More

    ವಚನಗಳಿಂದ ಅಂಧಕಾರಕ್ಕೆ ಮುಕ್ತಿ -ಡಾ.ಬಸವ ಮರುಳಸಿದ್ಧ ಶ್ರೀಗಳು

    ದಾವಣಗೆರೆ: ವಚನಗಳು ಶುಷ್ಕ ಬೋಧನೆಗಳಲ್ಲ, ಶರಣರ ಆತ್ಮಕತೆಗಳು. ಅವುಗಳ ಅನುಸಂಧಾನದಿಂದ ಬದುಕಿನ ಎಲ್ಲ ಅಂಧಕಾರಕ್ಕೆ ಮುಕ್ತಿ ಸಿಗಲಿದೆ ಎಂದು ಚಿಕ್ಕಮಗಳೂರು ಬಸವತತ್ವ ಪೀಠದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
    ಶಿವಯೋಗಿ ಸಿದ್ಧರಾಮೇಶ್ವರ ದೇವರ 61ನೇ ರಥೋತ್ಸವ ಪ್ರಯುಕ್ತ ನಗರದ ಭೋವಿ ಗುರುಪೀಠದ ದಾವಣಗೆರೆ ಶಾಖಾಮಠದ ಆವರಣದಲ್ಲಿ ಲಿಂ. ಶ್ರೀಗಳ ಗದ್ದುಗೆಗೆ ವಚನಾಭಿಷೇಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
    ಶರಣರು ಐಹಿಕ ಮತ್ತು ಪಾರಮಾರ್ಥಿಕ ಬದುಕಿನ ಸಂಗತಿಗಳನ್ನು ವಚನಗಳ ಮೂಲಕ ಅಭಿವ್ಯಕ್ತಗೊಳಿಸಿದರು. ಅವರು ಬದುಕಿನಲ್ಲಿ ಕಂಡುಂಡ ನಿಂದೆ-ನೋವು, ಶಾಂತಿ-ಸಮಾಧಾನ ವಚನಗಳಲ್ಲಿವೆ. ಹೀಗಾಗಿ ಇವು ಎಂದೆಂದಿಗೂ ಪ್ರಸ್ತುತ ಎಂದು ಹೇಳಿದರು.
    ಬಸವಾದಿ ಶರಣರು ಜನಭಾಷೆಯಲ್ಲಿ ಧರ್ಮ, ಅಧ್ಯಾತ್ಮ, ಜೀವನ ಮೌಲ್ಯಗಳನ್ನು ವಚನಗಳಲ್ಲಿ ತಿಳಿಸಿ ಕನ್ನಡದ ಘನತೆ ಎತ್ತಿಹಿಡಿದರು. ಸೌಜನ್ಯ, ದಯೆ, ವಿನಯ, ಸಾಂತ್ವನ, ಪ್ರತಿಭಟನೆ, ಪಾರಮಾರ್ಥ ಮೊದಲಾದ ಮೌಲ್ಯಗಳು ವಚನಗಳಲ್ಲಿ ಹೇರಳವಾಗಿವೆ. ಇದರ ಓದು ಮತ್ತು ಮನನ ಅತ್ಯಗತ್ಯ ಎಂದರು.
    ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಸಮಾಜ ವ್ಯವಸ್ಥೆಯ ಗೊಡ್ಡುತನ, ಹುಸಿ ನಂಬಿಕೆ, ಹೇಯ ಆಚರಣೆಗಳು ಹಾಗೂ ಶತಮಾನಗಳ ಭ್ರಮೆಗಳು ವಚನಗಳಲ್ಲಿ ಬಯಲಾಗಿವೆ. ಇವು ಮೌಢ್ಯ ಸಂಪ್ರದಾಯವನ್ನು ತಿರಸ್ಕರಿಸುತ್ತ ಬದುಕಿನ ಸತ್ಯದರ್ಶನ ಮಾಡಿಸುತ್ತವೆ ಎಂದರು.
    ಭೋವಿ ಸಮಾಜದ ಮುಖಂಡರಾದ ಡಿ.ಬಸವರಾಜ, ಜಯಣ್ಣ, ವಕೀಲ ಗೋಪಾಲ, ನಾಗರಾಜ, ಮಂಜುನಾಥ, ಗಣೇಶ, ಮೂರ್ತ್ಯಪ್ಪ, ಶೇಖರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts