More

    ಮಾವು ಬೆಳೆಗಾರರ ನಿರೀಕ್ಷೆಗೆ ಬರೆ

    ಮಂಜುನಾಥ ಅಂಗಡಿ ಧಾರವಾಡ

    ಮುಂಗಾರು ಪೂರ್ವ ಮಳೆ ಈ ಬಾರಿ ಬಿರು ಬೇಸಿಗೆಯಲ್ಲಿ ಸುರಿದಿದೆ. ಕಳೆದ ವಾರ ಸುರಿದ ಮುಂಗಾರು ಪೂರ್ವ ಮಳೆ ಮಾವು ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಅಕಾಲಿಕ ಮಳೆ, ನೆರೆ, ಬರಗಾಲದ ದವಡೆಗೆ ಸಿಲುಕಿ ಮೊದಲೇ ತತ್ತರಿಸಿರುವ ಜಿಲ್ಲೆಯ ರೈತರು ಈ ಬಾರಿ ಮಾವು ಫಸಲಿನ ಮೇಲಿಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ.

    ಈ ಬಾರಿ ಮುಂಗಾರು ಪೂರ್ವ ಮಳೆ ಏಪ್ರಿಲ್​ನಲ್ಲೇ ಸುರಿದಿದೆ. 2 ಮತ್ತು 3ನೇ ವಾರದಲ್ಲಿ ಬಿರುಗಾಳಿ, ಆಲಿಕಲ್ಲು ಸಮೇತ ಸುರಿದ ಬಿರುಸಿನ ಮಳೆಗೆ ಮಾವು ಬೆಳೆಗಾರರಿಗೆ ಬರೆ ಎಳೆದಂತಾಗಿದೆ. ಒಂದು ತಿಂಗಳು ವಿಳಂಬವಾಗಿ ಹೂ ಬಿಟ್ಟು, ಚೆನ್ನಾಗಿ ಕಾಯಿ ಬಿಟ್ಟಿದ್ದ ತೋಟಗಳ ತುಂಬ ಮಾವಿನ ಕಾಯಿಗಳು ನೆಲಕ್ಕುರುಳಿವೆ.

    ಜಿಲ್ಲೆಯ ಅಳ್ನಾವರ, ಕಲಘಟಗಿ ತಾಲೂಕು, ಧಾರವಾಡ ತಾಲೂಕಿನ ನಿಗದಿ, ಕಲಕೇರಿ, ಕ್ಯಾರಕೊಪ್ಪ, ಮಲ್ಲಿಗವಾಡ, ಗರಗ, ಸಿಂಗನಹಳ್ಳಿ, ನರೇಂದ್ರ, ಮುರಕಟ್ಟಿ, ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಕೆಲ ಗ್ರಾಮ ಹಾಗೂ ಛಬ್ಬಿ ಹೋಬಳಿಯ ಗ್ರಾಮಗಳಲ್ಲಿ ಮಾವು ಪ್ರಮುಖ ಬೆಳೆ. ಈ ಭಾಗದ ಕಲಮಿ, ರತ್ನಾಗಿರಿ, ಆಪೂಸ, ಅಲ್ಪೋನ್ಸೋ ತಳಿಗಳು ಸುಪ್ರಸಿದ್ಧ. ಮಸಾರಿ ಭೂಮಿಯನ್ನು ಮಾವಿನ ತೋಟಗಳನ್ನಾಗಿ ಪರಿವರ್ತಿಸಿ ವರ್ಷಗಟ್ಟಲೇ ಜೋಪಾನ ಮಾಡಿದ ಮರಗಳೇ ಕೆಲವೆಡೆ ಇತ್ತೀಚಿನ ಬಿರುಗಾಳಿಗೆ ಬುಡಸಮೇತ ಕಿತ್ತು ಬಿದ್ದಿವೆ. ಮಾವು ಫಸಲು ಹಾನಿಯಾದರೆ ನೈಸರ್ಗಿಕ ವಿಕೋಪ ಪರಿಹಾರ ಸಿಗುವುದು ಕಷ್ಟ. ಸಿಕ್ಕರೂ ಕಚೇರಿಗಳಿಗೆ ಎಡತಾಕಿ ವರ್ಷಗಟ್ಟಲೇ ಕಾದರೂ ಚಿಲ್ಲರೆ ಕಾಸಿನ ಪರಿಹಾರ ರೈತರ ಕೈ ಸೇರುವುದು ವಿಪರ್ಯಾಸ. ಹೀಗಿರುವಾಗ ಮಾವಿನ ಮರಗಳೇ ಕಿತ್ತು ಬಿದ್ದು ಬೆಳೆಗಾರರ ಬದುಕಿಗೆ ಬರೆ ಎಳೆದಂತಾಗಿದೆ.

    ಜಿಲ್ಲೆಯಲ್ಲಿ 110,000 ಹೆಕ್ಟೇರ್ ಮಾವಿನ ತೋಟ ಇದೆ. ಧಾರವಾಡ ತಾಲೂಕಿನಲ್ಲಿ ಅತಿಹೆಚ್ಚು 6500 ಹೆ., ಕಲಘಟಗಿ 3500 ಹೆ., ಹುಬ್ಬಳ್ಳಿ 1000 ಹೆಕ್ಟೇರ್​ನಲ್ಲಿ ಮಾವು ಬೆಳೆಯಲಾಗುತ್ತಿದೆ.

    ಕಳೆದ ವರ್ಷ ಜಿಲ್ಲೆಯಲ್ಲಿ 80 ಸಾವಿರ ಮೆಟ್ರಿಕ್ ಟನ್ ಮಾವಿನ ಹಣ್ಣು ಬಂದಿತ್ತು. ಈ ಸಲದ ಇಳುವರಿ ಅದರ ಅರ್ಧದಷ್ಟಾಗಬಹುದು ಎಂದು ಅಂದಾಜಿಸಲಾಗುತ್ತಿದೆ.

    ಚಿಗುರೊಡೆದ ಮರಗಳು: ಕಳೆದ ಬಾರಿ ವಿಪರೀತ ಮಳೆಯಿಂದ ಈ ಬಾರಿ ಮಾವಿನ ಮರಗಳು ಚಿಗುರೊಡೆದಿವೆ. ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಹೂವು ಕಡಿಮೆ ಬಿಟ್ಟಿದ್ದರಿಂದ ಪ್ರಸಕ್ತ ವರ್ಷ ಕೇವಲ ಶೇ. 50ರಷ್ಟು ಮಾವಿನ ಫಸಲು ಬರುವ ನಿರೀಕ್ಷೆ ಇತ್ತು. ಇದೀಗ ಅಕಾಲಿಕ ಮಳೆಗೆ ಮಾವಿನಕಾಯಿ ಉದುರಿವೆ.

    ಇಲಾಖೆಯ ಪರಿಶೀಲನೆ ಹಾಗೂ ಬೆಳೆಗಾರರ ಮಾಹಿತಿ ಆಧರಿಸಿ ಈ ಬಾರಿ ಶೇ. 50ರಷ್ಟು ಮಾವಿನ ಫಸಲು ಬರುವ ಸಾಧ್ಯತೆ ಇದೆ. ಮೇ 10ರ ನಂತರ ಮಾವು ಪೇಟೆಗೆ ಬರುವ ನಿರೀಕ್ಷೆ ಇದೆ. ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಬಾಧಿತ ಧಾರವಾಡ, ಅಳ್ನಾವರ, ಹುಬ್ಬಳ್ಳಿ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕಾಯಿ ಉದುರಿ ಮತ್ತಷ್ಟು ಹಾನಿಯಾಗಿರುವುದು ಗಮನಕ್ಕೆ ಬಂದಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮಾವಿನ ಫಸಲು ವಿಮೆಗೆ ಒಳಪಟ್ಟಿದ್ದು, ರೈತರಿಗೆ ಒಂದಿಷ್ಟು ಅನುಕೂಲವಾಗುವ ಸಾಧ್ಯತೆ ಇದೆ.

    | ಡಾ. ರಾಮಚಂದ್ರ ಮಡಿವಾಳ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts