More

    ಮೆಕ್ಕೆಜೋಳಕ್ಕೆ ಲದ್ದಿಹುಳು ಕಾಟ

    ಹಾವೇರಿ: ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿದ್ದ ಜಿಲ್ಲೆಯ ರೈತರಿಗೆ ಈ ವರ್ಷ ಕೀಟಗಳ ಬಾಧೆ ಕಾಡತೊಡಗಿದೆ.

    ಒಂದೆಡೆ ಬಿಟಿ ಹತ್ತಿಗೆ ಕಾಂಡ ಕೊರಕ ಕೀಟಬಾಧೆ ಕಂಡುಬಂದರೆ, ಮತ್ತೊಂದೆಡೆ ಮೆಕ್ಕೆಜೋಳಕ್ಕೆ ಲದ್ದಿಹುಳುವಿನ ಕಾಟ ಆರಂಭವಾಗಿದೆ. ಹೀಗಾಗಿ, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ರೋಗ ನಿಯಂತ್ರಣಕ್ಕೆ ಸಾವಿರಾರು ರೂ. ವೆಚ್ಚ ಮಾಡಿ ಕ್ರಿಮಿನಾಶಕ ಸಿಂಪಡಿಸುತ್ತಿದ್ದಾರೆ.

    ರೈತರು ಸ್ಥಳೀಯವಾಗಿ ಲದ್ದಿಹುಳು ಎಂದು ಕರೆಯುವ ಈ ಕೀಟಕ್ಕೆ ವೈಜ್ಞಾನಿಕವಾಗಿ ಸ್ಪೋಡಾಪ್ಟೆರಾ ಫ್ರೊಜಿಪೆರೆಡಾ ಎನ್ನಲಾಗುತ್ತದೆ. ಈ ಕೀಟವು ಪ್ರಮುಖವಾಗಿ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತದೆ. ರಾತ್ರಿ ವೇಳೆಯಲ್ಲಿ ಚಟುವಟಿಕೆಯಿಂದ ಕೂಡಿದ್ದು, 17ರಿಂದ 21ದಿನಗಳ ಕಾಲ ಬದುಕಿರುತ್ತದೆ. ಅಷ್ಟು ದಿನಗಳ ಕಾಲ ಹಾಗೆಯೇ ಬಿಟ್ಟರೆ ಬೆಳೆ ಸಂಪೂರ್ಣ ಹಾಳಾಗುವುದು ನಿಶ್ಚಿತವಾಗಿದೆ. ಮೆಕ್ಕೆಜೋಳ ಬೆಳೆಯ ಎಲೆಗಳ ನಡುವೆ ಇದ್ದುಕೊಂಡು ಕಾಂಡವನ್ನು ಕೊರೆಯುವ ಜತೆಗೆ ಎಲೆಗಳನ್ನು ಸಂಪೂರ್ಣವಾಗಿ ತಿಂದು ಹಾಕುತ್ತದೆ.

    ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮೆಕ್ಕೆಜೋಳವನ್ನು ಮಳೆಯಾಶ್ರಿತ 1,59,239 ಹೆಕ್ಟೇರ್, ನೀರಾವರಿಯಲ್ಲಿ 19,345 ಹೆಕ್ಟೇರ್ ಸೇರಿ ಒಟ್ಟು 1,78,584 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಮುಂಗಾರು ಹಂಗಾಮಿನ ಒಟ್ಟು ಬಿತ್ತನೆಯ ಶೇ. 50ಕ್ಕೂ ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳವನ್ನು ರೈತರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ಲದ್ದಿಹುಳುವಿನ ಬಾಧೆ ಎಲ್ಲೆಡೆಯೂ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದ್ದು, ರೈತರಲ್ಲಿ ಭೀತಿ ಮೂಡುವಂತೆ ಮಾಡಿದೆ. ಅಲ್ಲದೆ, ಸದ್ಯ ಕಳೆದೊಂದು ವಾರದಿಂದ ಜಿಲ್ಲಾದ್ಯಂತ ಮೋಡ ಮುಸುಕಿದ ವಾತಾವರಣ, ಜಿಟಿ ಜಿಟಿ ಮಳೆ ಇರುವುದರಿಂದ ಕ್ರಿಮಿನಾಶಕ ಸಿಂಪರಣೆ ಮಾಡಿದರೂ ಕೀಟಬಾಧೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಸಹ ರೈತರನ್ನು ಕಂಗೆಡಿಸಿದೆ. ಜಿಲ್ಲೆಯಲ್ಲಿ ಲದ್ದಿಹುಳುವಿನ ಬಾಧೆ ಹೆಚ್ಚುತ್ತಿದ್ದಂತೆಯೇ ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರ ಜಮೀನುಗಳಿಗೆ ಭೇಟಿ ಪರಿಶೀಲನೆ ನಡೆಸಿ, ರೈತರೊಂದಿಗೆ ಸಭೆ ನಡೆಸಿ ಕೀಟಬಾಧೆಗೆ ಪ್ರಾತ್ಯಕ್ಷಿಕೆ ಮೂಲಕ ಸಲಹೆ ನೀಡುತ್ತಿದ್ದಾರೆ.

    ಈಗಾಗಲೇ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕೀಟದ ಹತೋಟಿಗೆ ಸಲಹೆ ನೀಡುತ್ತಿದ್ದಾರೆ. ರೈತರು ಕೀಟಬಾಧೆಯ ತೀವ್ರತೆ ಕಡಿಮೆಯಿದ್ದ ಸಮಯದಲ್ಲಿ ಬೇವಿನ ಮೂಲದ ಕೀಟನಾಶಕವಾದ ಅಜಾಡಿರಕ್ಟಿನ್ ಶೇ. 5ರಷ್ಟು ಅಥವಾ ಜೈವಿಕ ಕೀಟನಾಶಕವಾದ ನ್ಯುಮೋರಿಯಾ ರಿಲೇ ಶಿಲೀಂದ್ರವನ್ನು 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. ಕೀಟಗಳ ತೀವ್ರತೆ ಹೆಚ್ಚಿದ್ದಲ್ಲಿ ಕೀಟನಾಶಕಗಳಾದ ಇಮಾಮೆಕ್ಟಿನ್ ಬೆಂಜೋಯೆಟ್ ಶೇ. 5ರಷ್ಟು, ಥಯಾಮೆಥೋಕ್ಸಿಮ್ ಲಾಮ್್ಡ ಸಹಲೋಥ್ರಿನ್ ಅನ್ನು ತಜ್ಞರ ಸಲಹೆ ಪಡೆದು ಸಿಂಪಡಣೆ ಮಾಡಬೇಕು.
    | ಬಿ. ಮಂಜುನಾಥ, ಜಂಟಿ ಕೃಷಿ ನಿರ್ದೇಶಕ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts