More

    ಮೂರೇ ದಿನದಲ್ಲಿ ಕಳ್ಳರು ಅಂದರ್

    ಕುಮಟಾ: ಪಟ್ಟಣದ ಹೆಗಡೆ ಕ್ರಾಸ್ ಬಳಿಯ ಗಜಾನನ ಗೋಪಾಲಕೃಷ್ಣ ಗೌರಯ್ಯ ಅವರ ಮನೆಯಲ್ಲಿ ಜ. 1ರಿಂದ 3ರ ಮಧ್ಯೆ ನಡೆದ ಕಳ್ಳತನ ಪ್ರಕರಣವನ್ನು ಮೂರೇ ದಿನದಲ್ಲಿ ಭೇದಿಸಿದ ಪೊಲೀಸರು, ಮಾಲು ಸಮೇತ ಇಬ್ಬರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಸೋಮವಾರ ಹಾಜರುಪಡಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ಡಿ. ತಿಳಿಸಿದರು.

    ಕುಮಟಾ ಠಾಣೆಯಲ್ಲಿ ಸುದ್ದಿಗಾರ ರಿಗೆ ಪ್ರಕರಣದ ಕುರಿತು ಸೋಮವಾರ ಮಾಹಿತಿ ನೀಡಿದ ಅವರು, ಗಜಾನನ ಗೌರಯ್ಯ ಅವರ ಮನೆಯಲ್ಲಿ 9.81 ಲಕ್ಷ ರೂ. ಮೌಲ್ಯದ 392 ಗ್ರಾಂ ಚಿನ್ನಾಭರಣ ಕಳುವಾಗಿತ್ತು. ಪ್ರಕರಣದ ತನಿಖೆ ನಡೆಸಿದ ವಿಶೇಷ ತಂಡ ಜ. 6ರಂದು ಬೆಳಗಿನ ಜಾವ ಗಿಬ್ ವೃತ್ತದ ಬಳಿ ಮೂವರಿದ್ದ ಕಾರನ್ನು ತಪಾಸಣೆಗೊಳಪಡಿಸಿದರು. ಅದರಲ್ಲಿ ಕಳ್ಳತನಕ್ಕೆ ಬಳಸುವ ಕಬ್ಬಿಣದ ರಾಡ್ ಪತ್ತೆಯಾಗಿತ್ತು. ಈ ವೇಳೆ ಪ್ರಮುಖ ಆರೋಪಿ ರಾಜು ಗಣೇಶನ್ ಪರಾರಿಯಾದ. ಅವನ ಸಹೋದರ ತಮಿಳುನಾಡಿನ ಕಳತ್ತೂರು ಮೂಲದ ಹಾಲಿ ಹೊಸೂರು ನಿವಾಸಿ ಗೋಪಿ ಗಣೇಶನ್, ಬೆಂಗಳೂರು ಮಾಗಡಿ ರಸ್ತೆ ಭುವನೇಶ್ವರಿನಗರದ ಹಾಲಿ ತಮಿಳುನಾಡಿನ ಹೊಸೂರು ನಿವಾಸಿ ಡೇವಿಡ್ ಫ್ರಾನ್ಸಿಸ್ ಎಂಬುವರನ್ನು ಬಂಧಿಸಲಾಗಿದೆ ಎಂದರು.

    ಬಂಧಿತರು ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಗೋಪಿ ಗಣೇಶನ ಮೇಲೆ 11 ಪ್ರಕರಣಗಳಿವೆ. ಡೇವಿಡ್ ಫ್ರಾನ್ಸಿಸ್ ಮೇಲೆ 6 ಹಾಗೂ ಪರಾರಿಯಾಗಿರುವ ಪ್ರಮುಖ ಆರೋಪಿ ರಾಜು ಗಣೇಶನ್ ಮೇಲೆ 26 ಪ್ರಕರಣಗಳಿವೆ. ಬಂಧಿತರು 2020ರ ಹೊಸ ವರ್ಷಾಚರಣೆಗೆ ಗೋವಾಕ್ಕೆ ಹೋಗಿ ವಾಪಸಾಗುವ ವೇಳೆ ಅಂಕೋಲಾದಲ್ಲಿ ಒಂದು ಕೇಬಲ್ ಕಚೇರಿಯ ಬಾಗಿಲು ಒಡೆದು ನಗದು ಕದ್ದಿದ್ದಾರೆ. ಅಲ್ಲಿಂದ ಕುಮಟಾಗೆ ಬಂದು ಗಜಾನನ ಗೌರಯ್ಯನವರ ಮನೆಯಲ್ಲಿ ಕಳುವು ಮಾಡಿದ್ದರು. ಪುನಃ ಕುಮಟಾದಲ್ಲಿ ಕಳುವು ಮಾಡಲು ತೆರಳುತ್ತಿರುವಾಗ ಪಿಎಸ್​ಐ ಸುಧಾ ಅಘನಾಶಿನಿ ಹಾಗೂ ಸಿಬ್ಬಂದಿ ಕೈಗೆ ಸಿಲುಕಿದ್ದರು ಎಂದು ಶಿವಪ್ರಕಾಶ ವಿವರ ನೀಡಿದರು.

    ಪ್ರಕರಣ ಪತ್ತೆಯಲ್ಲಿ ಎಸ್​ಪಿ ನಿಖಿಲ್ ಬುಳ್ಳಾವರ, ಸಿಪಿಐ ಪರಮೇಶ್ವರ ಗುನಗಾ, ಪಿಎಸ್​ಐ ಆನಂದಮೂರ್ತಿ, ಸಿಬ್ಬಂದಿ ಮಾರುತಿ ಗಾಣಪೂಜಿ, ದಯಾನಂದ ನಾಯ್ಕ, ಸಂತೋಷ ಬಾಳೇರ, ಕೃಷ್ಣ ಎನ್.ಜೆ., ಬಸವರಾಜ ಜಾಡರ, ಹುಚ್ಚಪ್ಪ ಚಾವಡಿ, ಸುರೇಂದ್ರ ಮಗದಮ್ಮ, ಹಾಲಪ್ಪ ಬಾಗಿ, ಗೃಹರಕ್ಷಕ ದಳದ ಬಾಬುರಾಯ, ಮೋಹನ್, ನಾರಾಯಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts