More

    ಲಕ್ಷದಿಂದ 10 ಸಾವಿರಕ್ಕೆ ಇಳಿಕೆ

    ಮಂಜುನಾಥ ಅಂಗಡಿ ಧಾರವಾಡ

    ಬಾರೋ ಸಾಧನಕೇರಿಗೆ ಎಂದು ಹಾಡಿ ಕರೆದ ಕವಿ ಡಾ. ದ.ರಾ. ಬೇಂದ್ರೆ. ಅವರ ಸ್ಮರಣಾರ್ಥ ಕಾರ್ಯನಿರ್ವಹಿಸುತ್ತಿರುವ ವರಕವಿ ಡಾ. ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ಗೆ ಕೊಡಲಾಗುತ್ತಿದ್ದ ಅನುದಾನಕ್ಕೆ ಸರ್ಕಾರ ಕತ್ತರಿ ಹಾಕಿದೆ. ಜೊತೆಗೆ ‘ಅಂಬಿಕಾತನಯದತ್ತ’ ರಾಷ್ಟ್ರೀಯ ಪ್ರಶಸ್ತಿಯ ನಗದನ್ನೂ ಕಡಿತ ಮಾಡಿರುವುದು ಸಾಹಿತಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

    ಪ್ರತಿವರ್ಷ ಜ. 31ರಂದು ಬೇಂದ್ರೆ ಜನ್ಮದಿನ ಆಚರಿಸಲಾಗುತ್ತದೆ. ನಾಡಿನ ಸಾಹಿತಿಯೊಬ್ಬರ ಸಮಗ್ರ ಸಾಹಿತ್ಯ ಅವಲೋಕನ ಮಾಡಿ ಅಂದು ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಕೊಡಲಾಗುತ್ತದೆ. ಇದುವರೆಗೆ 1 ಲಕ್ಷ ರೂ. ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತಿತ್ತು. ಪ್ರಸಕ್ತ ವರ್ಷದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಶಸ್ತಿಯ ಮೊತ್ತವನ್ನು 10 ಸಾವಿರ ರೂ.ಗೆ ಇಳಿಸಿದೆ. ಬೇಂದ್ರೆಯವರ 125ನೇ ಜಯಂತಿಗೆ ತಯಾರಿ ನಡೆಸುತ್ತಿರುವ ಸಂದರ್ಭದಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿರುವುದು ಸಾಹಿತ್ಯಿಕ ವಲಯದ ಅಸಮಾಧಾನಕ್ಕೆ ಕಾರಣವಾಗಿದೆ.

    ಟ್ರಸ್ಟ್​ನಿಂದ 2003ರಿಂದ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಕೊಡಮಾಡಲಾಗುತ್ತಿದೆ. ಆರಂಭದಲ್ಲಿ ಪ್ರಶಸ್ತಿಯ ನಗದು 10,000 ರೂ. ಇತ್ತು. ಪ್ರಥಮ ಪ್ರಶಸ್ತಿಗೆ ಪ್ರೊ. ಕೀರ್ತಿನಾಥ ಕುರ್ತಕೋಟಿ ಭಾಜನರಾಗಿದ್ದಾರೆ.

    2009ರಿಂದ ಪ್ರಶಸ್ತಿ ಮೊತ್ತವನ್ನು ಲಕ್ಷ ರೂ.ಗೆ ಏರಿಸಲಾಯಿತು. ಆಗ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಈಗ ಅವರೇ ಸಿಎಂ ಆಗಿರುವಾಗ ಪ್ರಶಸ್ತಿ ಮೊತ್ತಕ್ಕೆ ಕತ್ತರಿ ಬಿದ್ದಿದೆ!

    ಅಧ್ಯಕ್ಷ, 3-4 ಸದಸ್ಯರು ಹಾಗೂ ಟ್ರಸ್ಟ್ ಅಧ್ಯಕ್ಷರನ್ನು ಒಳಗೊಂಡ ಆಯ್ಕೆ ಸಮಿತಿ, ಅಳೆದು ತೂಗಿ ಅರ್ಹರನ್ನು ಆರಿಸಿ ಪ್ರಶಸ್ತಿ ನೀಡುತ್ತ ಬಂದಿದೆ. ಈ ಸಲ, ನಾಡಿನ ಹಿರಿಯರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಆರಿಸಿ 10 ಸಾವಿರ ರೂ. ಕನಿಷ್ಠ ಮೊತ್ತ ನೀಡುವುದು ಅವಮಾನಕರ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    ಧಾರವಾಡಕ್ಕಷ್ಟೇ ಸೀಮಿತ ಅಲ್ಲ: ದ.ರಾ. ಬೇಂದ್ರೆಯವರು ಧಾರವಾಡ ಜಿಲ್ಲೆಗಷ್ಟೇ ಸೀಮಿತರಲ್ಲ. ವರಕವಿ ಎಂದೇ ಖ್ಯಾತರಾಗಿದ್ದ ಅವರು ಸಮಗ್ರ ಕನ್ನಡದ ಆಸ್ತಿ. ಅಂಥವರನ್ನು ಶಾಶ್ವತವಾಗಿ ನೆನಪಿಟ್ಟುಕೊಳ್ಳಲು ಸ್ಥಾಪನೆಯಾಗಿರುವ ಟ್ರಸ್ಟ್​ಗೆ ಅನುದಾನ ಕಡಿತ ಮಾಡಿದರೆ ಹೇಗೆ ಎಂಬ ಪ್ರಶ್ನೆ ಅವರ ಅಭಿಮಾನಿ ವರ್ಗದವರಿಂದ ಕೇಳಿಬರುತ್ತಿದೆ.

    ಅನುದಾನ ಮೊತ್ತವೂ ಇಳಿಕೆ: ಬೇಂದ್ರೆ ಟ್ರಸ್ಟ್​ಗೆ ವಾರ್ಷಿಕ 15 ಲಕ್ಷ ರೂ. ಅನುದಾನ ನೀಡಲಾಗುತ್ತಿತ್ತು. ಕುಮಾರಸ್ವಾಮಿ ಸಿಎಂ ಆದಾಗ ಟ್ರಸ್ಟ್​ಗಳ ವಾರ್ಷಿಕ ಅನುದಾನವನ್ನು 10 ಲಕ್ಷ ರೂ.ಗೆ ಇಳಿಸಿದ್ದರು. ಡಿ.ಕೆ. ಶಿವಕುಮಾರ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗ 4 ಲಕ್ಷ ರೂ.ಗೆ ಇಳಿಸಿದ್ದರು. ಅದೇ ಈಗಲೂ ಚಾಲ್ತಿಯಲ್ಲಿದೆ. ಬೇಂದ್ರೆ ಟ್ರಸ್ಟ್ ವರ್ಷವಿಡೀ ಆಯೋಜಿಸುವ ಕಾರ್ಯಕ್ರಮ, ನಿರ್ವಹಣೆ, ಸಿಬ್ಬಂದಿಯ ವೇತನವೇ 6.25 ಲಕ್ಷ ರೂ. ಆಗುತ್ತದೆ.

    ಸರ್ಕಾರ ವಾರ್ಷಿಕ ಅನುದಾನವನ್ನು 4 ಲಕ್ಷಕ್ಕೆ ಇಳಿಸಿದೆ. ರಾಷ್ಟ್ರೀಯ ಪ್ರಶಸ್ತಿಗೆ ನಗದು ಮೊತ್ತ 10 ಸಾವಿರ ರೂ. ನೀಡುವಂತೆ ಸೂಚಿಸಿದೆ. ಬೇಂದ್ರೆ ಬಂಧುಗಳು ಹಾಗೂ ಮಿತ್ರರು ಮೀಸಲಿಟ್ಟಿದ್ದ 1.25 ಲಕ್ಷ ರೂ. ಈಗ 3.90 ಲಕ್ಷ ರೂ. ಆಗಿದೆ. ಅದರಲ್ಲೇ ಪ್ರಸಕ್ತ ವರ್ಷದ ಪ್ರಶಸ್ತಿಯ ನಗದನ್ನು 1 ಲಕ್ಷ ರೂ. ನೀಡುವ ಯೋಜನೆ ಇದೆ. ಜ. 8ರಂದು ಸಚಿವ ಸಿ.ಟಿ. ರವಿ ಎಲ್ಲ ಟ್ರಸ್ಟ್​ಗಳ ಸಭೆ ಕರೆದಿದ್ದು, ಅನುದಾನ ಹೆಚ್ಚಿಸಲು ಒತ್ತಾಯಿಸಲಾಗುವುದು. | ಡಾ. ಡಿ.ಎಂ. ಹಿರೇಮಠ ಬೇಂದ್ರೆ ಟ್ರಸ್ಟ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts