More

    ವಸತಿ ಹೇರಾಫೇರಿಗೆ ಖಂಡ್ರೆ ಹೊಣೆ

    ಬೀದರ್: ಭಾಲ್ಕಿ ತಾಲೂಕಿನಲ್ಲಿ ಬೆಳಕಿಗೆ ಬಂದ ಭಾರಿ ಪ್ರಮಾಣದ ವಸತಿ ಯೋಜನೆ ಅಕ್ರಮಕ್ಕೆ ಕ್ಷೇತ್ರದ ಶಾಸಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೊಣೆಗಾರರಾಗಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮೆಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದಲಿ ಎಂದು ಸಂಸದ ಭಗವಂತ ಖೂಬಾ ಆಗ್ರಹಿಸಿದ್ದಾರೆ.
    ವಸತಿ ಯೋಜನೆ ಅವ್ಯವಹಾರದ ಮೂಲ ಬೇರು ಶಾಸಕರ ಕಚೇರಿಯಲ್ಲೇ ಇದೆ. ಅಧಿಕಾರಿ, ಸಿಬ್ಬಂದಿ ಮೇಲೆ ಒತ್ತಡ ಹೇರಿ ಬೇಕಾಬಿಟ್ಟಿ ಮನೆ ಹಂಚಿಕೆ ಮಾಡಿ ಯೋಜನೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ 9710 ಮನೆಗಳು ನಿಯಮಬಾಹಿರವಾಗಿವೆ ಎಂದು ಅಧಿಕಾರಿಗಳು ನಡೆಸಿರುವ ತನಿಖಾ ವರದಿಯಲ್ಲಿ ಸ್ಪಷ್ಟವಾಗಿದೆ. ನನ್ನ ಅವಧಿಯಲ್ಲಿ ಒಂದೇ ಒಂದು ಅವ್ಯವಹಾರ ಸಾಬೀತಾದರೆ ಸಾರ್ವಜನಿಕ ಜೀವನದಿಂದ ದೂರವಿರುವೆ ಎಂದು ಖಂಡ್ರೆ ಹೇಳಿದ್ದರು. ಈಗ ನುಡಿದಂತೆ ನಡೆಯುವ ಕಾಲ ಬಂದಿದೆ. ತಕ್ಷಣ ಎಲ್ಲ ಸ್ಥಾನ ತ್ಯಜಿಸಿ ರಾಜಕೀಯ ನಿವೃತ್ತಿ ಪಡೆಯಲಿ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
    ಎಲ್ಲ ವೇದಿಕೆಗಳಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಬಗ್ಗೆ ಶಾಸಕ ಖಂಡ್ರೆ ಮಾತನಾಡುತ್ತಾರೆ. ಬಸವಣ್ಣನವರ ನುಡಿದಂತೆ ನಡೆ ಎಂಬ ವಚನ ಪ್ರಸ್ತಾಪಿಸುತ್ತಾರೆ. ಈ ಮಾತಿಗೆ ಬದ್ಧವಾಗಿ ನುಡಿದಂತೆ ನಡೆದು ನೈತಿಕ ಜವಾಬ್ದಾರಿ ಪ್ರದರ್ಶಿಸಬೇಕು. ವಸತಿ ಅಕ್ರಮ ಬೆಳಕಿಗೆ ಬರುತ್ತಲೇ ಹಲವು ಪಿಡಿಒಗಳು, ಇತರರು ಶಾಸಕರನ್ನು ಭೇಟಿಯಾಗಿ ಗೋಳು ತೋಡಿಕೊಂಡಿದ್ದಾರೆ. ನಾನೆಲ್ಲ ನೋಡಿಕೊಳ್ಳುವೆ, ನೀವೆಲ್ಲ ಧೈರ್ಯದಿಂದ ಇರಿ ಎಂದು ಹೇಳಿ ಕಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಕ್ರಮದಿಂದ ಇವರಿಗೆ ಪಾರು ಮಾಡಲು ಮತ್ತ್ಯಾವ ಅಡ್ಡ ಮಾರ್ಗ ಹಿಡಿಯುವರು ಎಂಬುದು ತಿಳಿಯುತ್ತಿಲ್ಲ ಎಂದು ಛೇಡಿಸಿದರು.
    ಭಾಲ್ಕಿ ಪಟ್ಟಣ, ಗ್ರಾಮೀಣ ಭಾಗದಲ್ಲಿ ನಾನಾ ವಸತಿ ಯೋಜನೆಗಳಡಿ 2015-16ರಿಂದ 2018-19ರವರೆಗೆ 91 ಕೋಟಿ ರೂ. ಅವ್ಯವಹಾರ ನಡೆದಿದೆ. ದುರ್ಬಳಕೆ ಹಣ ತಪ್ಪಿತಸ್ಥರಿಂದ ವಸೂಲಿ ಮಾಡಲು ಸರ್ಕಾರ ಸೂಚಿಸಿದೆ. ಶಾಸಕ ಖಂಡ್ರೆ ಮಾನವೀಯ ನೆಲೆಗಟ್ಟಿನಲ್ಲಿ ಈ ಮೊತ್ತವನ್ನು ಕಟ್ಟಬೇಕು. ಈ ಮೂಲಕ ತಮ್ಮ ಒತ್ತಡದಲ್ಲಿ ಕೆಲಸ ಮಾಡಿ ಸಮಸ್ಯೆಗೆ ಸಿಲುಕಿದವರನ್ನು ಪಾರು ಮಾಡಲಿ. ತಪ್ಪು ಮಾಡದವರ ರಕ್ಷಣೆಗೂ ಮುಂದಾಗಲಿ ಎಂದು ಆಗ್ರಹಿಸಿದರು. ಖಂಡ್ರೆ ಶೀಘ್ರ ರಾಜೀನಾಮೆ ನೀಡದಿದ್ದರೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
    ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ, ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಠ ಸಂಚಾಲಕ ಡಿ.ಕೆ. ಸಿದ್ರಾಮ ಇದ್ದರು. ವಸತಿ ಹೇರಾಫೇರಿ ಕುರಿತು ವಿಜಯವಾಣಿ ಸರಣಿ ವರದಿ ಪ್ರಕಟಿಸುತ್ತಿರುವ ಬೆನ್ನಲ್ಲೇ ಸಂಸದರು ಸುದ್ದಿಗೋಷ್ಠಿ ನಡೆಸಿ ಈ ಸಂಬಂಧ ಇನ್ನಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts