More

    ಮಾರುಕಟ್ಟೆಯಲ್ಲಿ ಹೆಚ್ಚಿದ ಜನ ಸಂಚಾರ

    ಕುಮಟಾ: ಲಾಕ್​ಡೌನ್​ನಿಂದ ತಿಂಗಳಾನುಗಟ್ಟಲೆ ಮನೆಯೊಳಗೇ ಬಂಧಿಯಾಗಿ ಬೇಸತ್ತಿರುವ ತಾಲೂಕಿನ ಜನತೆ ಕಳೆದೆರಡು ದಿನಗಳಿಂದ ಪೇಟೆಯೊಳಗೆ ಠಳಾಯಿಸುವುದು ಹೆಚ್ಚಾಗಿದ್ದು ಬಹುತೇಕ ಸ್ತಬ್ಧವಾಗಿದ್ದ ಮಾರುಕಟ್ಟೆ ಪ್ರದೇಶಕ್ಕೆ ಜೀವ ಬಂದಂತಾಗಿದೆ.

    ಲಾಕ್​ಡೌನ್​ನಲ್ಲಿ ಸ್ವಲ್ಪಮಟ್ಟಿನ ಸಡಿಲಿಕೆ ಮಾಡಲಾಗುತ್ತಿದೆ ಎಂಬ ಸುದ್ದಿಗೆ ಖುಷಿಗೊಂಡ ಜನರು ಸೋಮವಾರದಿಂದಲೇ ಪೇಟೆ ಸುತ್ತಾಟ ಆರಂಭಿಸಿದ್ದರು. ಆದರೆ ಪೊಲೀಸರು ಕಟ್ಟುನಿಟ್ಟಿನ ನಿಗಾವಹಿಸಿ ಮಧ್ಯಾಹ್ನ ಹೊತ್ತಿಗೆ ಜನವಾಹನ ಸಂಚಾರವನ್ನು ತಹಬದಿಗೆ ತಂದಿದ್ದರು. ಆದರೆ ಮಂಗಳವಾರ ಬೆಳಿಗ್ಗೆಯಿಂದ ಹಳ್ಳಿಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಹಾಗೂ ಖಾಸಗಿ ವಾಹನಗಳಲ್ಲಿ ಸಾರ್ವಜನಿಕರು ಆಗಮಿಸಿದ್ದಾರೆ. ಪೊಲೀಸರು ಎಷ್ಟೇ ನಿಗಾವಹಿಸಿದರೂ ಒಂದಿಲ್ಲೊಂದು ಒಳರಸ್ತೆಯಲ್ಲಿ ಅಡ್ಡಾಡುವುದು ಕಂಡುಬಂದಿದೆ. ಸುಮ್ಮನೇ ಅಡ್ಡಾಡಲು ಬಂದವರಿಗೆ ಪೊಲೀಸರು ಸಾಕಷ್ಟು ಬಿಸಿ ಮುಟ್ಟಿಸಿದರೂ ಸುಳ್ಳುನೆಪ ಹೇಳಿ ಜನ ಅಡ್ಡಾಡುವುದನ್ನು ತಡೆಯುವುದು ಅಸಾಧ್ಯ ಎಂಬಂತಾಗಿದೆ.

    ಕೋರ್ಟರಸ್ತೆ, ಬಸ್ತಿಪೇಟೆ, ರಥಬೀದಿ, ಕುಂಭೇಶ್ವರ ರಸ್ತೆ, ನೆಲ್ಲಿಕೇರಿ, ಪಿಕಪ್ ನಿಲ್ದಾಣ ರಸ್ತೆ ಮುಂತಾದೆಡೆ ಬಹಳಷ್ಟು ಅಂಗಡಿಕಾರರು ಅರೆಬರೆ ಬಾಗಿಲು ತೆರೆದುಕೊಂಡು ವ್ಯವಹಾರ ನಡೆಸಿದರು. ಕೃಷಿ ಹಾಗೂ ಮೀನುಗಾರಿಕೆ ಚಟುವಟಿಕೆಗಳಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಖರೀದಿಗೆ ಜನರು ಸಂಬಂಧಪಟ್ಟ ಅಂಗಡಿಗಳನ್ನು ಹುಡುಕುತ್ತಾ ಓಡಾಡುತ್ತಿದ್ದರು. ಸರ್ಕಾರ ಹಾಕಿರುವ 500 ರೂ ಮರಳಿ ಹೋಗುತ್ತದೆಂಬ ವದಂತಿ ನಂಬಿ ಹಣ ತೆಗೆಯಲು ಜನಧನ್ ಖಾತೆದಾರರು ಬ್ಯಾಂಕುಗಳೆದುರು ಉದ್ದುದ್ದ ಸಾಲುಗಟ್ಟಿದ್ದರು. ಒಟ್ಟಾರೆ ಪೇಟೆಯಲ್ಲಿ ಲಾಕ್​ಡೌನ್ ನಿಯಯ, ಸಾಮಾಜಿಕ ಅಂತರ ಪಾಲನೆಯನ್ನು ಸಂಪೂರ್ಣ ನಿರ್ಲಕ್ಷಿಸಿದ ದ್ರಶ್ಯಗಳು ಎಲ್ಲೆಲ್ಲೂ ಕಂಡುಬಂದಿವೆ. ಎಪಿಎಂಸಿಯಲ್ಲಿ ಅಡಕೆ ಮಾರಾಟಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ನಾಳೆ ಬುಧವಾರದಿಂದ ಇನ್ನಷ್ಟು ಜನವಾಹನ ಓಡಾಟ ಹೆಚ್ಚಾಗುವ ಸಾಧ್ಯತೆ ಇದೆ.

    ಕಟ್ಟಡ ಸಾಮಗ್ರಿ ದರ ಏರಿಕೆ: ಲಾಕ್​ಡೌನ್ ಸಡಿಲಿಕೆ ಬಳಿಕ ಮಳೆಗಾಲದೊಳಗೆ ಸಾಧ್ಯವಾದಷ್ಟು ನಿರ್ಮಾಣ ಕಾಮಾಗಾರಿಗಳನ್ನು ಮುಗಿಸಿಕೊಳ್ಳುವ ತರಾತುರಿಯಲ್ಲಿ ಪೇಟೆಗೆ ಬಂದರೆ ಸಿಮೆಂಟ್ ದರ ಮೊದಲಿದ್ದ ದರಕ್ಕಿಂತ 50 ರಿಂದ 100 ರೂ ವರೆಗೆ ಏರಿಸಲಾಗಿದೆ. ಕೆಲವೆಡೆ ನಮೂದಿತ ಗರಿಷ್ಟ ದರಕ್ಕಿಂತ ಹೆಚ್ಚು ಹಣಕ್ಕೆ ಮಾರಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮರಳುಗಾರಿಕೆ ಅನುಮತಿಗೆ ಜಿಲ್ಲಾಡಳಿತ ಮುಂದಾಗಿದೆ. ಎಂ.ಸ್ಯಾಂಡ್​ಗೂ ಬಹಳ ಬೇಡಿಕೆ ಇದೆ. ಇದೆಲ್ಲವೂ ಮೊದಲಿದ್ದ ಬೆಲೆಯಿಂದ ನೂರಿನ್ನೂರು ರೂ. ಹೆಚ್ಚಾಗುವುದು ಖಚಿತ. ಸಾಮಗ್ರಿಗಳ ಸಾರಿಗೆ ದರವೂ ದುಬಾರಿ ಎನ್ನುತ್ತಿದ್ದಾರೆ ಸಾರ್ವಜನಿಕರು.

    ಇಲ್ಲಿನ ಸಿಮೆಂಟ್ ವ್ಯಾಪಾರಸ್ಥರು ಪ್ರತಿ ಚೀಲಕ್ಕೆ 100 ರೂ ಜಾಸ್ತಿ ಮಾಡಿ ಗ್ರಾಹಕರಿಗೆ ಬರೆ ಎಳೆದಿದ್ದಾರೆ. ನೂರಾರು ಮನೆಗಳು ಅರೆಬರೆಯಾಗಿ ನಿಂತಿವೆ. ಮಳೆಬರುವುದರೊಳಗೆ ಮನೆ ಕಟ್ಟಿಕೊಳ್ಳುವ ಬಯಕೆ ಕೇವಲ ಕನಸು ಎಂಬಂತಾಗಿದೆ. | ವಸಂತ ನಾಯ್ಕ ಬಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts