More

    ವರದೆಯ ನಾಡಲ್ಲಿ ಬರದ ಛಾಯೆ

    ಶಿರಸಿ: ತಾಲೂಕಿನ ಪೂರ್ವಭಾಗದ ಜೀವನಾಡಿಯಾದ ವರದಾ ನದಿಯು ಬೇಸಿಗೆ ಆರಂಭದೊಂದಿಗೆ ಸಂಪೂರ್ಣ ಬತ್ತಿದ್ದು, ಕೃಷಿ ಕಾರ್ಯದೊಟ್ಟಿಗೆ ಕುಡಿಯುವ ನೀರಿಗೂ ತಿಂಗಳ ಅಂತ್ಯಕ್ಕೆ ತತ್ವಾರ ಎದುರಾಗಲಿದೆ.

    ಈ ವರ್ಷ ತಿಂಗಳ ಮೊದಲೇ ವರದೆಯ ಒಡಲು ಭಣಗುಡುತ್ತಿದೆ. ನದಿ ಪಾತ್ರದ ಗ್ರಾಮಗಳಲ್ಲಿ ವರದೆಯನ್ನು ನಂಬಿ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಜೀಳ, ಭತ್ತ, ಶುಂಠಿ, ಬಾಳೆ, ಅಡಕೆ, ಅನಾನಸ್ ಸೇರಿದಂತೆ 5 ಸಾವಿರ ಹೆಕ್ಟೇರ್​ಗೂ ಹೆಚ್ಚಿನ ಪ್ರದೇಶದಲ್ಲಿ ವಿವಿಧ ಬೆಳೆ ಬೆಳೆಯಲಾಗಿದೆ. ನೀರಿನ ಕೊರತೆಯಿಂದ ರೈತ ಸಮೂಹ ಕೈಚೆಲ್ಲಿ ಕುಳಿತಿದೆ. ವರದಾ ನದಿಯ ಗುಂಡಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರಿದ್ದು, ಅಂದಾಜು 15 ದಿನಗಳಲ್ಲಿ ಈ ನೀರು ಬತ್ತಲಿದೆ. ತಿಗಣಿ ಬಳಿ ಹಾಕಲಾದ ಬೃಹತ್ ಒಡ್ಡಿನಲ್ಲೂ ನೀರಿನ ಕೊರತೆ ಇದ್ದು, ಬೇಸಿಗೆ ಮಧ್ಯ ಭಾಗದಲ್ಲಿ ಇದು ಕೂಡ ಬತ್ತುವ ಸಾಧ್ಯತೆಯಿದೆ. ಇನ್ನೊಂದೆಡೆ ಅಸಮರ್ಪಕ ವಿದ್ಯುತ್ ಪೂರೈಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಅಂತರ್ಜಲ ಕುಸಿತ: ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಸಿ ಸಮಸ್ಯೆ ಮಾಡಿದ್ದ ವರದಾ ನದಿಯು ಮಾರ್ಚ್ ತಿಂಗಳ ವೇಳೆಗಾಗಲೇ ಬತ್ತಿ ಹೋಗಿರುವುದರಿಂದ ಸುತ್ತಮುತ್ತಲ ಕೆರೆ, ಬಾವಿ, ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಹೋಗಿದೆ. ನದಿ ಪಾತ್ರದಲ್ಲಿರುವ ಸಾವಿರಕ್ಕೂ ಹೆಚ್ಚಿನ ಪಂಪ್​ಸೆಟ್​ಗಳಲ್ಲಿ 800ಕ್ಕೂ ಹೆಚ್ಚಿನ ಕೃಷಿ ಪಂಪ್​ಸೆಟ್​ಗಳು ಹನಿ ನೀರನ್ನೂ ಮೇಲೆತ್ತುವಲ್ಲಿ ವಿಫಲಗೊಂಡಿವೆ. ಹೀಗಾಗಿ, ಪಂಪ್​ಸೆಟ್ ಹಾಗೂ ನದಿ ನೀರು ಅವಲಂಬಿಸಿ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತ ಕುಟುಂಬಗಳಲ್ಲಿ ಭವಿಷ್ಯದ ಕನವರಿಕೆ ಆರಂಭಗೊಂಡಿದೆ. ಬೆಳೆಗಳನ್ನು ಬತ್ತಲು ಬಿಡಬಾರದು ಎನ್ನುವ ಆಶಯದೊಂದಿಗೆ ನದಿ ದಡದಲ್ಲಿ ಸಾಕಷ್ಟು ಸಂಖ್ಯೆಯ ರೈತರು ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದರೂ ಹೆಚ್ಚಿನ ನೀರು ಲಭಿಸದೇ ಕೈಸುಟ್ಟು ಕೊಳ್ಳುವಂತಾಗಿದೆ.

    ಕೃಷಿ ಚಟುವಟಿಕೆಗಳಿಗೆ ಒಂದೆಡೆಯಿರಲಿ ನದಿ ಪಾತ್ರದ ಹಳ್ಳಿಗಳಲ್ಲಿ ಜನ-ಜಾನುವಾರುಗಳಿಗೆ ಸಮರ್ಪಕ ಪ್ರಮಾಣದಲ್ಲಿ ಕುಡಿಯುವ ನೀರು ಲಭಿಸುತ್ತಿಲ್ಲ. ಈಗಲೇ ಹೀಗಿದ್ದರೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಇರಬಹುದಾದ ಪರಿಸ್ಥಿತಿ ನೆನೆಯುವುದು ಕೂಡ ಕಷ್ಟ. ವರುಣ ಕೃಪೆ ತೋರಿದರೆ ಮಾತ್ರ ನೀರಿನ ಸಮಸ್ಯೆಗೆ ಸ್ವಲ್ಪಮಟ್ಟಿನ ಪರಿಹಾರ ದೊರೆಯಬಹುದು.
    | ಶಿವಾಜಿ ಬನವಾಸಿ- ಸ್ಥಳೀಯ ನಿವಾಸಿ

    ಬನವಾಸಿ ಹೋಬಳಿಯ ಮಾಹಿತಿ
    ಪಂಪ್​ಸೆಟ್​ಗಳು: 1156
    800ಕ್ಕೂ ಹೆಚ್ಚು ಸ್ಥಗಿತ
    ಕೊಳವೆಬಾವಿಗಳು: 1579
    650ಕ್ಕೂ ಹೆಚ್ಚು ಸ್ಥಗಿತ
    ಕೃಷಿ ಕ್ಷೇತ್ರ: 9200 ಹೆಕ್ಟೆರ್
    5 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ನೀರಿನ ಕೊರತೆ
    ಕೆರೆಗಳು: 320
    ಬತ್ತಿರುವುದು ಕೆರೆಗಳು 30ಕ್ಕೂ ಹೆಚ್ಚು

    ಬತ್ತಿದ ಒಡಲಲಿ ಮರಳು ಬಗೆಯುವ ಕಾರ್ಯ
    ಬತ್ತಿದ ವರದಾ ನದಿಯ ಒಡಲಲ್ಲಿ ಮರಳು ಬಗೆಯುವ ಕಾರ್ಯ ಆರಂಭವಾಗಿದೆ. ಬನವಾಸಿ, ಮೊಗಳ್ಳಿ, ಅಜ್ಜರಣಿ, ಭಾಶಿ, ನರೂರು ಭಾಗದಲ್ಲಿ ಸಾಕಷ್ಟು ಮರಳು ಗಣಿಗಾರಿಕೆ ನಿರಾತಂಕವಾಗಿ ನಡೆದಿದೆ. ನದಿಯೊಡಲು ಬಗೆದು ಮರಳು, ಜಲ್ಲಿಗಳನ್ನು ಟಿಪ್ಪರ್, ಟ್ರಾ್ಯಕ್ಟರ್ ಮೂಲಕ ಸಾಗಾಟ ಮಾಡಲಾಗುತ್ತಿದೆ. ಇದರಿಂದ ನದಿ ಪಾತ್ರದಲ್ಲಿ ಬೃಹತ್ ಗುಂಡಿಗಳು ನಿರ್ಮಾಣ ಆಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಅಕ್ರಮವಾಗಿ ನಡೆಯುವ ಈ ಮರಳು ದಂಧೆಯ ವಿರುದ್ದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts