More

    ವಿವಾದಕ್ಕೆ ಎಡೆಮಾಡಿದ ಸಿದ್ದರಾಮಯ್ಯ ಹೇಳಿಕೆ

    ಮೈಸೂರು: ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಾಯಿ ತಪ್ಪಿನಿಂದ ಹೇಳಿದ ಮಾತು ಇದೀಗ ವಿವಾದಕ್ಕೆ ಕಾರಣವಾಗಿದೆ.

    ವರುಣ ಕ್ಷೇತ್ರದಲ್ಲಿ ಶನಿವಾರ ಮತಪ್ರಚಾರದಲ್ಲಿ ತೊಡಗಿದ ಸಂದರ್ಭದಲ್ಲಿ ಖಾಸಗಿ ವಾಹಿನಿಯೊಂದಿಗೆ ಮಾತನಾಡುವಾಗ ಈ ವಿವಾದ ಉಂಟಾಗಿದೆ. ಬಿಜೆಪಿಯಿಂದ ಲಿಂಗಾಯತ ಮುಖ್ಯಮಂತ್ರಿ ಅಸ್ತ್ರ ಬಳಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುವ ಧಾವಂತದಲ್ಲಿ ಸಿದ್ದರಾಮಯ್ಯ ಅವರು, ಲಿಂಗಾಯತರು ಇದ್ದಾರೆಯಲ್ವಾ? ಅವರೆಲ್ಲ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿದ್ದಾರೆ ಎಂದು ಬಾಯಿ ತಪ್ಪಿನಿಂದ ಹೇಳಿದರು.

    ಬಳಿಕ ಸುಧಾರಿಸಿಕೊಂಡ ಅವರು, ನಾನು ಹೇಳಿದ್ದು ಹೀಗೆ ಅಲ್ಲ. ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಮಾತ್ರ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಅರ್ಥದಲ್ಲಿ ಹೇಳಿರುವೆ ಎಂದು ಸ್ಪಷ್ಟನೆ ನೀಡಿದರು.

    ಆ ರೀತಿ ನಾನು ಹೇಳಿಯೇ ಇಲ್ಲ:
    ಲಿಂಗಾಯತರೆಲ್ಲ ಭ್ರಷ್ಟರೆಂದು ನಾನು ಹೇಳಿದ್ದೇನೆಂದು ತೋರಿಸಲು ಮಾಡುತ್ತಿರುವ ಪ್ರಯತ್ನ ರಾಜಕೀಯ ದುರುದ್ದೇಶದಿಂದ ಕೂಡಿದ್ದು. ಆ ರೀತಿ ನಾನು ಹೇಳಿಯೇ ಇಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದರು.

    ವರುಣ ಕ್ಷೇತ್ರದಲ್ಲಿ ಶನಿವಾರ ನಡೆಸಿದ ಮತಪ್ರಚಾರ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಬಿಜೆಪಿಯವರು ಲಿಂಗಾಯತ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ ಎಂದು ಹೇಳಿದ್ದೆ. ನಾನು ಬಸವರಾಜ ಬೊಮ್ಮಾಯಿ ಅವರಿಗೆ ಸೀಮಿತವಾಗಿ ಭ್ರಷ್ಟ ಎಂದು ಹೇಳಿದ್ದೆ. ಲಿಂಗಾಯತರು ಭ್ರಷ್ಟರು ಎಂದು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

    ಲಿಂಗಾಯತರಲ್ಲಿ ಬಹಳಷ್ಟು ಜನ ಮುಖ್ಯಮಂತ್ರಿಗಳು ಅತ್ಯಂತ ಪ್ರಾಮಾಣಿಕರಿದ್ದರು. ವೀರೇಂದ್ರ ಪಾಟೀಲರು, ನಿಜಲಿಂಗಪ್ಪ, ಜೆ.ಎಚ್.ಪಟೇಲರು ಇವರೆಲ್ಲ ಪ್ರಾಮಾಣಿಕರಾಗಿದ್ದರು. ಆದರೆ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭ್ರಷ್ಟರಿದ್ದಾರೆ ಎಂದು ಹೇಳಿದ್ದೆ. ಬಿಜೆಪಿಯವರು ನನ್ನ ಹೇಳಿಕೆಯನ್ನು ಕಟ್ ಮಾಡಿ ಸೇರಿಸಿ, ತಮಗೆ ಬೇಕಾದಂತೆ ತಿರುಚಿ ಚುನಾವಣೆ ಸಂದರ್ಭವಿರುವುದರಿಂದ ಅದರ ಲಾಭ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ನನಗೆ ಲಿಂಗಾಯತ ಸಮುದಾಯದ ಬಗ್ಗೆ ಅಪಾರವಾದ ಗೌರವವಿದೆ. ಹಿಂದೆ ಬಹಳ ಜನ ಲಿಂಗಾಯತರು ಪ್ರಾಮಾಣಿಕ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದರು. ಆದರೆ ಬೊಮ್ಮಾಯಿ ಮಾತ್ರ ಭ್ರಷ್ಟರಾಗಿದ್ದಾರೆ ಎಂದು ಹೇಳಿದರು.

    ಲಿಂಗಾಯತರ ಬಗ್ಗೆ ನಮಗೆ ಗೌರವ ಇರುವುದರಿಂದಲೇ ಹೆಚ್ಚು ಟಿಕೇಟ್ ಅನ್ನು ಅವರಿಗೆ ನೀಡಿದ್ದೇವೆ. ಕಳೆದ ಬಾರಿ 47 ಲಿಂಗಾಯತ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡಿದ್ದೆವು. ಈ ಬಾರಿ ಅದಕ್ಕಿಂತ ಹೆಚ್ಚು ಅಂದರೆ ಸುಮಾರು 52 – 53 ಅಭ್ಯರ್ಥಿಗಳಿಗೆ ಟಿಕೇಟ್ ನೀಡಿದ್ದೇವೆ. ಎಂದರು.

    ನಮ್ಮಲ್ಲಿ ಜಾತಿ ಮೇಲೆ ಮುಖ್ಯಮಂತ್ರಿಯ ತೀರ್ಮಾನ ಮಾಡುವುದಿಲ್ಲ, ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದು ನಮ್ಮಲ್ಲಿ ನಡೆದುಕೊಂಡುಬಂದ ಪದ್ಧತಿ. ಬಿಜೆಪಿಯವರು ಜಾತಿ ಮೇಲೆ ಮಾಡಿದರೆ ನಾವೇನು ಮಾಡೋಕಾಗಲ್ಲ ಎಂದು ಕುಟುಕಿದರು.

    ಲಿಂಗಾಯತರೆಲ್ಲ ಭ್ರಷ್ಟರೆಂದು ನಾನು ಹೇಳಿಯೇ ಇಲ್ಲ. ರಾಜಕೀಯ ದುರುದ್ದೇಶದಿಂದ ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts