More

    ಯೋಗ-ಶಿವಯೋಗದಲ್ಲಿದೆ ಅಂತರಂಗ ಶುದ್ಧಿ- ಬಸವಪ್ರಭು ಸ್ವಾಮೀಜಿ

    ದಾವಣಗೆರೆ: ಸ್ನಾನ ಮಾಡಿದರೆ ದೇಹ ಶುದ್ಧಿಯಾಗಲಿದೆ. ಆದರೆ ಮನಸ್ಸು- ಅಂತರಂಗ, ಬುದ್ಧಿಯ ಶುದ್ಧಿಗೆ ನಿತ್ಯವೂ ಯೋಗ-ಶಿವಯೋಗ ಮಾಡಬೇಕು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
    ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದಿಂದ ಇಲ್ಲಿನ ಶಿವಯೋಗಾಶ್ರಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಯೋಗ ತರಬೇತಿ ಶಿಬಿರದಲ್ಲಿ ಆಶೀರ್ವಚನ ನೀಡಿದರು.
    ದಾವಣಗೆರೆಯಲ್ಲಿ ಯೋಗ ಪಟುಗಳು ಹೆಚ್ಚಿದ್ದಾರೆ. ಹೀಗಾಗಿ ಶಿಕ್ಷಣ, ಬೆಣ್ಣೆದೋಸೆಗೆ ಹೆಸರಾದ ಊರು ಮುಂದಿನ ದಿನದಲ್ಲಿ ಯೋಗ ನಗರಿ ಎಂದು ಖ್ಯಾತಿ ಪಡೆಯಲಿ. ಯೋಗದಿಂದ ರೋಗಗಳು ನಿವಾರಣೆ ಆಗಲಿವೆ. ಹೀಗಾಗಿ ಯೋಗದ ಮಹತ್ವ ಅರಿತು ಪಾಲಿಸಿ ರೋಗಗಳನ್ನು ತಡೆಯೋಣ ಎಂದರು.
    ಮನುಷ್ಯನ ಮಿದುಳಿನಲ್ಲಿ ಕೆಡುಕಿನ, ನಕಾರಾತ್ಮಕ ಆಲೋಚನೆಗಳೇ ಹೆಚ್ಚು. ಇದರಿಂದ ದುಷ್ಟತನ, ದುಷ್ಟ ವರ್ತನೆಗಳೇ ಹೆಚ್ಚಲಿವೆ. ಇದರಿಂದ ದೇಶದಲ್ಲಿ ಅಶಾಂತಿ ನೆಲೆಸಲಿದೆ. ಬಾಹ್ಯ ಸೌಂದರ್ಯ ಚೆನ್ನಾಗಿದ್ದರೆ ಸಾಲದು. ಅಂತರಂಗವನ್ನು ಸ್ವಚ್ಛವಾಗಿಡಲು ನಿತ್ಯವೂ ಯೋಗ ಮಾಡುವುದು ಅಗತ್ಯ. ಇದರಿಂದ ಒಳ್ಳೆಯತನ, ಸಾತ್ವಿಕ ಶಕ್ತಿ ಸಿದ್ಧಿಸಲಿದೆ ಎಂದು ತಿಳಿಸಿದರು.
    ಶಿವಯೋಗಾಶ್ರಮ ಟ್ರಸ್ಟ್‌ನ ಎಂ. ಜಯಕುಮಾರ್ ಮಾತನಾಡಿ ಇಂದು ಗಲ್ಲಿ-ಗಲ್ಲಿಯಲ್ಲೂ ತೋಗ ತರಗತಿಗಳು ನಡೆಯುತ್ತಿವೆ. ಯೋಗವನ್ನು ಕಲಿತವರು ಕೈಬಿಡದೇ ನಿರಂತರವಾಗಿ ಮುಂದುವರಿಸಬೇಕು ಎಂದು ಹೇಳಿದರು.
    ಪಾಲಿಕೆ ಸದಸ್ಯ ಎಸ್.ಟಿ.ವೀರೇಶ್ ಮಾತನಾಡಿ ಯೋಗದಿಂದ ವೈಯಕ್ತಿಕ ಆರೋಗ್ಯದ ಜತೆಗೆ ಸಾಮಾಜಿಕ ಆರೋಗ್ಯವೂ ಸುಧಾರಿಸಲಿದೆ. ಯೋಗಕ್ಕೆ ಜಾತಿ-ಮತ-ಪಕ್ಷಭೇದವಿಲ್ಲ. ಎಲ್ಲರನ್ನೂ ಒಂದುಗೂಡಿಸುವುದೇ ಯೋಗ. ನಗರದಲ್ಲಿ ಯೋಗದ ಪ್ರಚಾರ ಹೆಚ್ಚು ಆಗುವ ಮೂಲಕ ಸಮಾಜದ ಆರೋಗ್ಯವೂ ವೃದ್ಧಿಸಲಿ ಎಂದು ಆಶಿಸಿದರು.
    ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಮಾತನಾಡಿ ಮೈಸೂರು ಬಿಟ್ಟರೆ ದಾವಣಗೆರೆಯಲ್ಲೇ ಅತಿ ಹೆಚ್ಚಿನ ಯೋಗ ಪಟುಗಳಿದ್ದಾರೆ. ಯೋಗ ಒಕ್ಕೂಟ ಪ್ರತಿ ವರ್ಷ ಶಿಬಿರಗಳನ್ನು ಸಂಘಟಿಸುತ್ತ ಬಂದಿದೆ ಎಂದರು.
    ವೈದ್ಯಶ್ರೀ ಚನ್ನಬಸವಣ್ಣ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಮಲ್ಲಿಕಾರ್ಜುನ ಮಾಳಗಿ- ಸೂರಜ್ ಯೋಗ ನೃತ್ಯ ಮಾಡಿ ಗಮನ ಸೆಳೆದರು.
    ಕಾರ್ಯಕ್ರಮದಲ್ಲಿ ಶಿವಯೋಗಾಶ್ರಮ ಟ್ರಸ್ಟ್‌ನ ಅಂದನೂರು ಮುಪ್ಪಣ್ಣ, ಯು. ಸಿದ್ದೇಶಿ, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ವೀರೇಂದ್ರ, ಶರಣಾರ್ಥಿ ಬಕ್ಕೇಶ್, ಉಮಾಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts