More

    ರೈತನ ಕೈಹಿಡಿದ ಕಲ್ಲಂಗಡಿ

    ಗಜೇಂದ್ರಗಡ: ಸೂರ್ಯನ ಪ್ರಖರತೆ ಹೆಚ್ಚುತ್ತಿದ್ದಂತೆಯೇ ಜನರು ತಂಪು ಹಾಗೂ ಆರೋಗ್ಯಕರ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದೇ ಋತುವಿನ ಸದುಪಯೋಗ ಮಾಡಿಕೊಂಡ ರೈತನೊಬ್ಬ ಕಡಿಮೆ ಖರ್ಚಿನಲ್ಲಿ ಹೆಚ್ಚು ಕಲ್ಲಂಗಡಿ ಬೆಳೆದು ಭರ್ಜರಿ ಲಾಭ ಮಾಡಿಕೊಂಡಿದ್ದಾನೆ.

    ಕಣವಿ ತಾಂಡಾದ ರೈತ ತಿರುಪತಿ ರಾಠೋಡ ಅವರು ಮೆಕ್ಕೆಜೋಳ, ಶೇಂಗಾ ಬೆಳೆಯ ನಂತರ ಕಲ್ಲಂಗಡಿ ಬೆಳೆದು ತಮ್ಮ ಆದಾಯ ಹೆಚ್ಚಿಸಿಕೊಂಡಿದ್ದಾರೆ. ಜಿಗೇರಿ ಕೆರೆ ಬಳಿಯ 3 ಎಕರೆ ತೋಟದಲ್ಲಿ ಶುಗರ್ಕ್ವೀನ್ ತಳಿಯ ಕಲ್ಲಂಗಡಿ ಬೆಳೆದು ಎರಡು ತಿಂಗಳಲ್ಲೇ ಲಕ್ಷಾಂತರ ರೂ. ಲಾಭ ಪಡೆದಿದ್ದಾರೆ.

    ಈ ಬೆಳೆ ಬೆಳೆಯಲು ಅವರು ವಿನಿಯೋಗಿಸಿದ್ದು ಎಕರೆಗೆ 30ರಿಂದ 40 ಸಾವಿರ ರೂ. ಮಾತ್ರ. ಒಂದು ಎಕರೆಗೆ 18ರಿಂದ 25 ಟನ್ ಇಳುವರಿ ಬಂದಿದ್ದು, ಸದ್ಯ ಮಾರುಕಟ್ಟೆ ದರ ಕೆಜಿಗೆ ರೂ. 8 ದೊರೆಯುತ್ತಿದೆ. ಒಟ್ಟು ಎರಡು ತಿಂಗಳಲ್ಲಿ ಖರ್ಚು ವೆಚ್ಚಗಳನ್ನು ಕಳೆದು ಎಕರೆಗೆ ಅಂದಾಜು 1 ಲಕ್ಷ ರೂ. ಲಾಭ ಬಂದಿದೆ. ಜತೆಗೆ ಸಾವಯವ ಕೃಷಿಯ ಮೂಲಕ ಭೂಮಿಯ ಫಲವತ್ತತೆ ಕಾಪಾಡಿಕೊಂಡಿದ್ದಾರೆ.

    ಗುಡ್ಡದ ಜಾಡಿನಲ್ಲಿರುವ 3 ಎಕರೆ ಜಮೀನನ್ನು ಮೊದಲು ಹದ ಮಾಡಿಕೊಂಡು, ಪ್ರತಿ ಎಕರೆಗೆ 10 ಟನ್ ತಿಪ್ಪೆ ಗೊಬ್ಬರ, 2 ಟನ್ ಎರೆಹುಳು ಗೊಬ್ಬರ, 4 ಕ್ವಿಂಟಾಲ್ ಬೇವಿನ ಹಿಂಡಿ ಹಾಕಿ ಬೆಡ್ ನಿರ್ಮಾಣ ಮಾಡಿಕೊಂಡರು. ನಂತರ ಡ್ರಿಪ್ ಅಳವಡಿಸಿ, ಮಫ್ಲಿಂಗ್ ಪೇಪರ್ ಹೊದಿಸಿ ಜಿಗ್ ಜಾಗ್ ಪದ್ಧತಿಯಲ್ಲಿ ಎಕರೆಗೆ 6,000 ಸಸಿ ನಾಟಿ ಮಾಡಿದ್ದರು. ಅಗತ್ಯವಿದ್ದಾಗ ಜೀವಸಾರ ಘಟಕದಿಂದ ಹನಿ ನೀರಾವರಿ ಮೂಲಕ ಸಾವಯವ ಗೊಬ್ಬರ ನೀಡಿದ್ದಾರೆ.

    ನೀರಿನ ಉಳಿತಾಯ: ಹನಿ ನೀರಾವರಿಯಿಂದ ಈ ಬೆಳೆಗೆ ಪ್ರತಿ ದಿನ ಎರಡು ತಾಸು ನೀರು ಸಿಂಪಡಿಸಬೇಕಾಗುತ್ತದೆ. ಇದರಿಂದ ನೀರಿನ ಉಳಿತಾಯವಾಗುವುದಲ್ಲದೆ, ಕಳೆ ನಿಯಂತ್ರಣವಾಗುತ್ತದೆ. ಕಲ್ಲಂಗಡಿ ಬೆಳೆಯ ಏರು ಮಡಿಗೆ ಮಫ್ಲಿಂಗ್ ಪೇಪರ್ ಹೊದಿಸುವುದರಿಂದ ಭೂಮಿ ವಾತಾವರಣ ಬಿಸಿಯಾಗಿ ಕಳೆ, ರೋಗ ಮತ್ತು ಕೀಟಗಳ ಸಂತಾನೋತ್ಪತ್ತಿಗೆ ತೊಡಕಾಗುತ್ತದೆ. ಇದರಿಂದಾಗಿ ಈ ಬೆಳೆಯಲ್ಲಿ ಕೀಟಗಳ ಬಾಧೆ ಕಂಡು ಬರುವುದಿಲ್ಲ.

    ಹವಾಮಾನಕ್ಕೆ ಅನುಸಾರವಾಗಿ ಕೆಲವೊಂದು ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರವನ್ನು ಸಿಂಪಡಿಸಲಾಗಿದೆ. ಸಸಿ ಹಚ್ಚಿದ 22 ರಿಂದ 30 ದಿನದೊಳಗೆ ಕಾಯಿ ಬಿಟ್ಟಿತು. ಒಟ್ಟು 2 ತಿಂಗಳ ಬೆಳೆಯಾಗಿರುವ ಶುಗರ್ ಕ್ವೀನ್ ತಳಿಯ ಕಲ್ಲಂಗಡಿ ಒಂದು ಸಸಿಗೆ 2 ರಿಂದ 5 ಕೆಜಿ ಇಳುವರಿ ಕೊಟ್ಟಿದೆ.

    | ತಿರುಪತಿ, ಕಲ್ಲಂಗಡಿ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts