More

    ಶಕ್ತಿಯಿಂದ ₹24.42 ಕೋಟಿ ಆದಾಯ

    ತುಮಕೂರು : ‘ಶಕ್ತಿ’ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗ 2 ತಿಂಗಳಲ್ಲಿ 24.42 ಕೋಟಿ ರೂ. ಆದಾಯ ಗಳಿಸಿದೆ.

    ಯೋಜನೆ ಜಾರಿಗೊಂಡ ದಿನದಿಂದ ಜೂನ್ ತಿಂಗಳಲ್ಲಿ ನಿರ್ವಾಹಕರು ವಿತರಿಸಿರುವ ಶೂನ್ಯ(0) ಟಿಕೆಟ್‌ಗಳಿಂದ ತುಮಕೂರು ವಿಭಾಗದ ವಾಹನಗಳಲ್ಲಿ 29.73 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 8,32,99,464 ರೂ.ಗಳಷ್ಟು ಸಾರಿಗೆ ಆದಾಯ ಹಾಗೂ ಜುಲೈನಲ್ಲಿ 57.97 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, 16,09,59,460 ರೂಪಾಯಿ ಸಾರಿಗೆ ಆದಾಯ ಬಂದಿದೆ.

    ಜೂನ್, ಜುಲೈನಲ್ಲಿ 87.71 ಲಕ್ಷ ಮಹಿಳೆಯರು ಪ್ರಯಾಣಿಸಿ ನಿಗಮಕ್ಕೆ 24,42,58,924 ರೂ.ಗಳಷ್ಟು ಆದಾಯ ತಂದುಕೊಟ್ಟಿದ್ದಾರೆ. ಯೋಜನೆ ಜಾರಿಗೆ ಬರುವ ಮುನ್ನ ಪ್ರತಿ ತಿಂಗಳು ನಿಗಮಕ್ಕೆ ಪ್ರತಿ ದಿನದ ಆದಾಯ ಸರಾಸರಿ 72.45 ಲಕ್ಷ ರೂ.ಗಳಷ್ಟಿತ್ತು.
    ಯೋಜನೆ ಜಾರಿಯಾದ ನಂತರ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಮಾಸಿಕ ಪಾಸ್ ಪಡೆದು ಪ್ರತೀ ದಿನ ಸಾರಿಗೆ ಬಸ್‌ಗಳಲ್ಲಿ ಸಂಚರಿಸುತ್ತಿದ್ದ ಉದ್ಯೋಗಸ್ಥ ಮಹಿಳೆಯರಿಗೆ ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿನಿಯರು, ಕೂಲಿ ಕಾರ್ಮಿಕ ಮಹಿಳೆಯರು, ನಿರುದ್ಯೋಗಿ ಮಹಿಳೆಯರು ಹಾಗೂ ಗಾರ್ಮೆಂಟ್ಸ್ ನೌಕರಸ್ಥ ಮಹಿಳೆಯರಿಗೆ ಶಕ್ತಿ ಯೋಜನೆಯು ವರದಾನವಾಗಿದೆ.

    ಪ್ರತೀ ದಿನ ಸಂಚರಿಸುವ ಮಹಿಳಾ ಪ್ರಯಾಣಿಕರು, ವಿದ್ಯಾರ್ಥಿನಿಯರು ದೈನಂದಿನ ಪಾಸ್ ಹಾಗೂ ಮಾಸಿಕ ಪಾಸ್‌ಗಳನ್ನು ಪಡೆಯದೆ ಇರುವುದರಿಂದ ಪಾಸ್‌ಗಳ ವಿತರಣೆಯ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ 2022ರ ಜೂನ್‌ಗೆ ಹೋಲಿಕೆ ಮಾಡಿದಾಗ 2161 ಮಾಸಿಕ ಹಾಗೂ 2033 ದೈನಂದಿನ ಪಾಸ್‌ಗಳ ಮಾರಾಟ ಕಡಿಮೆಯಾಗಿದೆ.

    ಪುಣ್ಯಕ್ಷೇತ್ರಗಳಿಗೆ ಪ್ರಯಾಣ: ಶಕ್ತಿ ಯೋಜನೆಯಿಂದ ರಾಜ್ಯದ ವಿವಿಧ ಸ್ಥಳಗಳಲ್ಲಿರುವ ಪುಣ್ಯಕ್ಷೇತ್ರಗಳಿಗೆ ಮಹಿಳೆಯರ ಪ್ರಯಾಣ ಸಂಖ್ಯೆ ಏರಿಕೆ ಕಂಡಿದ್ದು, ಈವರೆಗೂ ಜಿಲ್ಲೆಯಲ್ಲಿ 18 ಲಕ್ಷ ಮಹಿಳೆಯರು ಪುಣ್ಯಕ್ಷೇತ್ರ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಪುಣ್ಯಕ್ಷೇತ್ರವಲ್ಲದೆ ಪ್ರೇಕ್ಷಣೀಯ ಸ್ಥಳಗಳಿಗೂ ಮಹಿಳೆಯರು ಕುಟುಂಬದೊಂದಿಗೆ ಭೇಟಿ ನೀಡುತ್ತಿರುವುದರಿಂದ ನಿಗಮದ ಆದಾಯ ದುಪ್ಪಟ್ಟಾಗುತ್ತಿದೆ.

    ಶಕ್ತಿ ಯೋಜನೆ ಜಾರಿಯಿಂದ ನಿಗಮದ ಆದಾಯ ದುಪ್ಪಟಾಗಿದೆ. ಜಿಲ್ಲೆಯಲ್ಲಿಯೂ ಪ್ರತಿದಿನ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕಾಗಿ ಅವಕಾಶ ಮಾಡಿಕೊಡಲಾಗುತ್ತಿದೆ. | ಎ.ಎನ್.ಗಜೇಂದ್ರಕುಮಾರ್, ಜಿಲ್ಲಾ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts