More

    ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

    ಕಲಘಟಗಿ: ವಿದ್ಯುತ್ ವಿತರಣೆ ಕಂಪನಿಗಳ ಖಾಸಗೀಕರಣ ವಿರೋಧಿಸಿ ಕವಿಪ್ರನಿ ನೌಕರರ ಸಂಘ, ಕಾರ್ವಿುಕ ಸಂಘದ ಪದಾಧಿಕಾರಿಗಳು, ಹೆಸ್ಕಾಂ ಸಿಬ್ಬಂದಿ ಪಟ್ಟಣದ ಹೆಸ್ಕಾಂ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

    ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರ್ಷ ಬೆಂತೂರ ಮಾತನಾಡಿ, ಈ ಖಾಸಗೀಕರಣ ಕಾರ್ವಿುಕ ವರ್ಗದ ಮರಣ ಶಾಸನವಾಗಿದೆ. ರೈತರು, ಕಾರ್ವಿುಕ ವರ್ಗದ ಜೀವನಕ್ಕೆ ಈ ಖಾಸಗೀಕರಣ ಕುತ್ತು ತಂದೊಡ್ಡುವಲ್ಲಿ ಕೇಂದ್ರ ಸರ್ಕಾರ ಮೂಲ ಕಾರಣ. ಖಾಸಗೀಕರಣದಿಂದ ಬಂಡವಾಳಶಾಹಿಗಳ ಬಾಯಿಗೆ ದೇಶವನ್ನು ನೂಕಿದಂತಾಗುತ್ತದೆ. ಇಂಧನ ಇಲಾಖೆಯ ಏಳಿಗೆಗಾಗಿ ನಾವೆಲ್ಲರೂ ಕರ್ತವ್ಯ ನಿಷ್ಠೆಯಿಂದ ಶ್ರಮಿಸಿದರೆ ಖಂಡಿತವಾಗಿಯೂ ಇಲಾಖೆ ಲಾಭದಲ್ಲಿ ಸಾಗುತ್ತದೆ ಎಂದರು.

    ದುಮ್ಮವಾಡ ವಿಭಾಗಾಧಿಕಾರಿ ಎನ್.ಎಸ್. ಮೂಗನೂರ ಮಾತನಾಡಿ, ಖಾಸಗೀಕರಣದಿಂದ ಸಂಕಷ್ಟದ ಬಾವಿಗೆ ನಮ್ಮನ್ನು ತಳ್ಳಿದಂತಾಗುತ್ತದೆ. ಸರ್ಕಾರಿ ಸ್ವಾಮ್ಯದಲ್ಲಿ ಸಂಸ್ಥೆಗಳು ಇರುವುದರಿಂದ ನಮ್ಮ ನೆರವಿಗೆ ಬರುವುದು ಸರ್ಕಾರಿ ಸಂಸ್ಥೆಗಳೇ ಹೊರತು ಬಂಡವಾಳಶಾಹಿಗಳಲ್ಲ ಎಂದರು.

    ಕೆ.ಎಲ್. ನಾಯಕ, ಬಿ.ಡಿ. ಮೇಟಿ, ಜೆ. ಸುಬ್ರಮಣಿ, ರವೀಂದ್ರ, ವೀರೇಶ ಪಿ.ಎಂ. ಇತರರಿದ್ದರು.

    ಕೈಗೆ ಕಪ್ಪು ಪಟ್ಟಿ ಧರಿಸಿ ಹೆಸ್ಕಾಂ ಸಿಬ್ಬಂದಿ ಧರಣಿ: ಕುಂದಗೋಳದಲ್ಲಿ ಹೆಸ್ಕಾಂ ಕಚೇರಿ ಆವರಣದಲ್ಲಿ ಹೆಸ್ಕಾಂ ಅಧಿಕಾರಿಗಳು ಮತ್ತು ನೌಕರರು ಸಾಂಕೇತಿಕವಾಗಿ ವಿದ್ಯುತ್ ಕಾಯ್ದೆ ತಿದ್ದುಪಡಿ, ವಿತರಣೆ ಕಂಪನಿಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ ನಡೆಸಿದರು. ಹೆಸ್ಕಾಂ ಪ್ರಾಥಮಿಕ ಸಮಿತಿ ಅಧ್ಯಕ್ಷ ಶರಣಪ್ಪ ಅಂಗಡಿ ಮಾತನಾಡಿ, ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ, ವಿತರಣೆ ಕಂಪನಿಗಳ ಖಾಸಗೀಕರಣ ಕೈಬಿಡಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕರ ಕೆಲಸಕ್ಕೆ ತೊಂದರೆ ಆಗಬಾರದೆಂದು ಹೆಸ್ಕಾಂ ಅಧಿಕಾರಿಗಳು, ನೌಕರರು ಕೈಗೆ ಕಪ್ಪು ಧರಿಸಿ ಪ್ರತಿಭಟನೆ ನಡೆಸಿದರು. ನಂತರ ಕರ್ತವ್ಯ ನಿರ್ವಹಿಸಿದರು.

    ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಬೇಡ: ನವಲಗುಂದ ಪಟ್ಟಣದಲ್ಲಿ ಹೆಸ್ಕಾಂ ನೌಕರರು, ಸಂಘ-ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ಕೈಗೆ ಕಪ್ಪು ಬಟ್ಟೆ ಧರಿಸಿ ವಿದ್ಯುತ್ ವಿತರಣೆ ಕಂಪನಿಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ ನಡೆಸಿದರು.

    ನೌಕರರ ಸಂಘದ ಹಿರಿಯ ಸಹಾಯಕ ಎಸ್.ಆರ್. ಡೊಳ್ಳಿನ ಮಾತನಾಡಿ, ವಿದ್ಯುತ್ ವಿತರಣೆ ಕಂಪನಿಗಳ ಖಾಸಗೀಕರಣ ನೀತಿ ಗ್ರಾಹಕರ ಮೇಲೆ ಬರೆ ಎಳೆದಂತಾಗಿದೆ. ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ, ಖಾಸಗೀಕರಣ ನೀತಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

    ವಿದ್ಯುತ್ ವಿತರಣೆ ಕಂಪನಿಗಳ ಖಾಸಗೀಕರಣ ವಿರೋಧಿಸಿ ಹೆಸ್ಕಾಂ ನವಲಗುಂದ ಕಚೇರಿ ಎದುರು ಹೆಸ್ಕಾಂ ನೌಕರರು, ಸಂಘ-ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಗ್ರಾಮೀಣ ಶಾಖಾಧಿಕಾರಿ ಎಂ.ಎಂ. ಆಡಿನ, ಸಹಾಯಕ ಲೆಕ್ಕಾಧಿಕಾರಿ ಪೂಜಾ ಹಿರೇಮಠ, ಕಾರ್ಯದರ್ಶಿ ಸಿ.ವೈ. ಭಾವಿಕಟ್ಟಿ, ಮೇಲ್ವಿಚಾರಕ ಎಂ.ಎಸ್. ಮರಿಗೌಡ್ರ, ಡಿ.ಜೆ. ನದಾಫ್, ಜಿ.ವೈ. ಆನಂದಿ, ಡಿ.ಎಚ್. ಮುಲ್ಲಾ, ವಿ.ವೈ. ಆನಂದಿ, ಎಸ್.ಎಸ್. ಬೆಟಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts