More

    ಮಾರ್ಗಸೂಚಿಯಂತೆ ಲಾಕ್‌ಡೌನ್ ಸಡಿಲಿಕೆ

    ಚಿಕ್ಕಬಳ್ಳಾಪುರ: ಕರೊನಾ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಬಿಗಿ ಕ್ರಮಗಳು ಎಂದಿನಂತೆ ಇನ್ನೂ ಎರಡು ದಿನ ಮುಂದುವರೆಯುವುದು ದಟ್ಟವಾಗಿದೆ.

    ಚಿಕ್ಕಬಳ್ಳಾಪುರ ನಗರದ 4, ಚಿಂತಾಮಣಿಯ 3 ವಾರ್ಡ್‌ಗಳು ಸೀಲ್‌ಡೌನ್ ಆಗಿದ್ದು ಉಳಿದೆಡೆ ನಗರ, ಪಟ್ಟಣ ಪ್ರದೇಶಗಳಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಮತ್ತು ಗ್ರಾಮೀಣ ಭಾಗದಲ್ಲಿ ಬೆಳಗ್ಗೆ 7ರಿಂದ ಸಂಜೆ 7 ರವರೆಗೆ ಜನಸಂಚಾರ ಮತ್ತು ವಹಿವಾಟಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಸಂಜೆ 7 ರಿಂದ ಬೆಳಗ್ಗೆ 7 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ.

    ಇನ್ನು ಮೂರನೇ ಹಂತದ ಲಾಕ್‌ಡೌನ್ ಮೇ 17ಕ್ಕೆ ಮುಕ್ತಾಯವಾಗಿದ್ದು, ಕೇಂದ್ರ ಸರ್ಕಾರ ಮೇ 31ರವರೆಗೆ ನಾಲ್ಕನೇ ಹಂತದ ಲಾಕ್‌ಡೌನ್ ವಿಸ್ತರಿಸಿದೆ. ಇದರ ನಡುವೆ ರಾಜ್ಯ ಸರ್ಕಾರ ಸಹ ಈಗಿರುವ ನಿಯಮಗಳ ಪಾಲನೆಯೊಂದಿಗೆ ಮೇ 19 ರವರೆಗೆ ಲಾಕ್‌ಡೌನ್ ಮುಂದುವರಿಸಲು ಸೂಚಿಸಿದೆ.

    ಇದರಿಂದಾಗಿ ಮುಂದಿನ ದಿನ ಲಾಕ್‌ಡೌನ್ ಸಡಿಲಿಕೆಯಲ್ಲಿ ಯಾವುದೇ ಬದಲಾವಣೆಯಾಗುವ ಲಕ್ಷಣಗಳು ಕಾಣುತ್ತಿಲ್ಲವಾದರೂ ಹೊಸ ಮಾರ್ಗಸೂಚಿ ಬಂದ ಬಳಿಕ ಜಿಲ್ಲಾಡಳಿತ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ತೀರ್ಮಾನ ತೆಗೆದುಕೊಳ್ಳಲಿದೆ ಎನ್ನಲಾಗಿದೆ.

    ಕಂಟೇನ್ಮೆಂಟ್ ಜೋನ್ ಬಿಗಿ: ಜಿಲ್ಲೆಯಲ್ಲಿ ಇದುವರೆಗೂ 24 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಇಬ್ಬರು ಮೃತಪಟ್ಟು, 18 ಮಂದಿ ಚೇತರಿಸಿಕೊಂಡಿದ್ದಾರೆ. ಉಳಿದಂತೆ 4 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಗೌರಿಬಿದನೂರಿನ 13 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿರುವುದರಿಂದ ಅಲ್ಲಿ ಲಾಕ್‌ಡೌನ್ ಸ್ವಲ್ಪ ಸಡಿಲಿಕೆಯಾಗಿದೆ. ನಗರವು ಕಂಟೇನ್ಮೆಂಟ್ ಜೋನ್‌ನಿಂದ ಹೊರಗೆ ಬಂದಿದೆ. ಚಿಕ್ಕಬಳ್ಳಾಪುರದಲ್ಲಿ 1 ಮತ್ತು ಚಿಂತಾಮಣಿಯಲ್ಲಿ 3 ಪ್ರಕರಣಗಳಿಂದ ಬಿಗಿ ಕ್ರಮಗಳು ಜಾರಿಯಲ್ಲಿವೆ. ಚಿಂತಾಮಣಿ ಕಂಟೇನ್ಮೆಂಟ್ ಜೋನ್ 9, 10, ಮತ್ತು 11 ವಾರ್ಡ್ ಮತ್ತು ಚಿಕ್ಕಬಳ್ಳಾಪುರ ಕಂಟೈನ್ಮೆಂಟ್ ಜೋನ್ 17, 13, 12 ಮತ್ತು 10ನೇ ವಾರ್ಡ್‌ಗಳು ಸೀಲ್‌ಡೌನ್ ಆಗಿದ್ದು ಇದು ಮೇ 31 ರವರೆಗೆ ಜಾರಿಯಲ್ಲಿರುವುದು ಬಹುತೇಕ ಖಚಿತವಾಗಿದೆ.

    ಇಬ್ಬರು ಗುಣಮುಖ : ಚಿಕ್ಕಬಳ್ಳಾಪುರ ನಗರದಲ್ಲಿ ಪತ್ತೆಯಾದ ಸೋಂಕಿತರ ಪೈಕಿ ಇಬ್ಬರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿನ 17ನೇ ವಾರ್ಡ್‌ನಲ್ಲಿ ಸೋಂಕಿನಿಂದ ಮೃತಪಟ್ಟ ವೃದ್ಧನ ಸಂಬಂಧಿ ಮಹಿಳೆ (42) ಮತ್ತು ವೃದ್ಧನ ಮಗನಿಂದ ಸೋಂಕಿಗೊಳಗಾದ ಆತನ ಸ್ನೇಹಿತ (30) ಗುಣಮುಖರಾಗಿದ್ದಾರೆ. ಇಬ್ಬರನ್ನು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಿ, ತಾಲೂಕಿನ ಚದಲಪುರ ಕ್ರಾಸ್ ಬಳಿ ಇರುವ ಐಸೋಲೇಷನ್ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ. ಸಕ್ರಿಯವಾಗಿರುವ 4 ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾದಲ್ಲಿ, ಹೊಸ ಪ್ರಕರಣಗಳು ಪತ್ತೆಯಾಗದಿದ್ದಲ್ಲಿ ಸದ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಸೋಂಕು ಮುಕ್ತವಾಗಲಿದೆ.

    ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಇದುವರೆಗೂ ಯಾವುದೇ ಆದೇಶ ಬಂದಿಲ್ಲ. ಸರ್ಕಾರದ ಆದೇಶಕ್ಕೆ ನಾವು ಎದುರು ನೋಡುತ್ತಿದ್ದು ಸೂಚನೆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    ವಿ.ಬಸವರಾಜ್, ವಿಭಾಗೀಯ ನಿಯಂತ್ರಣಾಧಿಕಾರಿ, ಚಿಕ್ಕಬಳ್ಳಾಪುರ

    ಚಿಂತಾಮಣಿ ಸೋಂಕಿನ ಮೂಲ ಕಗ್ಗಂಟು!: ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಪತ್ತೆಯಾದ ಸೋಂಕಿನ ಮೂಲ ಪತ್ತೆ ಹಚ್ಚುವುದೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸವಾಲಾಗಿದೆ.ನಗರದ ಚಿನ್ನದ ವ್ಯಾಪಾರಸ್ಥ ಕುಟುಂಬದ ವೃದ್ಧ, ಮಗ, ಮೊಮ್ಮಗನಿಗೆ ಸೋಂಕು ದೃಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಸೋಂಕು ಮೊದಲು ಯಾರಿಗೆ? ಯಾರಿಂದ? ತಗುಲಿತು ಎನ್ನುವುದರ ಬಗ್ಗೆ ತಿಳಿಯಲು ಸರ್ವೇ ನಡೆಸಲಾಗುತ್ತಿದೆ.

    ಇಂಗ್ಲೆಂಡ್ ಪ್ರವಾಸದಿಂದ ವಾಪಸಾಗಿ 50 ದಿನಗಳಿಗೂ ಹೆಚ್ಚಿನ ಕಾಲ ಹೋಂ ಕ್ವಾರಂಟೈನ್‌ನಲ್ಲಿದ್ದ ಸೋಂಕಿತ ವೃದ್ಧನ ಮೊಮ್ಮಗನಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಇದರ ನಡುವೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಮಂಡಿನೋವಿಗೆ ಚಿಕಿತ್ಸೆ ಪಡೆದು ಚಿಂತಾಮಣಿಗೆ ಬಂದಿದ್ದ ಮೊಮ್ಮಗನ ಅಜ್ಜಿ ಹೃದಯಾಘಾತದಿಂದ ಮೃತಪಟ್ಟಿದ್ದು ಅಂತ್ಯಕ್ರಿಯೆಯಲ್ಲಿ ವಿವಿಧ ಭಾಗಗಳ ಜನರು ಭಾಗವಹಿಸಿದ್ದರು. ಇದರಿಂದ ಅನುಮಾನಗೊಂಡು ಕುಟುಂಬಸ್ಥರ ಗಂಟಲು ದ್ರವದ ಮಾದರಿ ಪರೀಕ್ಷಿಸಿದಾಗ ಮೃತಳ ಪತಿ, ಬಳಿಕ ಮೊಮ್ಮಗ, ಕೊನೆಗೆ ಮಗನಿಗೂ ಸೋಂಕು ದೃಢಪಟ್ಟಿತ್ತು.

    ಸೋಂಕಿನ ಮೂಲ ಪತ್ತೆಗೆ ಮುಂದಾದ ಆರೋಗ್ಯ ಇಲಾಖೆಯು ಮೃತಳಿಂದ ಸೋಂಕು ತಗುಲಿದೆ? ಅಥವಾ ವಿದೇಶ ಪ್ರವಾಸದಿಂದ ವಾಪಸಾದ ಮೊಮ್ಮಗನಲ್ಲಿ ಹಲವು ದಿನಗಳ ಬಳಿಕ ಸೋಂಕು ಪತ್ತೆಯಾಯಿತೆ? ಅಥವಾ ಬೆಂಗಳೂರಿನ ಆಸ್ಪತ್ರೆಯಲ್ಲಿ ಇತರರಿಂದ ಕುಟುಂಬಸ್ಥರಿಗೆ ಸೋಂಕು ಬಂದೀತೆ? ಎನ್ನುವ ಲೆಕ್ಕಾಚಾರದಲ್ಲಿ ಮಾಹಿತಿ ಸಂಗ್ರಹಿಸಿದ್ದು ಮೃತಳ ದೇಹವನ್ನು ಸುಟ್ಟು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇದರಿಂದ ಆಕೆಗೆ ಸೋಂಕು ದೃಢಪಡಿಸಿಕೊಳ್ಳಲು ಸಾಧ್ಯವಿಲ್ಲ. ಬೆಂಗಳೂರಿನ ಆಸ್ಪತ್ರೆಯಲ್ಲಿನ ಓಡಾಟವೇ ಸೋಂಕಿನ ಮೂಲ ಎಂಬ ನಿರ್ಧಾರಕ್ಕೆ ಆರೋಗ್ಯ ಇಲಾಖೆ ಬಂದಿದೆ ಎನ್ನಲಾಗಿದೆ?

    ಚಿಂತಾಮಣಿಯಲ್ಲಿ ಪತ್ತೆಯಾದ ಸೋಂಕಿನ ಮೂಲ ತಿಳಿಯಲು ತನಿಖೆ ನಡೆಸಲಾಗಿದೆ. ಪ್ರಸ್ತುತ ಬೆಂಗಳೂರಿನ ಆಸ್ಪತ್ರೆಯಿಂದಲೇ ಸೋಂಕು ತಗುಲಿರುವ ಸಾಧ್ಯತೆ ಇದೆ. ಇದರ ಬಗ್ಗೆ ಇನ್ನೂ ವರದಿ ಬರಬೇಕಾಗಿದೆ.
    ಬಿ.ಎಂ.ಯೋಗೀಶ್‌ಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts