗೆ ಚಿಂತನೆ ನಡೆಸುತ್ತಿಲ್ಲ ಎಂದರು.
    ಮುಳುಗಡೆ ಸಂತ್ರಸ್ತರಿಗೆ ಭೂಹಕ್ಕು ಕೊಡುವ ಸಂಬಂಧ 13 ತಿಂಗಳ ಹಿಂದೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಅಂದಿನಿಂದ ಇಂದಿನವರೆಗೂ ಸಭಾ ನಡಾವಳಿಯನ್ನೆ ಬರೆಯಲಿಲ್ಲ. ಇದೀಗ ನ್ಯಾಯಾಲಯ ಆದೇಶ ರದ್ದುಪಡಿಸಿದೆ. ರಾಜ್ಯ ಸರ್ಕಾರದ ರೈತವಿರೋಧಿ ನೀತಿ ವಿರುದ್ಧ ಶರಾವತಿ ಮುಳುಗಡೆ ಸಂತ್ರಸ್ತರು ಬೀದಿಗಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಸರ್ಕಾರಕ್ಕೆ ಮತ್ತು ಶಾಸಕರಿಗೆ 15 ದಿನಗಳ ಗಡುವು ನೀಡುತ್ತಿದ್ದು, ಅಷ್ಟರೊಳಗೆ ನ್ಯಾಯಾಲಯಕ್ಕೆ ಅಫಿಡವೀಟ್ ಸಲ್ಲಿಸಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಕೊಡಿಸದೆ ಹೋದಲ್ಲಿ ಶಾಸಕರ ಕಚೇರಿ ಎದುರು ಉಗ್ರವಾದ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
    ಕೆಲಸ ಮಾಡದ ಸಮಿತಿ: 
    ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ವಿಶೇಷ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಗೆ ಒಂದು ವರ್ಷದೊಳಗೆ ವರದಿ ನೀಡಲು ಸೂಚನೆ ನೀಡಲಾಗಿತ್ತು. ಸಮಿತಿಗೆ ನೀಡಿದ ಒಂದು ವರ್ಷ ಅವಧಿ ಮುಗಿದಿದ್ದು, ಸಮಿತಿ ಯಾವುದೇ ಕೆಲಸ ಮಾಡಿಲ್ಲ ಎಂದು ತೀ.ನಾ.ಶ್ರೀನಿವಾಸ್ ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts