More

    ವಿದ್ಯೆಯ ಜತೆಗಿರಲಿ ಮಾನವೀಯ ಮೌಲ್ಯ- ಚಂದ್ರಶೇಖರ ಸ್ವಾಮೀಜಿ 

    ದಾವಣಗೆರೆ: ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ವಿನಯವಂತಿಕೆ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ದಾವಣಗೆರೆ ತಾಲೂಕಿನ ಗೋಣಿವಾಡದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಶ್ರೀ ಸೋಮೇಶ್ವರ ವಸತಿ ಶಾಲೆಯ ವಾರ್ಷಿಕೋತ್ಸವ ಸೋಮೇಶ್ವರೋತ್ಸವ-2023 ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
    ವಚನಗಳನ್ನು ಹೇಳುವುದು, ಅವುಗಳ ಅರ್ಥವನ್ನು ಉಪದೇಶಿಸುವುದಕ್ಕಿಂತ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಸುಂದರವಾಗಲಿದೆ, ಸ್ವಸ್ಥ ಸಮಾಜ ನಿರ್ಮಾಣವಾಗಲಿದೆ ಎಂದರು. ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಕನ್ನಡತನ, ಸಾತ್ವಿಕತೆ ಬಿಡಬೇಡಿ ಎಂದೂ ಕಿವಿಮಾತು ಹೇಳಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಇಂದಿನ ದಿನಮಾನದಲ್ಲಿ ಬಹುತೇಕ ಪಾಲಕರು ತಮ್ಮ ಮಕ್ಕಳು ಇಂಜಿನಿಯರ್ ಆಗಿ ಹೆಚ್ಚು ಹಣ ಗಳಿಸಲಿ ಎಂಬ ಅಭಿಲಾಷೆ ಹೊಂದಿರುತ್ತಾರೆ. ಆದರೆ ಮಗುವಿನ ಅಭಿರುಚಿ, ಸಾಮರ್ಥ್ಯದ ಬಗ್ಗೆ ಚಿಂತಿಸುವುದಿಲ್ಲ ಎಂದು ವಿಷಾದಿಸಿದರು.
    ಪೂರ್ವ ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಶಿಕ್ಷಕರು ಮಗುವಿನ ಸುಪ್ತ ಪ್ರತಿಭೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಶಿಕ್ಷಕರು-ಪಾಲಕರು ಪರಸ್ಪರ ಸಮಾಲೋಚಿಸಿ ಮಗುವಿನ ಅಭಿರುಚಿಗೆ ತಕ್ಕನಾಗಿ ಬೆಳೆಸಿ ದೇಶದ, ವಿಶ್ವದ ಆಸ್ತಿಯನ್ನಾಗಿ ಮಾಡಬೇಕು ಎಂದು ಹೇಳಿದರು.
    ಮೈಸೂರಿನ ಖ್ಯಾತ ವಾಗ್ಮಿ ಪ್ರೊ. ಎಂ.ಕೃಷ್ಣೇಗೌಡ್ರು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಕುರಿತು ಉಪನ್ಯಾಸ ನೀಡಿದರು.
    2021-22 ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98.72 ಅಂಕ ಪಡೆದ ವಿದ್ಯಾರ್ಥಿನಿ ಜಿ.ಬಿ.ಜೀವಿತಾಗೆ 25 ಸಾವಿರ ರೂ. ಬಹುಮಾನದ ಜತೆಗೆ ‘ಸೋಮೇಶ್ವರ ಸಾಧನ ಸಿರಿ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನೂ ಸನ್ಮಾನಿಸಲಾಯಿತು.
    ಶಾಲಾಡಳಿತ ಮಂಡಳಿ ಅಧ್ಯಕ್ಷ ಎಚ್.ಆರ್.ಅಶೋಕ ರೆಡ್ಡಿ, ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿ ಸ್ವಾಮಿ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ್, ದಾವಣಗೆರೆ-ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕ ಕಂಚಿಕೇರಿ ಮಹೇಶ್,
    ಶಾಲೆಯ ಸಂಸ್ಥಾಪಕ ಕೆ.ಎಂ.ಸುರೇಶ್, ಪ್ರಾಚಾರ್ಯೆ ವೀಣಾ ಸುರೇಶ್ ವೇದಿಕೆಯಲ್ಲಿದ್ದರು. ಮಂಜೂಷಾ ಪ್ರಾಸ್ತಾವಿಕ ಮಾತನಾಡಿದರು. ನುಡಿಗಳನ್ನಾಡಿದರು. ವೇದಿಕೆ ಕಾರ್ಯಕ್ರಮದ ತರುವಾಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts