More

    ಲಿಂಗ, ಜಾತಿ ಮೀರಿದ ಜಾನಪದ

    ಸಾಗರ: ಒಂದು ಕಾಲದಲ್ಲಿ ಇಂತಹ ಸಮುದಾಯದವರೇ ಜಾನಪದ ವಾದ್ಯಗಳನ್ನು ಬಾರಿಸಬೇಕು ಎನ್ನುವ ರೀತಿ ರಿವಾಜುಗಳಿದ್ದವು. ಆದರೆ ಆಧುನಿಕ ಜಗತ್ತಿನಲ್ಲಿ ಲಿಂಗ ಜಾತಿ ಎಲ್ಲವನ್ನೂ ಮೀರಿ ಜಾನಪದ ಬೆಳೆಯುತ್ತಿದೆ. ಇದೊಂದು ಆಶಾದಾಯಕ ಬೆಳವಣಿಗೆ ಎಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು ಹೇಳಿದರು.

    ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಜಾನಪದ ಪರಿಷತ್ ಸಾಗರ ಶಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ ಸಾಗರ ತಾಲೂಕು ಮಟ್ಟದ ಪ್ರಥಮ ಜಾನಪದ ಸಮ್ಮೇಳನವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

    ಬಹುತೇಕ ಸಂದರ್ಭದಲ್ಲಿ ಜಾನಪದ ನೇಪಥ್ಯಕ್ಕೆ ಸರಿಯುತ್ತಿದೆ. ಅದು ಪುಸ್ತಕದ ಕೊನೆಯ ಪುಟದಲ್ಲಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಆದರೆ ಯಾವತ್ತೂ ಜಾನಪದ ಕೊನೆಪುಟ ಸೇರುವುದಿಲ್ಲ. ಕಾಲಕಾಲಕ್ಕೆ ಜಾನಪದ ಕಲೆಗಳನ್ನು ಮೇಲೆತ್ತುವ ಕೆಲಸ ನಡೆಯುತ್ತಿದ್ದು ಪ್ರಸ್ತುತ ಜಾನಪದ ಪುಸ್ತಕದ ಮೊದಲ ಪುಟದಲ್ಲಿಯೆ ಇದೆ. ಒಂದು ಕಾಲದಲ್ಲಿ ಆಯಾ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಜಾನಪದ ಕಲೆ ಇಂದು ವಿಶ್ವಾದ್ಯಂತ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಿದೆ ಎಂದರು.

    ಜಾನಪದ ಕಲೆ ಉಳಿಸುವಲ್ಲಿ ಮತ್ತು ಅದರ ಮಹತ್ವವನ್ನು ಪರಿಚಯಿಸುವಲ್ಲಿ ಇಂತಹ ಸಮ್ಮೇಳನಗಳು ಉತ್ತರವನ್ನು ಕಂಡುಕೊಡುತ್ತವೆ. ಶಿವಮೊಗ್ಗ ಜಿಲ್ಲೆಯಲ್ಲಿ ಡಿ. ಮಂಜುನಾಥ್ ಸಾರಥ್ಯದಲ್ಲಿ ಜಾನಪದ ಸಮ್ಮೇಳನಗಳು ಮತ್ತು ಕಲೆಗಳ ಉಳಿಸುವಿಕೆ ಮತ್ತು ವೇದಿಕೆ ನಿರ್ವಿುಸಿಕೊಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದು ಆಶಾದಾಯಕ ಬೆಳವಣಿಗೆ ಎಂದು ಬಣ್ಣಿಸಿದರು.

    ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಿದರು. ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು, ಜಾನಪದ ಪರಿಷತ್ ಗೌರವಾಧ್ಯಕ್ಷ ಗುಡ್ಡಪ್ಪ ಜೋಗಿ, ಆನಂದಪುರ ಘಟಕದ ಅಧ್ಯಕ್ಷ ಬಿ.ಡಿ.ರವಿಕುಮಾರ್, ಸತ್ಯನಾರಾಯಣ ಸಿರವಂತೆ, ಜಾನಪದ ಪರಿಷತ್ ಶಿಕಾರಿಪುರ ತಾಲೂಕು ಅಧ್ಯಕ್ಷ ಹುಚ್ಚರಾಯಪ್ಪ, ಶಿವಾನಂದ ಕುಗ್ವೆ, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಪರಮೇಶ್ವರ ಕರೂರು, ಕಸ್ತೂರಿ, ಎಸ್.ಬಸವರಾಜ್, ಡಿ.ಮನೋಹರ್ ಇತರರಿದ್ದರು. ಲಕ್ಷ್ಮಣ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಾಗರ ಟೌನ್ ಮಹಿಳಾ ಸಮಾಜದ ಸದಸ್ಯರು ನಾಡಗೀತೆ ಹಾಡಿದರು. ನಂತರ ವಿವಿಧ ಜಾನಪದ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಜಾನಪದ ಸಿರ ಪ್ರಶಸ್ತಿ ಪ್ರದಾನ: ಜಾನಪದ ಕಲಾವಿದರಾದ ಹಳತೇರಿ ಸಣ್ಣ ಹುಚ್ಚಪ್ಪ ಅದರಂತೆ ಮತ್ತು ಚಕ್ಕೋಡು ಚೌಡಾನಾಯ್ಕ ತುಮರಿ ಅವರಿಗೆ ಜಾನಪದ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

    ವಿಶೇಷ ಸ್ಥಾನಮಾನ: ಗ್ರಾಮೀಣ ಪ್ರದೇಶ ತನ್ನ ಜಾನಪದ ಸೊಗಡಿನಿಂದ ವಿಶೇಷ ಸ್ಥಾನಮಾನ ಪಡೆದಿದೆ. ಮಲೆನಾಡು ಭಾಗದಲ್ಲಿ ನಡೆಯುವ ಒಂದೊಂದು ಹಬ್ಬವೂ ಒಂದೊಂದು ಜಾನಪದ ಕಲಾಪ್ರಕಾರವನ್ನು ಅಭಿವ್ಯಕ್ತಗೊಳಿಸುತ್ತದೆ ಎಂದು ಶಾಸಕ ಹರತಾಳೂ ಹಾಲಪ್ಪ ಹೇಳಿದರು.

    ಯಾವುದೆ ಅಬ್ಬರದ ಪ್ರಚಾರವಿಲ್ಲದೆ ಬಾಯಿಯಂದ ಬಾಯಿಗೆ ಹರಿದು ಬರುತ್ತಿರುವ ಜಾನಪದ ಕಲೆಯನ್ನು ಕಡೆಗಣ್ಣಿನಿಂದ ನೋಡುವ ಸಂಸ್ಕೃತಿ ಸಲ್ಲದು. ಜಾನಪದ ಕಲಾವಿದರನ್ನು ಗೌರವಾದಾರಗಳಿಂದ ನೋಡುವುದು ನಮ್ಮ ಸಂಸ್ಕೃತಿಯ ಭಾಗವಾಗಬೇಕು ಎಂದು ಹೇಳಿದರು.

    ಜಾನಪದ ಹೊರಗಿಟ್ಟು ಆಚರಣೆಗಳಿಲ್ಲ: ಗ್ರಾಮೀಣ ಭಾಗದ ಜನರಿಗೆ ಜಾನಪದ ಉಸಿರು. ಜಾನಪದವನ್ನು ಹೊರಗಿಟ್ಟು ಗ್ರಾಮೀಣ ಭಾಗದ ಯಾವುದೇ ಆಚರಣೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿ ಪ್ರಯತ್ನ ನಡೆಯಬೇಕಾಗಿದೆ ಎಂದು ಸಮ್ಮೇಳನ ಸರ್ವಾಧ್ಯಕ್ಷರಾದ ಹಿರಿಯ ಜಾನಪದ ಕಲಾವಿದ ನಾರಾಯಣಪ್ಪ ಕುಗ್ವೆ ಹೇಳಿದರು. ಸರ್ಕಾರ ಜಾನಪದ ಕ್ಷೇತ್ರಕ್ಕೆ ನೀಡುತ್ತಿರುವ ಆದ್ಯತೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಮಲೆನಾಡು ಭಾಗದ ಹಸೆ, ಡೊಳ್ಳು ಕುಣಿತ, ಚಿತ್ತಾರದಂತಹ ಕಲೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಥಾನ ಪಡೆದಿದೆ. ಆದರೆ ಸರ್ಕಾರ ಅಂತಹ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಪ್ರಯತ್ನ ನಡೆಸಿಲ್ಲ. ಮಲೆನಾಡಿನ ದೀವರ ಸಮುದಾಯದ ಹೆಣ್ಣುಮಕ್ಕಳು ಗೌರಿ ಹಾಡು, ಹಸೆ ಹಾಡು, ಬಾಸಿಂಗದ ಹಾಡುಗಳನ್ನು ಕಂಠಸ್ಥವಾಗಿ ಹಾಡಿಕೊಂಡು ಬಂದವರು. ಇಂತಹ ಸಾಂಪ್ರದಾಯಿಕವಾದ ಹಾಡುಗಳ ದಾಖಲಾತಿ ಆಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುವ ಅಗತ್ಯತೆ ಇದೆ ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts