More

    ಲಾಕ್ ಡೌನ್ ಸಂಕಷ್ಟದಲ್ಲಿ ಕ್ಷೌರಿಕರು

    ರಾಣೆಬೆನ್ನೂರ: ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ಸರ್ಕಾರ ಘೊಷಿಸಿದ ಲಾಕ್ ಡೌನ್​ನಿಂದಾಗಿ ಕ್ಷೌರಿಕರು ಅತಂತ್ರ ಸ್ಥಿತಿ ಎದುರಿಸುತ್ತಿದ್ದು, ಕುಟುಂಬ ನಿರ್ವಹಣೆಗೆ ಸಂಕಷ್ಟ ಪಡುತ್ತಿದ್ದಾರೆ.

    ಕ್ಷೌರಿಕ ವೃತ್ತಿಯೂ ಮನುಷ್ಯನ ಅಗತ್ಯ ಸೇವೆಗಳಲ್ಲಿ ಒಂದಾಗಿದೆ. ಆದರೆ, ಕಳೆದ 21 ದಿನಗಳಿಂದ ಲಾಕ್ ಡೌನ್ ಆದೇಶ ಜಾರಿಯಲ್ಲಿರುವುದರಿಂದ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿದೆ.

    ಜಿಲ್ಲೆಯಲ್ಲಿ ಹಡಪದ ಹಾಗೂ ಸವಿತಾ ಸಮಾಜ ಸೇರಿ 1 ಸಾವಿರಕ್ಕೂ ಅಧಿಕ ಕ್ಷೌರಿಕ ಅಂಗಡಿಗಳಿವೆ. 5 ಸಾವಿರಕ್ಕೂ ಅಧಿಕ ಕುಟುಂಬಗಳು ಇದೇ ಕೆಲಸವನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೀಗ ಅಂಗಡಿಗಳು ಬಂದ್ ಆಗಿರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ.

    ಅಂಗಡಿ ಮಾಲೀಕರು ಮಾತ್ರವಲ್ಲದೆ, ಒಂದು ಅಂಗಡಿಗೆ ಮೂರರಿಂದ ನಾಲ್ಕು ಮಂದಿ ಕ್ಷೌರಿಕ ವೃತ್ತಿಯಲ್ಲಿ ತೊಡಗಿದ್ದು, ಇಡೀ ಕುಟುಂಬವೇ ಅವರ ಮೇಲೆ ಅವಲಂಬಿತವಾಗಿವೆ. ಲಾಕ್ ಡೌನ್​ನಿಂದಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಕ್ಷೌರಿಕರು ಅಳಲು ತೋಡಿಕೊಂಡಿದ್ದಾರೆ.

    ಸಲೂನ್ ಮತ್ತು ಬ್ಯೂಟಿ ಪಾರ್ಲರ್​ನಲ್ಲಿ ಕೆಲಸಗಾರರು ಕಮಿಷನ್ ಆಧಾರಿತವಾಗಿ ವೇತನ ಪಡೆಯುವವರಾಗಿದ್ದು, ಇವರಿಗೆ ಕೆಲಸ ಇದ್ದರೆ ಮಾತ್ರ ವೇತನ, ಇಲ್ಲದಿದ್ದರೆ ಇಲ್ಲ. ಸದ್ಯ ಸವಿತಾ ಸಮಾಜದವರಿಗೆ ರಾಜ್ಯ ಸಂಘಟನೆಯಿಂದ ಆಹಾರದ ಕಿಟ್ ಕಳುಹಿಸಲಾಗಿದೆ. ಆದರೆ, ಹಡಪದ ಸಮಾಜದವರಿಗೆ ಯಾವುದೇ ಸೌಲಭ್ಯ ಲಭ್ಯವಾಗಿಲ್ಲ ಎನ್ನಲಾಗುತ್ತಿದೆ.

    ‘ನಮ್ಮದು ಆರ್ಥಿಕವಾಗಿ ಸದೃಢವಲ್ಲದ ಸಮಾಜ. ಶೇ. 90ರಷ್ಟು ಮಂದಿ ಕ್ಷೌರಿಕ ವೃತ್ತಿಯನ್ನೇ ನಂಬಿ ಬದುಕುತ್ತಿದ್ದೇವೆ. ನಮಗೆ ಬೇರೆ ಯಾವುದೇ ತರಹದ ಸೌಲಭ್ಯವಿಲ್ಲ. ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಯಾವುದೇ ಬಲ ಇಲ್ಲ. ಲಾಕ್ ಡೌನ್ ಆದಾಗಿನಿಂದ ನಮಗೆ ಸರ್ಕಾರದಿಂದ ಸೌಲಭ್ಯ ಬಂದಿಲ್ಲ. ನಮ್ಮನ್ನು ಅಸಂಘಟಿತ ಕಾರ್ವಿುಕರ ಪಟ್ಟಿಗೆ ಸೇರಿಸಲಾಗಿದೆ. ಆದರೆ, ಅವರಿಗೆ ನೀಡುವ ಯಾವ ಸೌಲಭ್ಯಗಳೂ ನಮಗೆ ಸಿಗುತ್ತಿಲ್ಲ’ ಎಂದು ಕ್ಷೌರಿಕ ಸೋಮಶೇಖರ ಹಡಪದ ನೋವಿನಿಂದ ನುಡಿಯುತ್ತಾರೆ.

    ನಮಗೆ ಕ್ಷೌರಿಕ ವೃತ್ತಿ ಬಿಟ್ಟರೆ, ಬೇರೇನೂ ಗೊತ್ತಿಲ್ಲ. ಆದ್ದರಿಂದ ಜಿಲ್ಲಾಡಳಿತ ನಮ್ಮ ಕುಟುಂಬ ನಿರ್ವಹಣೆ ಬಗ್ಗೆಯೂ ಯೋಚಿಸಬೇಕು. ನಮಗೆ ಮನೆ ಮನೆಗೆ ತೆರಳಿ, ಕಟಿಂಗ್ ಮಾಡಲು ಅವಕಾಶ ಮಾಡಿಕೊಡಬೇಕು. ಹ್ಯಾಂಡ್ ಗ್ಲೌಸ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಬೇಕು. ಅಂದಾಗ ಕೊಂಚ ಜೀವನ ನಡೆಸಲು ಅನುಕೂಲವಾಗಲಿದೆ.
    | ನಾಗರಾಜ ಗೌಡರ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಹಾವೇರಿ

    ಕ್ಷೌರ ಮಾಡುವ ಕುರಿತು ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಹೀಗಾಗಿ, ಅವರಿಗೆ ಮನೆ ಮನೆಗೆ ತೆರಳಿ ಕ್ಷೌರ ಮಾಡಲು ಅವಕಾಶ ನೀಡಲು ಸದ್ಯ ಬರುವುದಿಲ್ಲ. ಸರ್ಕಾರದಿಂದ ಏನಾದರೂ ಸೂಚನೆ ಬಂದರೆ ತಿಳಿಸಲಾಗುವುದು.
    | ಬಸನಗೌಡ ಕೋಟೂರು, ತಹಸೀಲ್ದಾರ್ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts