More

    ಮಹಾಮಾರಿ ತಡೆಗೆ ನೋಡಲ್ ಅಧಿಕಾರಿಗಳ ನೇಮಕ

    ಮುಂಡರಗಿ: ಕರೊನಾ ನಿಯಂತ್ರಣಕ್ಕಾಗಿ ತಾಲೂಕಿನ ಆಯಾ ಗ್ರಾ.ಪಂ. ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಹಳ್ಳಿಕೇರಿ, ಕದಾಂಪುರ, ಶಿಂಗಟರಾಯನ ಕೇರಿ ತಾಂಡಾ ಮತ್ತು ಕೊರ್ಲಹಳ್ಳಿ ಸೇರಿ ಒಟ್ಟು ನಾಲ್ಕು ಕಡೆ ಚೆಕ್​ಪೋಸ್ಟ್ ತೆರೆಯಲಾಗಿದೆ ಎಂದು ತಹಸೀಲ್ದಾರ್ ಡಾ.ವೆಂಕಟೇಶ ನಾಯಕ ತಿಳಿಸಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾ ಭವನದಲ್ಲಿ ಶಾಸಕ ರಾಮಣ್ಣ ಲಮಾಣಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಸ್ವಚ್ಛತೆಗೆ ಕಾಳಜಿ ವಹಿಸಬೇಕು. ಮನೆಯಿಂದ ಹೊರ ಬರದೆ ಮನೆಯಲ್ಲಿಯೇ ಇರಬೇಕು ಎಂದು ತಿಳಿಸಿದರು. ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಕೊರತೆ ಹೆಚ್ಚಿದೆ. ಆದ್ದರಿಂದ ಕೊರತೆ ನೀಗಿಸಬೇಕು ಎಂದು ಶಾಸಕ ಲಮಾಣಿ ಅವರಿಗೆ ಮನವಿ ಮಾಡಿಕೊಂಡರು. ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಕರೊನಾ ವೈರಸ್ ತಡೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.

    ತಾ.ಪಂ. ಇಒ ಎಸ್.ಎಸ್. ಕಲ್ಮನಿ, ತಾಲೂಕು ವೈದ್ಯಾಧಿಕಾರಿ ಬಸವರಾಜ ಕೆ, ಮುಖ್ಯಾಧಿಕಾರಿ ಎಸ್.ಎಚ್. ನಾಯ್ಕರ, ಮುಖಂಡ ಕರಬಸಪ್ಪ ಹಂಚಿನಾಳ ಮಾತನಾಡಿದರು. ಎಪಿಎಂಸಿ ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ, ಬಿಜೆಪಿ ಮುಂಡರಗಿ ಮಂಡಳ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿ:

    ನರೇಗಲ್ಲ: ಕರೊನಾ ವೈರಸ್ ಹಿನ್ನೆಲೆಯಲ್ಲಿ ಸೋಮವಾರ ಜಿ.ಪಂ. ಉಪಾಧ್ಯಕ್ಷೆ ಮಲ್ಲಮ್ಮ ಬಿಚ್ಚೂರ, ಸದಸ್ಯೆ ರೂಪಾ ಅಂಗಡಿ ನರೇಗಲ್ಲ, ಅಬ್ಬಿಗೇರಿ, ಕುರುಡಗಿ, ಸವಡಿ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಮತ್ತು ಹೊರ ಜಿಲ್ಲೆಗಳಿಂದ ಬಂದ ಜನರ ಬಗ್ಗೆ ವಿಚಾರಿಸಿ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

    ಜಿ.ಪಂ. ಉಪಾಧ್ಯಕ್ಷೆ ಮಲ್ಲಮ್ಮ ಬಿಚ್ಚೂರ ಮಾತನಾಡಿ, ಅಂಗನವಾಡಿ, ಆಶಾ ಕಾರ್ಯಕರ್ತೆರು, ಗ್ರಾ.ಪಂ. ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಪ್ರತಿಯೊಂದು ಮನೆಗೆ ತೆರಳಿ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸಬೇಕು ಎಂದರು.

    ಜಿ.ಪಂ. ಸದಸ್ಯೆ ರೂಪಾ ಅಂಗಡಿ ಮಾತನಾಡಿ, ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮೊದಲು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಹೀಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಯಾವುದೇ ನಿರ್ಲಕ್ಷ್ಯ ತೋರಬೇಡಿ ಎಂದು ಸೂಚಿಸಿದರು.

    ನರೇಗಲ್ಲ ಪಟ್ಟಣಕ್ಕೆ ಕರೊನಾ ವೈರಸ್ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದ ಒಟ್ಟು 452 ಜನ, ಅಬ್ಬಿಗೇರಿ ಗ್ರಾಮಕ್ಕೆ 109 ಜನ, ಕುರುಡಗಿ, ಯರೇಬೇಲೇರಿ, ನಾಗರಾಳ ಮೂರು ಗ್ರಾಮಗಲ್ಲಿ 80 ಜನ, ಸವಡಿ ಗ್ರಾಮಕ್ಕೆ 57 ಜನ ಗುಳೆ ಹೋದವರು ಮರಳಿ ಗ್ರಾಮಕ್ಕೆ ಬಂದಿದ್ದಾರೆ. ಇವರನ್ನು ಗುರುತಿಸಿ ಪ್ರಾಥಮಿಕ ಪರೀಕ್ಷೆ ಕೈಗೊಳ್ಳಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದರು.

    ಕರೊನಾ ತಡೆಗೆ ಹಳ್ಳಿಗಳತ್ತಲೂ ಚಿತ್ತಹರಿಸಿ

    ಲಕ್ಷ್ಮೇಶ್ವರ: ಕರೊನಾ ತಡೆಗಟ್ಟಲು ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಸರ್ಕಾರ ಮತ್ತು ಅಧಿಕಾರಿಗಳು ನೀಡುವ ಪ್ರಾಶಸ್ತ್ಯನ್ನೇ ಹಳ್ಳಿಗಳಿಗೂ ಕೊಡಬೇಕು ಎಂದು ಅರಣ್ಯ ಕೈಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಟಿ. ಈಶ್ವರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ನಗರ ಪ್ರದೇಶಗಳಲ್ಲಿನ ಶೇ. 30ರಷ್ಟು ಜನರು ಮಾತ್ರ ಲಾಕ್​ಡೌನ್ ಘೊಷಣೆ ಪಾಲಿಸುತ್ತಿದ್ದಾರೆ. ಆದರೆ ಶೇ. 70ರಷ್ಟು ಗ್ರಾಮೀಣ ಪ್ರದೇಶಗಳ ಜನರು ಇದಾವುದೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ದುಡಿಯಲು ಅಂತಾರಾಜ್ಯ, ಜಿಲ್ಲೆಗಳಿಗೆ ಹೋದವರು ಈಗ ಸ್ವಗ್ರಾಮಗಳಿಗೆ ವಾಪಸಾಗುತ್ತಿದ್ದು, ಅವರಿಗೆ ಸರಿಯಾದ ಆರೋಗ್ಯ ಚಿಕಿತ್ಸೆ, ತಿಳಿವಳಿಕೆ, ನಿಗಾ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಪತ್ರಿಕೆಯಿಂದ ಕರೋನಾ ಬರಲ್ಲ: ಪತ್ರಿಕೆಗಳಿಂದ ಕರೊನಾ ವೈರಸ್ ಹರಡಲ್ಲ. ಸರ್ಕಾರ ಪತ್ರಿಕೆಗಳನ್ನು ಅವಶ್ಯಕ ವಸ್ತುಗಳಲ್ಲೊಂದು ಎಂದು ಸಾರಿದ್ದು, ಮುದ್ರಣಕ್ಕೆ ಬೇಕಾದ ಕಚ್ಚಾ ಸಾಮಗ್ರಿ, ಸಹಾಯ, ಸಹಕಾರ ನೀಡಬೇಕು ಎಂದಿದ್ದಾರೆ. ಪರಿಸ್ಥಿತಿಯ ಬಗ್ಗೆ ಪೊಲೀಸ್, ಇಂಟಲಿಜೆನ್ಸಿ, ಆರೋಗ್ಯ ಮತ್ತು ಮಾಧ್ಯಮ ವಲಯದಿಂದ ಕೇಳಿ ಬಂದ ಪ್ರಕಾರ ಸರ್ಕಾರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಹಳ್ಳಿಗಳತ್ತಲೂ ಗಮನ ಹರಿಸಬೇಕು. ಗತ್ಯ ಮುಂಜಾಗದ್ರತೆ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆ ಹೆಚ್ಚಿದೆ ಎಂಬ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಅರೆಮಿಲಿಟರಿ ಪಡೆ, ಮೀಸಲು ಪೊಲೀಸ್, ಎನ್​ಸಿಸಿ, ಸ್ಕೌಟ್​ಗೈಡ್ಸ್ ತರಬೇತಿದಾರರು, ಸ್ಥಳೀಯ ಗ್ರಾಪಂ ಸಿಬ್ಬಂದಿಯನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

    ಗುಣಮಟ್ಟಕ್ಕೆ ಆದ್ಯತೆ ನೀಡಿ

    ಮುಂಡರಗಿ: ಪಟ್ಟಣದ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕೆ ಕೇಂದ್ರಕ್ಕೆ (ಎಂ.ಎಸ್.ಪಿ.ಸಿ) ತಹಸೀಲ್ದಾರ್ ಡಾ.ವೆಂಕಟೇಶ ನಾಯಕ ಹಾಗೂ ತಾ.ಪಂ. ಇಒ ಎಸ್.ಎಸ್. ಕಲ್ಮನಿ ಅವರು ಭೇಟಿ ನೀಡಿ ಪರಿಶೀಲಿಸಿದರು.

    ಅಂಗನವಾಡಿ ಕೇಂದ್ರಗಳಿಂದ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಪೂರೈಸುವ ಆಹಾರ ಗುಣಮಟ್ಟದಿಂದ ಕೂಡಿರಬೇಕು. ಆಹಾರ ತಯಾರಿಕೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ನಿತ್ಯ ಬೆಳಗ್ಗೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬರಬೇಕು. ಮಾಸ್ಕ್ ಮತ್ತು ಹ್ಯಾಂಡ್​ಗ್ಲೌಸ್ ಹಾಕಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. ಸಿಡಿಪಿಒ ಎಚ್.ಎಸ್. ಜೋಗೇರ ಮಾತನಾಡಿ, ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಪ್ರತಿ ಅಂಗನವಾಡಿ ಕೇಂದ್ರಕ್ಕೆ ಆಹಾರ ಪೂರೈಕೆ ಮಾಡುವಂತೆ ಕಾಳಜಿ ವಹಿಸಿ ಕೆಲಸ ನಿರ್ವಹಿಸಬೇಕು. ಆರೋಗ್ಯ ಬಗ್ಗೆ ಕಾಳಜಿ ಹೊಂದಬೇಕು ಎಂದು ತಿಳಿಸಿದರು.

    ವೈದ್ಯರಿಗೆ, ಪೊಲೀಸ್ ಸಿಬ್ಬಂದಿಗೆ ಊಟ

    ಡಂಬಳ: ಗ್ರಾಮದ ಭೀಮಾಂಬಿಕಾ ಪೆಟ್ರೋಲ್ ಬಂಕ್​ನ ಮಾಲೀಕ ರಾಕೇಶ ಅಡವಿ ಅವರು ಕರೊನಾ ವೈರಸ್ ರೋಗ ತಡೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವವರಿಗೆ ಭಾನುವಾರ ಊಟದ ವ್ಯವಸ್ಥೆ ಮಾಡಿದರು.ಕದಾಂಪೂರ, ಮುಂಡರಗಿ ಚೆಕ್​ಪೋಸ್ಟ್​ನಲ್ಲಿರುವ ವೈದ್ಯರಿಗೆ, ಪೊಲೀಸ್ ಸಿಬ್ಬಂದಿಗೆ, ಕದಾಂಪೂರ, ಮೇವುಂಡಿ, ಡಂಬಳ ಪಿಡಿಒ ಹಾಗೂ ಗ್ರಾಪಂ ಸಿಬ್ಬಂದಿಗೆ, ಡಂಬಳ ಹೊರ ಪೊಲೀಸ್ ಠಾಣೆಯ ಸಿಬ್ಬಂದಿಗೆ ಊಟ, ಮಜ್ಜಿಗೆ ಹಾಗೂ ನೀರಿನ ಬಾಟಲಿಗಳನ್ನು ವಿತರಿಸಿದರು. ತಾಪಂ ಇಒ ಎಸ್.ಎಸ್. ಕಲ್ಮನಿ, ಎಂ.ಎನ್. ಹಾರೂಗೇರಿ, ಗ್ರಾಪಂ ಅಧ್ಯಕ್ಷ ಬಸವರಾಜ ಗಂಗಾವತಿ, ಎಎಸ್​ಐ ಐ.ಪಿ. ಕೆರಿಮನಿ, ಬಸವರಾಜ ಬೇವಿನಮರದ ಇದ್ದರು.

    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಾಗೃತಿ

    ಡಂಬಳ: ಕರೊನಾ ಸೋಂಕು ಹರಡುವುದನ್ನು ತಪ್ಪಿಸಲು ಮಾಸ್ಕ್ ಧರಿಸಬೇಕು ಎಂದು ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಲಾಯಿತು. ಆರೋಗ್ಯ ಸಹಾಯಕಿ ಎಂ.ಎನ್. ಚಿತಗುಂಟಿ ಮಾತನಾಡಿ, ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಜ್ವರ, ಕೆಮ್ಮು, ನೆಗಡಿ, ಉಸಿರಾಟ ತೊಂದರೆ ಕಂಡು ಬಂದರೆ ತಕ್ಷಣ ಸಮೀಪದ ತಾಲೂಕು ಇಲ್ಲವೆ ಜಿಲ್ಲಾಸ್ವತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು ಎಂದರು. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.

    ಅಂಗಡಿ ಮುಂಗಟ್ಟು ಬಂದ್: ಲಾಕ್​ಡೌನ್ ಹಿನ್ನ್ನೆಲೆ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮಂಗಳವಾರ ಸ್ವಯಂಪ್ರೇರಿತರಾಗಿ ಅಂಗಡಿ, ಹೋಟೆಲ್ ಬಂದ್ ಮಾಡಿದ್ದರು. ಡಂಬಳ ಗ್ರಾಪಂನಿಂದ ಗ್ರಾಮದ ಕೆಲ ಸಾರ್ವಜನಿಕ ಸ್ಥಳಗಳಲ್ಲಿ ಕರೊನಾ ವೈರಸ್ ತಿಳಿವಳಿಕೆ ನೋಟಿಸ್ ಅಂಟಿಸುವುದರಿಂದ ಗುಂಪು ಗುಂಪಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸೇರುವುದಕ್ಕೆ ಕಡಿವಾಣ ಹಾಕಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts