More

    ಮಹಿಳೆಗೆ ಕರೊನಾ ಸೋಂಕು

    ಲಕ್ಷ್ಮೇಶ್ವರ: ಜಿಲ್ಲೆಯಲ್ಲಿ ಮಂಗಳವಾರ ಮತ್ತೊಂದು ಕರೊನಾ ವೈರಸ್ ಸೋಂಕು ದೃಢಪಟ್ಟಿದೆ. ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರೆಂಟೈನ್​ನಲ್ಲಿದ್ದ 49 ವರ್ಷದ ಮಹಿಳೆಗೆ (ಪಿ-1307) ಸೋಂಕು ತಗುಲಿರುವುದು ದೃಢಪಟ್ಟಿದೆ.

    ಮೂಲತಃ ಬಾಗಲಕೋಟೆ ಬದಾಮಿ ಜಿಲ್ಲೆಯ ಬೇಲೂರಿನವರಾದ ಸೋಂಕಿತ ಮಹಿಳೆಯು ಪತಿ ಮತ್ತು ಮಗನೊಂದಿಗೆ ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮಗಳ ಮದುವೆ ಆಗಿದ್ದು, ತಾಲೂಕಿನ ಸೂರಣಗಿ ಗ್ರಾಮದಲ್ಲಿ ವಾಸವಾಗಿದ್ದರು. ಮಗಳು ಗರ್ಭಿಣಿಯಾಗಿದ್ದರಿಂದ ಹೆರಿಗೆಗಾಗಿ ಮುಂಬೈಗೆ ಕರೆದುಕೊಂಡು ಹೋಗಿದ್ದರು. ಫೆ. 24ರಂದು ಹೆರಿಗೆಯಾಗಿದೆ. ಮುಂಬೈನಲ್ಲಿ ಕರೊನಾ ಭೀತಿ ಹೆಚ್ಚಾಗಿದ್ದರಿಂದ ರಾಜ್ಯದಲ್ಲಿ ಲಾಕ್​ಡೌನ್ ಸಡಿಲಿಕೆ ಘೊಷಣೆಯಾಗುತ್ತಿದ್ದಂತೆಯೇ ಮಗಳನ್ನು ಸೂರಣಗಿ ಗ್ರಾಮಕ್ಕೆ ಬಿಟ್ಟು ಬರಲು ಪತಿ ಮತ್ತು ಮಗನೊಂದಿಗೆ ಆಗಮಿಸಿದ್ದಾರೆ. ಮೇ 15ರಂದು ಸೂರಣಗಿಗೆ ಹೋಗುವ ಮೊದಲು ಲಕ್ಷ್ಮೇಶ್ವರಕ್ಕೆ ಆಗಮಿಸಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ. ಮುಂಬೈನಿಂದ ಬಂದಿದ್ದರಿಂದ ಇವರೆಲ್ಲರನ್ನೂ ಜಿಲ್ಲಾಡಳಿತದ ಸೂಚನೆಯಂತೆ ತಾಲೂಕಾಡಳಿತ ಇಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್​ನಲ್ಲಿರಿಸಿ ಅವರ ಗಂಟಲ ದ್ರವ ಮಾದರಿಯನ್ನು ಗದಗ ಜಿಮ್ಸ್​ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು.

    ಕೂಸು ಸೇರಿ ಮುಂಬೈನಿಂದ ಬಂದ ಐವರಲ್ಲಿ ನಾಲ್ವರ ವರದಿ ನೆಗೆಟಿವ್ ಬಂದಿದ್ದು, ಮಹಿಳೆಗೆ ಮಾತ್ರ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕು ಪತ್ತೆಯಾಗುತ್ತಿದ್ದಂತೆಯೇ ಜಿಲ್ಲಾ ಆರೋಗ್ಯ ಇಲಾಖೆ, ತಾಲೂಕಾಡಳಿತ ಕ್ವಾರಂಟೈನ್​ಗೆ ಭೇಟಿ ನೀಡಿ ಸೋಂಕಿತೆಯ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿರುವ ಸೂರಣಗಿಯ ಅಳಿಯ ಸೇರಿ ಒಟ್ಟು 8 ಜನರ ರಕ್ತ ಮತ್ತು ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಸುಭಾಸ ದಾಯಗೊಂಡ, ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಗಿರೀಶ ಮರಡ್ಡಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು 18 ಜನರಲ್ಲಿ ಕರೊನಾ ವೈರಸ್ ಪತ್ತೆಯಾಗಿದೆ. ಇದರಲ್ಲಿ ಒಬ್ಬರು ಮೃತಪಟ್ಟಿದ್ದು, ಐವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 12 ಸಕ್ರಿಯ ಪ್ರಕರಣಗಳಿವೆ. ಸೋಂಕಿತರಿಗೆ ಗದಗ ನಿಗದಿತ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts