More

    ಮೈಸೂರು ಲೋಕಸಭಾ ಕ್ಷೇತ್ರ : ಎರಡು ಬಾರಿಯೂ ನೋಟಾಗೆ 5ನೇ ಸ್ಥಾನ

    ಸದೇಶ್ ಕಾರ್ಮಾಡ್ ಮೈಸೂರು
    ಮತದಾನ ಪ್ರಮಾಣ ಹೆಚ್ಚು ಮಾಡುವ ಸಲುವಾಗಿ ಚುನಾವಣಾ ಆಯೋಗ 2013ರಲ್ಲಿ ಜಾರಿಗೆ ತಂದ ನಂತರ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನೋಟಾ ಗಣನೀಯ ಪ್ರಮಾಣದಲ್ಲಿ ಮತವನ್ನು ಪಡೆಯುತ್ತಿದೆ.

    ಚುನಾವಣಾ ಕಣದಲ್ಲಿರುವ ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಮತದಾರರು ಆಸಕ್ತಿ ಹೊಂದಿಲ್ಲದೆ ಇದ್ದರೆ ಅಂತಹ ಮತದಾರರು ನೋಟಾ (ಮೇಲಿನ ಅಭ್ಯರ್ಥಿಗಳು ಯಾರು ಅಲ್ಲ) ಚಲಾವಣೆ ಮಾಡಬಹುದು. None Of The Above (NOTA) ಎನ್ನುವುದರ ಸಂಕ್ಷಿಪ್ತ ರೂಪವೇ ನೋಟಾ.

    ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಮ್ಮ ಪ್ರತಿನಿಧಿಗಳು ಆಗಲು ಅರ್ಹರಲ್ಲ ಎಂಬ ಅಭಿಪ್ರಾಯವನ್ನು ಸಾಕಷ್ಟು ಮತದಾ ರರು ಹೊಂದಿರುತ್ತಾರೆ. ಅಂತಹ ಮತದಾರರು ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸುವ ಮನಸ್ಸು ಮಾಡುವುದಿಲ್ಲ. ಹೀಗಾಗಿ ಅಂತಹ ಮತದಾರರಿಗೂ ತಮ್ಮ ಹಕ್ಕನ್ನು ಚಲಾಯಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಚುನಾವಣಾ ಆಯೋಗ ನೋಟಾವನ್ನು ಪರಿಚಯಿಸಿತು. ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳ ಹೆಸರಿನ ಬಳಿಕ ಕೊನೆಯ ಸಾಲಿನಲ್ಲಿ ನೋಟಾ ಆಯ್ಕೆ ಇರುತ್ತದೆ.

    2013ರಲ್ಲಿ ಛತ್ತೀಸ್‌ಗಢ, ಮಿಜೋರಾಂ, ದೆಹಲಿ, ರಾಜಸ್ತಾನ ಹಾಗೂ ಮಧ್ಯಪ್ರದೇಶದ ಪಂಚರಾಜ್ಯ ಚುನಾವಣೆಯಲ್ಲಿ ಪ್ರಥಮ ಬಾರಿಗೆ ನೋಟಾವನ್ನು ಚುನಾವಣಾ ಆಯೋಗ ಪರಿಚಯಿಸಿತ್ತು. 2014ರ ನಂತರದ ಲೋಕಸಭೆ ಚುನಾವಣೆಯಲ್ಲಿ ನೋಟಾ ಬಳಕೆಯಲ್ಲಿದೆ.

    ಒಂದುವೇಳೆ ಕಣದಲ್ಲಿರುವ ಅಭ್ಯರ್ಥಿಗಳಿಗಿಂತ ನೋಟಾ ಹೆಚ್ಚಿನ ಮತಗಳನ್ನು ಪಡೆದರೆ ಎಲ್ಲ ಅಭ್ಯರ್ಥಿಗಳು ಅನರ್ಹಗೊಳ್ಳುವರೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ಆದರೆ, ನೋಟಾ ಆಯ್ಕೆಯು ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ನೋಟಾಗೆ ಹೆಚ್ಚು ಮತ ಚಲಾವಣೆಯಾದರೂ ನೋಟಾದ ನಂತರ ಅತೀ ಹೆಚ್ಚು ಮತ ಪಡೆದ ಅಭ್ಯರ್ಥಿಗೆ ಗೆಲುವು ಒಲಿಯಲಿದೆ. ನೋಟಾ ಮತಕ್ಕೆ ಪ್ರಾಶಸ್ತ್ಯ ಇಲ್ಲದೆ ಹೋದರೂ, ಕಣದಲ್ಲಿರುವ ಅಭ್ಯರ್ಥಿಗಳ ವಿರುದ್ಧ ಮತದಾರರು ತಮ್ಮ ಅಸಮಾಧಾನವನ್ನು ಹೊರ ಹಾಕಲು ಇದೊಂದು ವೇದಿಕೆಯಾಗಿದೆ.

    ಗಮನ ಸೆಳೆದ ನೋಟಾ: ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ನೋಟಾ ಬಳಕೆಯಾಗಿದೆ. ವಿಶೇಷವೆಂದರೆ ಎರಡು ಬಾರಿಯೂ ನೋಟಾ 5ನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದು ವಿಶೇಷ. ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳ ಹೆಸರಿನ ಬಳಿಕ ಕೊನೆಯ ಸಾಲಿನಲ್ಲಿ ನೋಟಾ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಜನರು ತಮಗೆ ಅರಿವು ಇಲ್ಲದೆ ನೋಟಾಗೆ ಮತ ಚಲಾಯಿಸುವ ಸಾಧ್ಯತೆ ಇರುತ್ತದೆ. ಸಾಕಷ್ಟು ಜನರು ಪ್ರತಿಭಟನೆಯ ಅಸ್ತ್ರವಾಗಿ ನೋಟಾವನ್ನು ಚಲಾಯಿಸುತ್ತಿದ್ದಾರೆ.

    2014ರ ಲೋಕಸಭಾ ಚುನಾವಣೆಯಲ್ಲಿ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ನೋಟಾ 5ನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆಯಿತು. ಒಟ್ಟು 8,924 ಜನರು ನೋಟಾಗೆ ಮತವನ್ನು ಚಲಾಯಿಸಿದ್ದರು. ಒಟ್ಟು 8,914 ಮತದಾರರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರೆ 10 ಮತದಾರರು ಅಂಚೆ ಮೂಲಕ ನೋಟಾಗೆ ಮತ ಚಲಾಯಿಸಿದ್ದರು. ಬಿಜೆಪಿಯ ಪ್ರತಾಪ್ ಸಿಂಹ 5,03,908 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಡಗೂರು ಎಚ್. ವಿಶ್ವನಾಥ್ ಅವರನ್ನು 31,608 ಮತಗಳ ಅಂತರದಿಂದ ಸೋಲಿಸಿದ್ದರು. ಅಡಗೂರು ಎಚ್. ವಿಶ್ವನಾಥ್ 4,72,300 ಮತಗಳನ್ನು ಪಡೆದಿದ್ದರು. ಉಳಿದಂತೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್. ಚಂದ್ರಶೇಖರಯ್ಯ 1,38,587 ಮತಗಳನ್ನು, ಬಿಎಸ್‌ಪಿ ಅಭ್ಯರ್ಥಿಯ ಸಿ.ಮೋಹನ್ ಕುಮಾರ್ 13,637 ಮತಗಳನ್ನು ಪಡೆದಿದ್ದರು. ಉಳಿದ ಅಭ್ಯರ್ಥಿಗಳು ನೋಟಾದಷ್ಟು ಮತವನ್ನು ಕಲೆ ಹಾಕಲು ಸಾಧ್ಯವಾಗಿಲ್ಲ.

    2019ರ ಚುನಾವಣೆಯಲ್ಲಿ ಒಟ್ಟು 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ನೋಟಾ 5ನೇ ಸ್ಥಾನ ಪಡೆದದ್ದು ವಿಶೇಷ. ಒಟ್ಟು 5346 ಜನರು ನೋಟಾಗೆ ಮತವನ್ನು ಚಲಾಯಿಸಿದ್ದರು. ಒಟ್ಟು 3,319 ಜನರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರೆ 27 ಜನರು ಅಂಚೆ ಮತದಾನದ ಮೂಲಕ ನೋಟಾಗೆ ಮತ ಚಲಾಯಿಸಿದ್ದು ವಿಶೇಷ. ಬಿಜೆಪಿಯ ಪ್ರತಾಪ್ ಸಿಂಹ 6,88,974 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಿ.ಎಚ್. ವಿಜಯಶಂಕರ್ ಅವರನ್ನು 1,38,647 ಮತಗಳ ಅಂತರದಿಂದ ಸೋಲಿಸಿದ್ದರು. ಸಿ.ಎಚ್. ವಿಜಯಶಂಕರ್ ಒಟ್ಟು 5,50,327 ಮತಗಳನ್ನು ಪಡೆದಿದ್ದರು. ನ್ಯೂ ಇಂಡಿಯನ್ ಕಾಂಗ್ರೆಸ್ ಪಾರ್ಟಿಯ ಅಯೂಬ್ ಖಾನ್ 9,307, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀನಿವಾಸಯ್ಯ 6863 ಮತಗಳನ್ನು ಪಡೆದ್ದರು. ಉಳಿದ ಯಾವುದೇ ಅಭ್ಯರ್ಥಿಗಳು ನೋಟಾದಷ್ಟು ಮತವನ್ನು ಸಹ ಪಡೆಯಲು ಸಾಧ್ಯವಾಗಿಲ್ಲ.

    ಫಲಿತಾಂಶದ ಮೇಲೂ ಪರಿಣಾಮ

    ನೋಟಾ ಪಡೆಯುವ ಮತಗಳು ಚುನಾವಣಾ ಫಲಿತಾಂಶದ ಮೇಲೂ ಸಾಕಷ್ಟು ಬಾರಿ ಪರಿಣಾಮ ಬೀರುವ ಸಾಧ್ಯತೆ ಇದೆ. 2004ರಲ್ಲಿ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ್ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ವಿರುದ್ಧ ಕೇವಲ ಒಂದು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದು ಒಂದು ಮತಕ್ಕೆ ಇರುವ ಮಹತ್ವವನ್ನು ತೋರಿಸಿದ ಚುನಾವಣೆಯಾಗಿದೆ. ಹಾಗಾಗಿ ಕಡಿಮೆ ಅಂತರದಲ್ಲಿ ಗೆಲುವು ಪಡೆಯುವ ಕ್ಷೇತ್ರಗಳಲ್ಲಿ ನೋಟಾಗೆ ಹೆಚ್ಚು ಮತ ಚಲಾವಣೆಯಾದರೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts