More

    ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್

    ಕಾರವಾರ: ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲ ಮೀನುಗಾರರಿಗೆ ಇನ್ನೆರಡು ತಿಂಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವಂತೆ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬ್ಯಾಂಕ್​ಗಳ ಮುಖ್ಯಸ್ಥರಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ ವಿವಿಧ ಬ್ಯಾಂಕ್​ಗಳ ಅಧಿಕಾರಿಗಳು, ಮೀನುಗಾರರ ಮುಖಂಡರು ಹಾಗೂ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಕಾರವಾರದ ಮೀನುಗಾರ ಮಹಿಳೆಯೊಬ್ಬಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಿ, ಈ ಯೋಜನೆಗೆ ಉ.ಕ. ಜಿಲ್ಲೆಯ ಮೂಲಕವೇ ಶುಭಾರಂಭ ಮಾಡಿದ್ದಾರೆ. ಜಿಲ್ಲೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್​ಗಾಗಿ 5 ಸಾವಿರ ಅರ್ಜಿಗಳು ಬಂದಿವೆ. 2,500 ಫಲಾನುಭವಿಗಳ ಹೆಸರನ್ನು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಬ್ಯಾಂಕ್​ಗಳಿಗೆ ನೀಡಿದರೂ ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂಬುದು ಬೇಸರದ ಸಂಗತಿ ಎಂದರು.

    ಇನ್ನು ಜಿಲ್ಲೆಯಲ್ಲಿ ಶೂನ್ಯ ಬಡ್ಡಿಯ ಸಾಲಕ್ಕಾಗಿ 11,500 ಮೀನುಗಾರರು ಅರ್ಜಿ ಸಲ್ಲಿಸಿದರೂ ಕೇವಲ 1800 ಮೀನುಗಾರರಿಗೆ ಮಾತ್ರ ಶೂನ್ಯ ಬಡ್ಡಿ ಸಾಲ ನೀಡಲಾಗಿದೆ. ಇನ್ನೆರಡು ತಿಂಗಳಲ್ಲಿ ಎಲ್ಲ ಅರ್ಜಿಗಳ ವಿಲೇವಾರಿ ಮಾಡಬೇಕು. ಬೋಟ್​ಗಳನ್ನು ಕೊಳ್ಳಲು ಯಾವುದೇ ಭದ್ರತೆ ಇಲ್ಲದೆ 2 ಲಕ್ಷದವರೆಗೆ ಸಾಲ ನೀಡಬೇಕು ಎಂದು ಜಿಲ್ಲಾ ಅಗ್ರಣಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

    ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟಗಾರರ ಫೆಡರೇಷನ್ ಅಧ್ಯಕ್ಷ ಗಣಪತಿ ಮಾಂಗ್ರೆ ಮಾತನಾಡಿ, ಮೀನುಗಾರರ ಸಾಲ ಮನ್ನಾಕ್ಕಾಗಿ ಉತ್ತರ ಕನ್ನಡದ ಮೀನುಗಾರರು ಹೋರಾಟ ಮಾಡಿದರು. ಆದರೆ, ಫಲ ಸಿಕ್ಕಿದ್ದು ಮಾತ್ರ ಉಡುಪಿ ಜಿಲ್ಲೆಗೆ. ರಾಜ್ಯದಲ್ಲಿ ಮೀನುಗಾರರ ಸಾಲ ಮನ್ನಾಕ್ಕಾಗಿ ಬಿಡುಗಡೆಯಾದ ಒಟ್ಟು 65 ಕೋಟಿಯಲ್ಲಿ ಅರ್ಧ ಉತ್ತರ ಕನ್ನಡಕ್ಕೆ ದೊರೆಯಬೇಕು ಎಂದು ವಾದಿಸಿದರು.

    ‘2017-18 ಹಾಗೂ 18-19 ರಲ್ಲಿ ಮೀನುಗಾರರು ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಪಡೆದ 50 ಸಾವಿರ ರೂ. ಸಾಲವನ್ನು ಸರ್ಕಾರ ಮನ್ನಾ ಮಾಡಿದೆ. ಇದಕ್ಕೆ ಒಟ್ಟು 65 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, 17 ಸಾವಿರ ಫಲಾನುಭವಿಗಳ ಪಟ್ಟಿ ಆಯ್ಕೆ ಮಾಡಲಾಗಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಲ ಪಡೆದವರು ಕಡಿಮೆ ಇದ್ದ ಹಿನ್ನೆಲೆಯಲ್ಲಿ ಸುಮಾರು 1 ಸಾವಿರ ಫಲಾನುಭವಿಗಳಿಗೆ ಒಟ್ಟು 2.2 ಕೋಟಿ ರೂ. ಮಾತ್ರ ಪ್ರಯೋಜನ ದೊರೆಯಲಿದೆ ಎಂಬುದಾಗಿ ತಿಳಿದುಬಂದಿದೆ. ಅದನ್ನು ಶೀಘ್ರ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಲಾಗುವುದು. ಮತ್ತು ಮಹಿಳಾ ಮೀನುಗಾರರಿಗೆ 50 ಸಾವಿರದವರೆಗೆ ಮಾರ್ಜಿನ್ ಇಲ್ಲದೆ, ಸಾಲ ನೀಡಲು ಹೆಚ್ಚಿನ ಆದ್ಯತೆ ನೀಡಲು ಬ್ಯಾಂಕ್​ಗಳಿಗೆ ಸೂಚಿಸುತ್ತೇನೆ’ ಎಂದು ಸಚಿವ ಪೂಜಾರಿ ತಿಳಿಸಿದರು.

    ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಮಾತನಾಡಿ, ಮೀನುಗಾರಿಕೆ ಇಲಾಖೆಯು ಬ್ಯಾಂಕ್ ಹಾಗೂ ಮೀನುಗಾರರ ಸಂಘಗಳ ಮಧ್ಯೆ ಹೊಂದಾಣಿಕೆ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಈ ಸಂಬಂಧ ಸಮನ್ವಯ ಸಭೆಯೊಂದನ್ನು ನಡೆಸಿ ಎಲ್ಲ ಯೋಜನೆಗಳ ಪ್ರಯೋಜನ ಫಲಾನುಭವಿಗಳಿಗೆ ಶೀಘ್ರ ಲಭ್ಯವಾಗುವ ವ್ಯವಸ್ಥೆ ಮಾಡಲಾಗುವುದು ಎಂದರು. ಶಾಸಕಿ ರೂಪಾಲಿ ನಾಯ್ಕ, ಜಿಪಂ ಸಿಇಒ ಎಂ.ರೋಶನ್, ಮಂಗಳೂರು ಮೀನುಗಾರರ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣಾ ಇದ್ದರು.

    ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಫಲಾನುಭವಿಗಳಿಗೆ ದಾಖಲಾತಿಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಭಾಷಾ ಸಮಸ್ಯೆ ಉಂಟಾಗುತ್ತಿದೆ. ಬ್ಯಾಂಕ್​ನ ಸಿಬ್ಬಂದಿ ಕನ್ನಡ ಭಾಷೆಯನ್ನು ಕಲಿತು ಕನ್ನಡದಲ್ಲಿಯೇ ವ್ಯವಹರಿಸಬೇಕು.
    ಕೋಟ ಶ್ರೀನಿವಾಸ ಪೂಜಾರಿ ಮೀನುಗಾರಿಕೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts